Advertisement

ಎಲ್ಲೆಲ್ಲು ಸಂಗೀತವೇ…ಎಲ್ಲೆಲ್ಲೂ ಸೌಂದರ್ಯವೇ…! ಸಾಂಸ್ಕೃತಿಕ ಲೋಕಕ್ಕೆ ವಿಶ್ವ ಜಾಂಬೂರಿಯ ಬಂಗಾರದ ಕಲಶ

11:39 PM Dec 21, 2022 | Team Udayavani |

ಮೂಡುಬಿದಿರೆ ಆಳ್ವಾಸ್‌ ಜಾಂಬೂರಿ: ಒಂದೆಡೆ ಸಂಗೀತ… ನಾಟ್ಯ ಪ್ರಕಾರವಾದರೆ, ಮತ್ತೂಂದೆಡೆ ಕಲಾ ಕೌಶಲ್ಯದ ಕಸರತ್ತುಗಳು; ಇನ್ನೊಂದೆಡೆ ಊರು-ಪರವೂರಿನ ವಿದ್ಯಾರ್ಥಿಗಳ ಆಟ-ಕೂಟ ಓಡಾಟದ ವಿನೋದಾವಳಿಗಳು; ಮಗದೊಂದೆಡೆ ಊಟ-ತಿಂಡಿಯ ಸಂಭ್ರಮವಾದರೆ, ಸಂಜೆಯಾಗುತ್ತಲೇ ಬೆಳಕಿನ ಅವರ್ಣಿàಯ ಸೊಬಗಿನಲ್ಲಿ ಕಂಗೊಳಿಸುವ ಶಿಕ್ಷಣ ಕಾಶಿಯ ಅಮೋಘ ನೋಟ!

Advertisement

ಸಂಸ್ಕೃತಿ-ಸಾಂಸ್ಕೃತಿಕ ಮನವೆಲ್ಲ ಒಂದೆಡೆ ಜತೆಯಾಗಿ ಸಮ್ಮಿಲನಗೊಂಡು ಮೂಡುಬಿದಿರೆಯ ಸೊಬಗಿನ ಕಿರೀಟಕ್ಕೆ ನವಿಲುಗರಿಯನ್ನು ಜೋಡಿಸಿಟ್ಟಂತೆ ಭಾಸವಾಗುತ್ತಿದೆ ವಿಶ್ವ ಜಾಂಬೂರಿ.

ಕನ್ನಡ ನಾಡುನುಡಿಯ ಸಾಹಿತ್ಯ ಸಂಭ್ರಮದ ಮುಖೇನ ನಾಡಿನಾದ್ಯಂತ ಕನ್ನಡ ಕಂಪು ಪಸರಿಸಿದ ಶಿಕ್ಷಣಕಾಶಿ ಮೂಡುಬಿದಿರೆ ಇದೀಗ ಒಂದು ವಾರದ ಸಾಂಸ್ಕೃತಿಕ ವೈಭೋಗಕ್ಕೆ ತೆರೆದುಕೊಂಡಿದೆ. ದೇಶ, ವಿದೇಶದ ಸಾವಿರಾರು ವಿದ್ಯಾರ್ಥಿಗಳ ಸಮಾಗಮ, ಸಾಂಸ್ಕೃತಿಕ ವಿನೋದಾವಳಿಯ ಮುಖೇನ ಜೈನಕಾಶಿಯೂ ಆದ ಮೂಡುಬಿದಿರೆಯ ಆಳ್ವಾಸ್‌ ಕ್ಯಾಂಪಸ್‌ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ.

ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ವಿಶ್ವ ಜಾಂಬೂರಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸುವಲ್ಲಿ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಪ್ರಮುಖರು, ಆಳ್ವಾಸ್‌ ಶಿಕ್ಷಣ ಸಂಸ್ಥೆ ನಡೆಸಿರುವ ತಿಂಗಳುಗಟ್ಟಲೆಯ ಶ್ರಮ ಪ್ರತಿಫಲ ನೀಡಿದೆ. ಊರು-ಪರವೂರಿನ ಸಾವಿರಾರು ಮಂದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡು ಮುಂದಿನ ಒಂದು ವಾರದ ಊಟ-ಉಪಚಾರ ಸಹಿತ ವಾಸ್ತವ್ಯದ ನೆಲೆಯಲ್ಲಿ ಆದರಾತಿಥ್ಯ ನೀಡಿದ ಪರಿಕಲ್ಪನೆ ಎಂತವರನ್ನೂ ಬೆರಗುಗೊಳಿಸದೆ ಇರದು!

ಸಾಂಸ್ಕೃತಿಕ ಸಡಗರವೇ ಸೊಬಗು
ಪುತ್ತಿಗೆಯಲ್ಲಿ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಸಂಜೆ ಸಾಂಸ್ಕೃತಿಕ ಮೆರವಣಿಗೆ, ಬಳಿಕ ಉದ್ಘಾಟನ ಸಮಾರಂಭದ ಮೂಲಕ ವಿಶ್ವ ಜಾಂಬೂರಿಗೆ ಚಾಲನೆ ದೊರೆಯಿತು.
ಅದಕ್ಕೂ ಮುನ್ನವೇ ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಆತ್ರೇಯ ಕೃಷ್ಣ ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ಉದಯ್‌ ಕುಲಕರ್ಣಿ ಬಳಗದಿಂದ ತಬಲಾ ಪಂಚಕ, ಆದಿತಿ, ಅರುಂಧತಿ ಬಳಗದಿಂದ ದ್ವಂದ್ವ ಪಿಟೀಲು ವಾದನ, ಕೊಟ್ರೇಶ್‌ ಕೂಡ್ಲಿಗಿ, ಮಿಮಿಕ್ರಿ ಗೋಪಿ ತಂಡದಿಂದ ಕನ್ನಡ ಹಾಸ್ಯ, ಸಂಜೆ ಉಸ್ತಾದ್‌ ಫಯಾಜ್‌ ಖಾನ್‌ ಬಳಗದಿಂದ ಹಿಂದೂಸ್ತಾನಿ ಗಾಯನ, ವಿದುಷಿ ಯಶ ರಾಮಕೃಷ್ಣ ಅವರಿಂದ ಹೆಜ್ಜೆ ಗೆಜ್ಜೆ, ರಾತ್ರಿ ವಿದ್ವಾನ್‌ ಯು.ಕೆ. ಪ್ರವೀಣ್‌ ಅವರಿಂದ ನರ್ತನ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

Advertisement

ನಾಟ್ಯ ಸಿಂಚನ, ನೃತ್ಯ ವೈವಿಧ್ಯ
ನುಡಿಸಿರಿ ವೇದಿಕೆಯಲ್ಲಿ ಬೆಳಗ್ಗೆ 10ರಿಂದ ಬಸವರಾಜ್‌ ವಂದಲಿ ಬಳಗದಿಂದ ಲಘು ಶಾಸ್ತ್ರೀಯ ಸಂಗೀತ, ಅದಿತಿ ಪ್ರಹ್ಲಾದ್‌ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ಶೃಂಗೇರಿ ಸುಧನ್ವ ಬಳಗದಿಂದ ಭಜನ ಕುಸುಮ, ಶ್ರೇಯಾ ಕೊಳತ್ತಾಯ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ಸಂಜೆ ಕುಮಾರ್‌ ಮರ್ಡೂರ್‌ ಬಳಗದಿಂದ ಹಿಂದೂಸ್ತಾನಿ ಗಾಯನ, ವಿದ್ವಾನ್‌ ಬಾಲಕೃಷ್ಣ ಮಂಜೇಶ್ವರ ನಿರ್ದೇಶನದ ನಾಟ್ಯ ಸಿಂಚನ, ವಿದುಷಿ ಚೇತನಾ ರಾಧಾಕೃಷ್ಣ ತಂಡದಿಂದ ನೃತ್ಯ ವೈವಿಧ್ಯ ನಡೆಯಿತು. ಪ್ಯಾಲೇಸ್‌ ಗ್ರೌಂಡ್‌ನ‌ಲ್ಲಿ ಸಂಜೆ ಶಂಕರ್‌ ಶಾನುಭೋಗ್‌ ಬಳಗದಿಂದ ಕನ್ನಡ ಡಿಂಡಿಮ ಆಕರ್ಷಣೆಗೆ ಕಾರಣವಾಯಿತು.

ಕೃಷಿಯೊಳಗೆ ಸಾಂಸ್ಕೃತಿಕ ಸಿರಿ!
ವಿಶ್ವಜಾಂಬೂರಿಗೆ ಕಳೆಗಟ್ಟಿದ್ದು ಕೃಷಿ ಮೇಳ. ನಾನಾ ತರದ ಕೃಷಿ ಲೋಕವನ್ನು ಇಲ್ಲಿ ಪರಿಚಯಿಸಲಾಗಿದೆ. ಎಲ್ಲವೂ ಅದ್ಭುತ ಅನುಭವ. ಇದನ್ನು ಕಣ್ತುಂಬಿಕೊಳ್ಳುತ್ತಲೇ ಪಕ್ಕದಲ್ಲೇ ಕೃಷಿ ಸಿರಿ ವೇದಿಕೆಯಲ್ಲಿ ಕೇಳಿಬರುತ್ತಿದ್ದ ಒಂದೊಂದು ಕಾರ್ಯಕ್ರಮವೂ ನೋಡುಗರನ್ನು ಮಂತ್ರ ಮುಗ್ಧಗೊಳಿಸಿದಂತಿತ್ತು. ಬೆಳಗ್ಗೆ 10ರಿಂದ ರುದ್ರೇಶ್‌ ಬಳಗದಿಂದ ಶಹನಾಯ್‌ ವಾದನ, ಎಸ್‌.ಎಸ್‌. ಹಿರೇಮಠ ತಂಡದಿಂದ ರಂಗಗೀತೆ, ಸುಬ್ರಹ್ಮಣ್ಯ ಧಾರೇಶ್ವರ ಸಂಯೋಜನೆಯಲ್ಲಿ ಬಡಗುತಿಟ್ಟು ಯಕ್ಷಗಾನ ಸಿರಿ, ಸಂಜೆ ಫ್ರೆಂಡ್ಸ್‌ ಮಂಗಳೂರು-ಪ್ರಶಂಸಾ ಕಾಪು ತಂಡದಿಂದ ತುಳು ಹಾಸ್ಯ, ಜೈನ್‌ ಬೀಟ್‌ ಶ್ರವಣಬೆಳಗೋಳ ಅವರಿಂದ ಪುನೀತ ನಮನ ನಡೆಯಿತು. ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಸಂಜೆ ಪ್ರಮೋದ್‌ ಸಪ್ರ ಅವರಿಂದ ಸುಗಮ ಸಂಗೀತ ವೈಭವ ನಡೆಯಿತು.

ಸಂತೆಯ ಗೌಜಿ-ಜನಜಾತ್ರೆ
ವಿಶ್ವಜಾಂಬೂರಿ ಜನಜಾತ್ರೆಯಾಗಿ ಪರಿವರ್ತನೆಗೊಂಡಿದೆ. ಎಲ್ಲೆಲ್ಲೂ ಜನರೇ ಇದ್ದಾರೆ. ಅದರಲ್ಲಿಯೂ ಕೃಷಿ ಸಿರಿ ಸಹಿತ ವಿವಿಧ ಕಡೆಯಲ್ಲಿ ಜನರು ತಂಡೋಪತಂಡವಾಗಿ ಭಾಗವಹಿಸಿದ್ದಾರೆ. ಇಲ್ಲಿ ಬೇರೆ ಬೇರೆ ಕಡೆಗಳಲ್ಲಿ ವಿವಿಧ ವಿಶೇಷತೆಗಳು ಇರುವುದರಿಂದ ಹೋದಷ್ಟು -ನೋಡಿದಷ್ಟು ಮುಗಿಯುವುದಿಲ್ಲ! ಈ ಮಧ್ಯೆ, ರಾಜ್ಯದ ವಿವಿಧ ಭಾಗಗಳಿಂದ ಸಂತೆ ವ್ಯಾಪಾರಸ್ಥರು ಬಂದಿದ್ದು ಭರ್ಜರಿ ವ್ಯಾಪಾರವೂ ನಡೆಯುತ್ತಿದೆ.

ಉರಿಬಿಸಿಲಿನಲ್ಲೂ ಮಕ್ಕಳ ಉಲ್ಲಾಸ
ಬುಧವಾರ ಬೆಳಗ್ಗಿನಿಂದ ಸಂಜೆಯವರೆಗೆ ವಿದ್ಯಾರ್ಥಿಗಳು ವಿವಿಧ ತರಬೇತಿಗಳಲ್ಲಿ ಪಾಲ್ಗೊಂಡರು. ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಪಥಸಂಚಲನ ಸಹಿತ ವಿವಿಧ ಅಭ್ಯಾಸ ನಡೆಸಿದರು. ಉರಿಬಿಸಿಲು ಇದ್ದರೂ ಕೊಂಚವೂ ದಣಿವು ಮಾಡದೆ ಮಕ್ಕಳು ಶಿಸ್ತಿನಿಂದ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು ವಿಶೇಷವಾಗಿತ್ತು. ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದರು.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next