Advertisement

ಆಳ್ವಾಸ್‌ ಕಾಲೇಜು: 2,406 ಮಂದಿಗೆ ಪದವಿ ಪ್ರದಾನ

03:38 AM May 05, 2019 | Sriram |

ಮೂಡುಬಿದಿರೆ: “ಪೋಷಕರ ತ್ಯಾಗ, ವಾತ್ಸಲ್ಯ, ಗುರುಗಳ ಮಾರ್ಗದರ್ಶನ, ಒಡನಾಡಿಗಳ ಸ್ನೇಹ ಮರೆಯದೆ, ಪರಿಶ್ರಮ, ನೈತಿಕತೆ, ಸಮಾಜಋಣ ತೀರಿಸುವ ಮನೋಭಾವದಿಂದ ಸಾಧಕರಾಗಲು ಪ್ರಯತ್ನಿಸಿರಿ’ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೈಸ್‌ಛಾನ್ಸೆಲರ್‌ ಡಾ| ಸಚ್ಚಿದಾನಂದ್‌ ನೂತನ ಪದವೀಧರರಿಗೆ ಕರೆನೀಡಿದರು.

Advertisement

ವಿದ್ಯಾಗಿರಿಯ ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ನಡೆದ, ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ನ 2019ರ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜೀವನದಲ್ಲಿ ಶ್ರೇಷ್ಠತೆ ಸಾಧಿಸಲು ಅನ್ಯರೊಂದಿಗೆ ತುಲನೆ ಮಾಡುವುದೇನೋ ಸರಿ; ಆದರೆ ಎಂದಿಗೂ ಋಣಾತ್ಮಕ ಚಿಂತನೆ ಸಲ್ಲದು. ಕೀಳರಿಮೆ ಕೂಡದು. ಪ್ರತಿಯೊಬ್ಬರಿಗೂ ಬೆಳೆಯುವ, ಬೆಳಗುವ ಎಲ್ಲ ಅವಕಾಶಗಳಿವೆ ಎಂದರು.

ರಾಷ್ಟ್ರಮಟ್ಟದ ಕ್ರೀಡೋತ್ಸವ,
ಸಾಂಸ್ಕೃತಿಕ ಉತ್ಸವ
ಮುಂದಿನ ಸಾಲಿನಲ್ಲಿ ನಡೆಯ ಲಿರುವ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ರಜತ ಸಂಭ್ರಮದಂಗವಾಗಿ ರಾಷ್ಟ್ರ ಮಟ್ಟದ ಕ್ರೀಡೋತ್ಸವ, ಸಾಂಸ್ಕೃತಿಕ ಉತ್ಸವ ನಡೆಸಲು ಆಳ್ವಾಸ್‌ ಮುಂದೆ ಬರಬೇಕು’ ಎಂದು ಡಾ| ಸಚ್ಚಿದಾನಂದ್‌ ಅವರು ವಿನಂತಿಸಿದರು.

ರಾಜೀವ್‌ ಗಾಂಧಿ ವಿ.ವಿ.ಯ 388 ಮಂದಿ, ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯ 620, ಮಂಗಳೂರು ವಿ.ವಿ.ಯ 1,398 ಮಂದಿ ಹೀಗೆ ಆಳ್ವಾಸ್‌ ಶಿಕ್ಷಣಾಲಯಗಳ 2,406 ಮಂದಿ ಯಶಸ್ವಿ ವಿದ್ಯಾರ್ಥಿಗಳಿಗೆ ಆಳ್ವಾಸ್‌ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು.

Advertisement

ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮ್ಯಾನೇಜಿಂಗ್‌ ಟ್ರಸ್ಟಿ ಎಂ. ವಿವೇಕ್‌ ಆಳ್ವ, ಟ್ರಸ್ಟಿಗಳಾದ ಅಮರನಾಥ ಶೆಟ್ಟಿ, ಜಯಶ್ರೀ ಎ. ಶೆಟ್ಟಿ, ವಿವಿಧ ಕಾಲೇಜುಗಳ ಪ್ರಾಚಾರ್ಯರು ವೇದಿಕೆಯಲ್ಲಿದ್ದರು.

ಆಳ್ವಾಸ್‌ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್‌ ಸ್ವಾಗತಿಸಿ, ಬಿಎಂಎಲ್‌ಟಿ ಪ್ರಾಚಾರ್ಯ ಡಾ| ವರ್ಣನ್‌ ಡಿ’ಸಿಲ್ವ ವಂದಿಸಿದರು. ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕಿ ಸ್ತುತಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next