Advertisement

ರಿಕ್ಷಾ ಚಾಲಕರಿಗೆ ಸಲಾಂ

07:29 PM Apr 25, 2019 | mahesh |

ಬಸ್‌ ಮಿಸ್‌ ಆಯ್ತು, ಕಾಲೇಜಿಗೆ ತುಂಬಾ ಲೇಟ್‌ ಆಯಿತು. ಅಯ್ಯೋ ಜೋರು ಬಿಸಿಲು. ನಡೆಯುವುದಕ್ಕೇ ಅಸಾಧ್ಯ ಅಂತ ಅನ್ನಿಸಿದಾಗ ತತ್‌ಕ್ಷಣ ನೆನಪಿಗೆ ಬರುವವರು ರಿಕ್ಷಾ ಚಾಲಕರು.

Advertisement

ನನಗಂತೂ ಇವರ ಬಗ್ಗೆ ಅಪಾರ ಗೌರವ. ಅದೊಂದು ಬಾರಿ ಪರೀಕ್ಷೆ ಸಮಯ. ಹಾಲ್‌ ಟಿಕೆಟ್‌ ಮರೆತು ಹೋಗಿದ್ದೆ. ಪುಣ್ಯಕ್ಕೆ ಮೊಬೈಲ್‌ ಕೈಯಲ್ಲೇ ಇತ್ತು. ತಕ್ಷಣ ರಿಕ್ಷಾ ಚಾಲಕರೊಬ್ಬರಿಗೆ ಕರೆ ಮಾಡಿದೆ. ಕರೆದ ಕೂಡಲೇ ಬಂದರು. ಅವರ ಸಹಾಯದಿಂದ ಮನೆಗೆ ಹೋಗಿ ಹಾಲ್‌ ಟಿಕೆಟ್‌ ಕೂಡಲೇ ತರಲು ಸಾಧ್ಯವಾಯಿತು.

ಇನ್ನೊಂದು ಬಾರಿ ನಡೆದ ಘಟನೆ. ಇದು ಕೂಡಾ ಕಾಲೇಜು ಸಮಯದಲ್ಲೇ ಆಗಿರುವಂಥಾದ್ದು. ಸ್ಕೂಟಿಯಿಂದ ಬಿದ್ದು ಕಾಲು ಮುರಿದುಕೊಂಡಾಗ ನಡೆಯಲು ಅಸಾಧ್ಯ ಅನ್ನುವ ಪರಿಸ್ಥಿತಿ ನನ್ನದಾಗಿತ್ತು. ಆಗ ನನ್ನ ಸ್ನೇಹಿತನಾದದ್ದು ರಿಕ್ಷಾವೇ. ಬೆಳಿಗ್ಗೆ ಕಾಲೇಜಿಗೆ ಹೋಗುವುದಕ್ಕೂ ರಿಕ್ಷಾ, ಸಂಜೆ ಮರಳಿ ಬರುವುದಕ್ಕೂ ರಿಕ್ಷಾ. ಹೀಗೆ ಬದುಕಿನ ಯಾನ ರಿಕ್ಷಾದೊಡನೆ ನಂಟು ಹೊಂದಿತ್ತು.

ಈ ರಿಕ್ಷಾದವರು ರಾತ್ರಿ ಅದೆಷ್ಟೇ ಸಮಯವಾದರೂ ಅಡ್ಡಿಯಿಲ್ಲ, ನಾವು ಕಾಲ್‌ ಮಾಡಿದಾಗ ಓಡೋಡಿ ಬರುತ್ತಾರೆ. ಬೆಳಿಗ್ಗೆ ನಾಲ್ಕು ಗಂಟೆಗೆ ಕರೆದರೂ ಸರಿ, ಆಟೋ ಚಾಲು ಮಾಡಿ ಬಂದೇ ಬಿಡುತ್ತಾರೆ. ದಾರಿ ನಡುವೆ ಸಿಕ್ಕರೂ ಪರಿಚಯದ ಮುಖಕ್ಕೆ ಒಂದು ಡ್ರಾಪ್‌ ನಿಸ್ವಾರ್ಥ ಮನಸ್ಸಿನಿಂದ ಕೊಟ್ಟು ಬಿಡುತ್ತಾರೆ. ಹೀಗೆ ಆಟೋಚಾಲಕರು ಅಂದ್ರೆ ಒಂದರ್ಥದಲ್ಲಿ ಪ್ರತ್ಯಕ್ಷ ದೇವರೆಂದೇ ಹೇಳಬಹುದು.

ಸಾಮಾನ್ಯವಾಗಿ ಕಾಲೇಜು ಮಕ್ಕಳಿಗೆ ಈ ರಿಕ್ಷಾ ಬಹಳ ಉಪಕಾರಿ ಸೇವಕ ಅಂತ ಅನಿಸುತ್ತದೆ. ನಮ್ಮಂಥವರಿಗೆ ಕ್ಷಣ ಕ್ಷಣಕ್ಕೂ ಇವರ ಸೇವೆ ಬೇಕೇ ಬೇಕು. ತಮ್ಮ ಹೊಟ್ಟೆಪಾಡಿಗೆ ದುಡಿಯುವವರಾದರೂ ಅತಿ ಆಸೆಯಿಂದ ದುಡಿಯುವ ಜೀವಗಳಲ್ಲ ಅವರು. ಕಷ್ಟ ಅಂದರೆ ಕರುಣೆ ತೋರುವ ಸಹೃದಯಿಗಳು. ದಿನಪೂರ್ತಿ ಜನರ ಬರುವಿಕೆಗಾಗಿ ಕಾಯುತ್ತ ತಮ್ಮತನದ ಆಸೆ-ಇಂಗಿತಗಳನ್ನೇ ಮರೆತುಬಿಡುತ್ತಾರೆ. ಊಟ-ನಿದ್ದೆಯ ಹೊತ್ತುಗೊತ್ತು ಹೇಳಲಾಗದು. ಬಾಡಿಗೆ ಬಂತೆಂದರೆ ಗಂಟೆಗಟ್ಟಲೆ ಕಾಯುತ್ತ, ಯಾರಿಗೋ ಸಹಕರಿಸುತ್ತ ಮುಂದುವರಿಯುವುದೇ ಇವರ ಬದುಕು.
ಪರಿಚಯವಿಲ್ಲದ ಊರಿನಲ್ಲಿ ಬಹುಶಃ ಮೊದಲು ಪರಿಚಯವಾಗುವುದು ರಿಕ್ಷಾ ಚಾಲಕರೇ ಅನಿಸುತ್ತದೆ. ಕಾರು-ಬೈಕ್‌ ಇದ್ದವರಿಗೆ ಅಡ್ಡಿಯಿಲ್ಲ. ಅವರವರೇ ಹೋಗಬಲ್ಲರು. ಆದರೆ, ಬಹುಪಾಲು ವಿದ್ಯಾರ್ಥಿಗಳಿಗೆ ಈ ರಿಕ್ಷಾ ಚಾಲಕರೇ ಆಸರೆ. ಒಂದು ಆಟೋದವರ ಪರಿಚಯ ಇದ್ದರೆ ನೂರು ಆನೆಯ ಬಲ ಇದ್ದಂತೆ ಅನಿಸುತ್ತದೆ.

Advertisement

ಆದರೂ ಇವರಿಗೆ ಗೌರವ ನೀಡುವವರು ಬಲು ವಿರಳ. ಅಗತ್ಯಕ್ಕೆ ಇವರೇ ಬೇಕು. ಆದರೆ ನೋಡುಗರ ಕಣ್ಣಿಗೆ ಇದೊಂದು ಸಾಮಾನ್ಯ ಕೆಲಸದಂತೆ. ಇನ್ನು ಕೆಲವರ ಬಾಯಿಯಲ್ಲಿ “ಅವರಿಗೇನು, ಒಳ್ಳೆಯ ಲಾಭ ಇದೆ, ಈಗಿನ ಜನರಂತೂ ನಡೆಯೋದೇ ಇಲ್ಲ, ಬರೀ ಆಟೋನೇ ಬೇಕು, ಹೀಗಾಗಿ ಚೆನ್ನಾಗಿ ದುಡೀತಾರೆ’ ಅಂತ. ಆದರೆ ಅವರವರ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಹೇಳುವುದಕ್ಕೆ ಸುಲಭ. ರಿಕ್ಷಾ ಚಾಲಕರು ತಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಇನ್ನೊಬ್ಬರಿಗೆ ದಾರಿ ತೋರಿಸುತ್ತಾರೆ. ಆಟೋ ಚಾಲಕನೊಬ್ಬನ ಮೇಲೆ ನಮ್ಮ ಜೀವ ನಿಂತಿರುತ್ತೆ ಅನ್ನೋದನ್ನು ನಾವು ಮರೆಯಬಾರದು. ಇವರಿಗೂ ಖರ್ಚು ಇದೆ. ಅದನ್ನು ಜನಸಾಮಾನ್ಯರಾದ ನಾವು ಅರ್ಥಮಾಡಿಕೊಳ್ಳಬೇಕಾಗಿದೆ.

ಇನ್ನು ಕಾಲೇಜು ವಿದ್ಯಾರ್ಥಿಗಳಿಗಂತೂ ಬಹು ದೊಡ್ಡ ಗೀಳು ಅಂದರೆ ಆಟೋಚಾಲಕರ ಬಗ್ಗೆ ವಿನಾ ಕಾರಣ ದೂರುವುದು, ತಮಾಷೆಯ ಮಾತುಗಳನ್ನಾಡುವುದು. ನಾನು ಪ್ರತ್ಯಕ್ಷವಾಗಿ ಕೇಳಿದ್ದೇನೆ ಕೂಡ. ನಮ್ಮ ಕಾಲೇಜು ಜೀವನದಲ್ಲಿ ಪ್ರತೀ ಪಯಣಕ್ಕೂ ದಾರಿ ತೋರಿಸುವುದು ಆಟೋಚಾಲಕರೇ. ನಾನು ಮೊದಲೇ ಹೇಳಿದಂತೆ ಯಾವ ಕೆಲಸ ವಿಳಂಬವಾದರೂ ತತ್‌ಕ್ಷಣ ಸಹಕರಿಸುವ ಇವರನ್ನು ಕೂಡಾ ಗೌರವಿಸಲು ನಾವು ಕಲಿಯಬೇಕು.

ಪ್ರಜ್ಞಾ ಪೂಜಾರಿ ಓಡಿಲ್ನಾಳ
ದ್ವಿತೀಯ ಪತ್ರಿಕೋದ್ಯಮ ವಿಭಾಗ, ಎಸ್‌ಡಿಎಮ್‌ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next