Advertisement
ಈ ಹಿಂದೆ ಅಡಿಕೆ, ತೆಂಗಿನಕಾಯಿ ಕೊಯ್ಲಿನ ಸಂದರ್ಭ ಸಾಂಪ್ರದಾಯಿಕ ಬಿದಿರಿನ ದೋಟಿ ಬಳಸಲಾಗುತ್ತಿತ್ತು. ಕಾಲಕ್ರಮೇಣ ಸುಧಾರಿತ ಅಲ್ಯೂಮಿನಿಯಂ ದೋಟಿ, ಏಣಿ (ಲ್ಯಾಡರ್) ಬಂದಿತು. ಇದು ಒಂದೆಡೆ ಪ್ರಯೋಜನಕಾರಿ ಯಾದರೆ ಮುನ್ನೆಚ್ಚರಿಕೆ ಕೊರತೆಯಿಂದಾಗಿ ಅಪಾಯ ಎದುರಾಗುತ್ತಿದೆ. ಮೂರು ವರ್ಷ ಹಿಂದೆ ಬೆಳ್ತಂಗಡಿ ತಾಲೂಕಿನ ಲಾೖಲ ಗ್ರಾಮದಲ್ಲೂ ಅಲ್ಯುಮಿನಿಯಂ ದೋಟಿ ವಿದ್ಯುತ್ ತಂತಿಗೆ ತಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದನ್ನು ಸ್ಮರಿಸಬಹುದು.
ವಿದ್ಯುತ್ ತಂತಿಗಳು ಬೇಸಗೆ ಹಾಗೂ ಚಳಿಗಾಲದಲ್ಲಿ ವಿಕಸನ- ಸಂಕುಚನದಿಂದಾಗಿ ಮರಮಟ್ಟುಗಳಿಗೆ ತಾಗಿ ವಿದ್ಯುತ್ ಅರ್ಥಿಂಗ್ ಆಗುವ ಸಾಧ್ಯತೆ ಇರುತ್ತದೆ. ಸ್ಥಳದ ಮಾಲಕರು ತಮ್ಮ ಜಮೀನಿನಲ್ಲಿ ವಿದ್ಯುತ್ ತಂತಿ ಎಳೆಯುವಾಗಲೇ ಎಚ್ಚರಿಕೆ ವಹಿಸಿ ತಂತಿಗೆ ರಬ್ಬರ್ ಹೊದಿಕೆಯನ್ನು ಅಳವಡಿಸಿದರೆ ಅನುಕೂಲ. ಏಕೆಂದರೆ ಮೆಸ್ಕಾಂ ಇಲಾಖೆ ಪೈಪ್ ಅಳವಡಿಸಿ ಕೊಡುವುದಿಲ್ಲ. ಅದೇನಿದ್ದರೂ ಕೃಷಿಕರ ಹೊರೆ ಎಂಬ ವಾದವೂ ಕೇಳಬರುತ್ತಿದೆ. ಒಂದುವೇಳೆ ಕೃಷಿಕರು ಅಥವಾ ವಿದ್ಯುತ್ ಬಳಕೆದಾರರು ನಿಗದಿತ ಮೊತ್ತ ನೀಡಿದಲ್ಲಿ ಇಲಾಖೆ ಸಹಕರಿಸುತ್ತದೆ. ಹಾಗಾಗಿ ಅಡಿಕೆ, ತೆಂಗಿನ ಮರ ಅಥವಾ ಇತರ ಮರಮಟ್ಟುಗಳಿಗೆ ತಂತಿ ತಾಗಿ ವಿದ್ಯುತ್ ಪ್ರವಹಿಸಿ ವ್ಯಕ್ತಿಗಳು ಮೃತಪಟ್ಟಲ್ಲಿ ಮೆಸ್ಕಾಂ ಹೊಣೆ ಹೊರುವುದಿಲ್ಲ, ಕೆಲವೊಮ್ಮೆ ಮಾನವೀಯ ನೆಲೆಯಲ್ಲಿ ಪರಿಹಾರ ಒದಗಿಸುತ್ತದೆ ಎನ್ನುವುದು ಆಧಿಕಾರಿಗಳ ಅಭಿಪ್ರಾಯ. ಅತ್ಯಂತ ಕಡಿಮೆ ತೂಕ ಎನ್ನುವುದೇ ಅಲ್ಯೂಮಿನಿಯಂ ದೋಟಿಯ ಹೆಗ್ಗಳಿಕೆ. 40 ಅಡಿ ಉದ್ದದ ಬೇರೆ ದೋಟಿಗಳು 20 ಕೆ.ಜಿ. ತೂಕವಿದ್ದರೆ ಅಲ್ಯೂಮಿನಿಯಂ ದೋಟಿ 60 ಅಡಿ ಉದ್ದವಿದ್ದರೂ 4 ಕೆ.ಜಿ. ತೂಕವಷ್ಟೇ ಇದೆ. ಕೃಷಿಕನೇ ಸುಲಭವಾಗಿ ಬಳಸಬಹುದಾದ್ದರಿಂದ ಕಾರ್ಮಿಕರ ಕೊರತೆಯನ್ನು ಇದು ನೀಗಿಸುತ್ತದೆ. ಆದರೆ ಬಳಕೆಯಲ್ಲಿ ಪರಿಣತಿ ಅಗತ್ಯ. ಕೆಲವು ಕಂಪೆನಿಗಳು ದೋಟಿ ವಿನ್ಯಾಸಗೊಳಿಸುವಾಗಲೇ ರಬ್ಬರ್ ಹ್ಯಾಂಡಲ್ ನೀಡುತ್ತವೆ. ಹೆಚ್ಚಿನವು ರಬ್ಬರ್ ಹ್ಯಾಂಡಲ್ ಹೊರತಾಗಿ ಮಾರುಕಟ್ಟೆಗೆ ಬರುತ್ತವೆ. ಮುನ್ನೆಚ್ಚರಿಕೆ ತೀರಾ ಆನಿವಾರ್ಯ.
Related Articles
ಸದ್ಯ ಕಾರ್ಬನ್ ಫೈಬರ್‌ಯುಕ್ತ ದೋಟಿಯೂ ಲಭ್ಯವಿದೆ. ಅದು ಅಲ್ಯೂಮಿನಿಯಂ ದೋಟಿಗಿಂತ ಹಗುರವಾಗಿದ್ದರೂ ಅದರಲ್ಲೂ ವಿದ್ಯುತ್ ಪ್ರವಹಿಸುತ್ತದೆ. ನೆಲ್ಯಾಡಿಯ ತಯಾರಕರೊಬ್ಬರು ಫೈಬರ್‌ದೋಟಿಯನ್ನು ಅನ್ವೇಷಿಸಿದ್ದು, 20, 30 ಅಡಿಗಿಂತ ಹೆಚ್ಚು ಉದ್ದವಿದ್ದರೆ ಬಾಗುವ ಕಾರಣ ದೊಡ್ಡ ಮರಗಳಿಂದ ಕೊಯ್ಲು ಕಷ್ಟ. ಈ ಹಿನ್ನೆಲಯೆಲ್ಲಿ ಪರ್ಯಾಯ ಅನ್ವೇಷಣೆ ಅಗತ್ಯ ಎಂಬುದು ಕೃಷಿಕರ ಅಭಿಪ್ರಾಯ.
Advertisement
01 ಬಿದಿರು ದೋಟಿಯಲ್ಲೂ ಸಮಸ್ಯೆ ಇಲ್ಲದಿಲ್ಲ ; ತೇವಾಂಶ ವಿದ್ದ ದೋಟಿ ವಿದ್ಯುತ್ ತಂತಿಗೆ ತಾಗಿದರೆ ಸಮಸ್ಯೆ.02 ಕಾಲಿಗೆ ಫೈಬರ್ ಆಥವಾ ಪ್ಲಾಸ್ಟಿಕ್ ಮಾದರಿ, ಶೂ,ಚಪ್ಪಲಿ ಹಾಗೂ ಕೈಗೆ ಗ್ಲೌಸ್ ಕಡ್ಡಾಯವಾಗಿ ಬಳಸಬೇಕು.
03 ದೋಟಿಗೆ ಪರ್ಯಾಯವಾಗಿ ಇತರೆ ವಿಧಾನಗಳ ಸಂಶೋಧನೆ ನಡೆಯಬೇಕು. ಅಲ್ಯೂಮಿನಿಯಂ ದೋಟಿ ಬಳಕೆಗೆ ಮುನ್ನ ತೋಟದಲ್ಲಿರುವ ವಿದ್ಯುತ್ ತಂತಿಗಳಿಗೆ ಡ್ರಿಪ್ ಪೈಪ್ ಅಳವಡಿಸುವುದೇ ಸೂಕ್ತ. ಎಲ್ಲ ರೀತಿಯ ಸಮಸ್ಯೆಗಳಿಗೂ ಇದು ಸುಲಭ ಪರಿಹಾರ. ಹೆಚ್ಚೇನು ಖರ್ಚು ಬರುವುದಿಲ್ಲ.
– ಧನಂಜಯ ಭಿಡೆ, ಕೃಷಿಕರು, ಉಜಿರೆ