Advertisement
ಯುಗಾದಿ ಎನ್ನುವುದು ಯುಗದ ಆದಿ ಅಂದರೆ ಹೊಸ ವರ್ಷದ ಮೊದಲ ದಿನ. ಹೊಸತನ ಎಂಬುದು ಕಾಲಗಣನೆಗೆ ಮಾತ್ರ ಸೀಮಿತವಾದದ್ದಲ್ಲ. ಪ್ರಕೃತಿಯೇ ಹೊಸತನಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವ ಸಮಯವಿದು. ಹಣ್ಣೆಲೆಗಳು ಉದುರಿ ಹೊಸ ಚಿಗುರು ಮೂಡುವ ಸಮಯ. ತಳಿರುಗಳ ಕಂಪಿನಿಂದ, ಕೋಗಿಲೆ ಮೊದಲಾದ ಹಕ್ಕಿಗಳ ಇಂಪಾದ ಗಾನದಿಂದ, ದುಂಬಿಗಳ ಝೇಂಕಾರ ದಿಂದ ಮಧುಮಾಸಲಕ್ಷ್ಮಿ ಸರ್ವಾಲಂಕಾರ ಭೂಷಿತೆಯಾಗಿ ಕಂಗೊಳಿಸುವ ಈ ಸಮಯ ಪಶು- ಪಕ್ಷಿ- ಮಾನವನೆಂಬ ಸಕಲ ಜೀವಜಾತಗಳ ಮನಸ್ಸನ್ನು ಪ್ರಫುಲ್ಲವಾಗಿಸುತ್ತದೆ. ಹೊಸತನವನ್ನು ಮೂಡಿಸುವ ಇಡೀ ವಸಂತಮಾಸವೇ ಸಂಭ್ರಮಾಚರಣೆಯ ಕಾಲ. ಅದರಲ್ಲೂ ಮೊದಲ ದಿನವಂತೂ ಇನ್ನೂ ಹೆಚ್ಚಿನ ಸಂಭ್ರಮ. ಹೊಸವರ್ಷಾಚರಣೆಯ ಸಡಗರ.
Related Articles
Advertisement
ಯುಗಾದಿ ಆಚರಣೆಯ ಮುಂದಿನ ಭಾಗ ಬೇವು- ಬೆಲ್ಲಗಳ ಸೇವನೆ. ಬೇವು-ಬೆಲ್ಲ-ಮಾವಿನಚಿಗುರು ಇವೆಲ್ಲವನ್ನು ದೇವರಿಗೆ ಸಮರ್ಪಿಸಿದ ಬಳಿಕ ಅದನ್ನು ಸೇವಿಸಬೇಕು. ಜೀವನದಲ್ಲಿ ಬಂದೊದಗುವ ಸುಖ-ದುಃಖ, ಒಳಿತು-ಕೆಡುಕು, ಲಾಭ-ನಷ್ಟ, ಸೋಲು-ಗೆಲುವು, ನಗು-ಅಳು ಎಂಬ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ತತ್ವ ಇದರಲ್ಲಿ ಅಡಗಿದೆ. ಅದನ್ನೇ ಭಗವದ್ಗೀತೆಯಲ್ಲಿ ಭಗವಂತ ಸುಖದುಃಖೇ ಸಮೇ ಕೃತ್ವಾ… ಬೋಧಿಸಿರುವುದು.
ಇಂದಿನವರ ಭಾಷೆಯಲ್ಲೇ ಹೇಳುವುದಾದರೆ ಇದೇ ನ್ಯೂ ಇಯರ್ ರೆಸಲ್ಯೂಷನ್. ಸುಖವೇ ನಮಗಾಗಲಿ ಎಂದು ಆಶಿಸಬಹುದು. ಆದರೆ ಅದೊಂದು ಅವಾಸ್ತವಿಕ ಕಲ್ಪನೆಯಾಗಿದೆ. ಹೀಗಾಗಿ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸುವ ಇಂತಹ ದೃಢ ನಿಶ್ಚಯ ನಮ್ಮನ್ನೆಂದೂ ಕುಗ್ಗಿಸದು. ಜೀವನದಲ್ಲಿ ಎದುರಾಗುವ ಎಂತಹ ದುರ್ಭರ ಸನ್ನಿವೇಶಗಳನ್ನು ಎದುರಿಸುವ ದಾರ್ಡ್ಯವನ್ನು ಇಂತಹ ಸಂಕಲ್ಪ ನಮಗೆ ಒದಗಿಸುತ್ತದೆ.
ಮುಂದಿನ ಆಚರಣೆ ಪಂಚಾಂಗ ಶ್ರವಣ. ದೇವರ ಮುಂದೆ ಮನೆಯವರೆಲ್ಲರೂ ಸೇರಿ ಕುಳಿತುಕೊಳ್ಳಬೇಕು. ಬಳಿಕ ಮನೆಯ ಹಿರಿಯರು ಪಂಚಾಂಗದಲ್ಲಿ ಬರೆದಿರುವ ವರ್ಷಫಲವನ್ನು ಓದಿ ಹೇಳುತ್ತಾರೆ. ಇದೊಂದು ಬಗೆಯ ತತ್ವದರ್ಶನ ಅಥವಾ ಸತ್ಯದರ್ಶನ. ಬೇವುಬೆಲ್ಲವನ್ನು ಈಗಷ್ಟೇ ಅರಗಿಸಿಕೊಂಡವರು ಈ ವರ್ಷದಲ್ಲಿ ಒದಗಿ ಬರಲಿರುವ ಶುಭಾಶುಭ ಫಲಗಳಿಗೆ ಮನಸ್ಸನ್ನು ಈಗಲೇ ಒಡ್ಡಿಕೊಳ್ಳುವ ಒಂದು ಪ್ರಕ್ರಿಯೆ. ಆಧುನಿಕ ಜೀವನದಲ್ಲಿ ನಾವು ನೋಡುವ ಯಾವ ಮಾರುಕಟ್ಟೆ ತಂತ್ರವೂ ಇಲ್ಲಿಲ್ಲ. ನಮ್ಮಲ್ಲಿಗೆ ಬನ್ನಿ ಎಲ್ಲ ಒಳ್ಳೆಯದು ಆಗುತ್ತದೆ ಎಂಬ ರೀತಿಯ ವ್ಯಾಪಾರೀಕರಣವೂ ಇಲ್ಲಿಲ್ಲ. ಕೇವಲ ವಾಸ್ತವ ಭವಿಷ್ಯದ ನಿರೂಪಣೆ. ಈ ವರ್ಷದಲ್ಲಿ ಆಗರುವ ಮಳೆ-ಬೆಳೆ, ದೇಶಕ್ಕೆ-ಜನತೆಗೆ ಒದಗಬಹುದಾದ ಸಂಕಟ-ಕಂಟಕ, ಅಥವಾ ಏಳಿಗೆ-ಉತ್ಕರ್ಷ ಇವೆಲ್ಲವನ್ನೂ ಪಂಚಾಂಗದಲ್ಲಿ ಬರೆದಿರುತ್ತಾರೆ. ಇದೊಂದು ರೀತಿಯಲ್ಲಿ ಜೀವನದಲ್ಲಿ ಒಳಿತು-ಕೆಡುಕುಗಳಿಗೆ ನಮ್ಮನ್ನು ನಾವೇ ಒಡ್ಡಿಕೊಳ್ಳಲು, ಜೀವನವನ್ನು ಇದ್ದಂತೆಯೇ ಒಪ್ಪಿಕೊಳ್ಳಲು ಮಾಡುವ ಮಾನಸಿಕ ಸಿದ್ಧತೆ ಎಂದರೂ ತಪ್ಪಾಗಲಾರದು.
ಹಬ್ಬದೂಟವಿಲ್ಲದೆ ಹಬ್ಬವು ಎಂದಿಗೂ ಕೊನೆಯಾಗಲಾರದು. ಹೋಳಿಗೆ, ಪಾಯಸ ಮೊದಲಾದ ಸವಿಯೊಂದಿಗೆ ಪಚಡಿಯಂತಹ ಷಡ್ರಸೋಪೇತವಾದ ದ್ರವ್ಯಗಳನ್ನು ಸಿದ್ಧಪಡಿಸಿ ಮನೆಯವರೊಂದಾಗಿ ಸವಿಯುವುದು ಹಬ್ಬದ ಮುಂದಿನ ಆಚರಣೆ. ದೇವಾಲಯಗಳಿಗೆ, ಹಿರಿಯರ ಮನೆಗೆ, ಗುರುಗಳ ಮನೆಗೆ ಭೇಟಿ ನೀಡಿ ಮುಂದಿನ ಜೀವನ ಸುಖಮಯವಾಗಿರಲೆಂದು ಎಲ್ಲ ದೇವರ-ಗುರು-ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳುವುದು ಮುಂದಿನ ಕ್ರಿಯೆ.ಹೀಗೆ ನಮಗೆ ಎಲ್ಲವೂ ಆಗಿರುವ ಪ್ರಕೃತಿಯೊಂದಿಗೆ ಬೆರೆತು ಆಚರಿಸುವ, ದೇವರ ಗುರುಹಿರಿಯರ ಆಶೀರ್ವಾದ ಬಲವನ್ನು ಹೊಂದುವ, ಮನೆಯವರೆಲ್ಲರೂ ಒಂದಾಗಿ ಕಲೆತು ಸಂಭ್ರಮಿಸುವ ಈ ಯುಗಾದಿ ಹಬ್ಬದ ಮರ್ಮವನ್ನು ಅರಿತು ಆಚರಿಸೋಣ. ಆ ಮೂಲಕ ನಮ್ಮ ಉದಾತ್ತ ಸಂಸ್ಕೃತಿಯನ್ನು, ಶ್ರೀಮಂತ ಪರಂಪರೆಯನ್ನು ಉಳಿಸೋಣ. ~ ಡಾ| ವಿಜಯಲಕ್ಷ್ಮಿ ಎಂ. ಉಡುಪಿ