Advertisement

ಬೆಳಕು ಹೆಚ್ಚಾದರೂ, ದಾರಿ ಕಾಣದು!

11:30 AM Aug 22, 2017 | |

ದೇವರು ಮತ್ತು ಮಾನವರ ಕುರಿತು ನಿಂತರವಾದ ಏಕರೂಪ ಪ್ರೀತಿಯನ್ನು ಯಾರಾದರೂ ಇಟ್ಟುಕೊಳ್ಳಲು ಸಾಧ್ಯವಾ? ಹಾಗೇನಾದರೂ ಇದ್ದರೆ, ಅದೊಂದು ನಾಟಕ ಅಥವಾ ಮೂರ್ಖತನ…

Advertisement

ಯಾಕೋ, ಏನೋ ಗೊತ್ತಿಲ್ಲ… ಎಂದೂ ಮಧ್ಯಾಹ್ನ ಮಲಗದವನಿಗೆ ಅವತ್ತು ದಿಂಬಿಗೆ ತಲೆ ಆನಿಸಿದ ತಕ್ಷಣ ನಿದ್ದೆ ಹತ್ತಿತ್ತು. ಎಚ್ಚರವಾದಾಗ, ಹೊರಗೆ ಸೂರ್ಯ ಕೆಂಪು ಕಿರಣಗಳನ್ನು ಹಾಸಿದ್ದ. ಹಕ್ಕಿಗಳು ಗೂಡಿಗೆ ಮರಳುತ್ತಿದ್ದವು. ಬೆಳ್ಳಕ್ಕಿಯ ಹಿಂಡು ಓಡುತ್ತಿತ್ತು. ಕಾಗೆಗಳ ಶಾಲೆ ಬಿಟ್ಟಿತ್ತು. ಹಾಗೆ ಎದ್ದು ಅಡ್ಡಾಡಿ ಬರಬೇಕೆಂದು ಹೂರಟಿದ್ದೆ. ದಾರಿಯ ಕಲ್ಯಾಣ ಮಂಟಪದಲ್ಲಿ ಯಾವುದೋ ಕಾರ್ಯಕ್ರಮ ಇತ್ತು. ಅದು ನಿನ್ನ ನಿಶ್ಚಿತಾರ್ಥ ಎಂದು ಗೊತ್ತಿರಲಿಲ್ಲ.

ಅಂದು ಗುಲಾಬಿ ಬಣ್ಣದ ಸೀರೆಯುಟ್ಟು ನೀನು ನೆರಿಗೆಗಳನ್ನು ಒದೆಯುತ್ತಾ ಬರುತ್ತಿದ್ದರೆ, ಮತ್ತೂಮ್ಮೆ ಪ್ರೀತಿಸಬೇಕು ಅಂತನ್ನಿಸುತ್ತಿತ್ತು. ಆದರೆ, ನಿನಗೆ ನಾನೇನು ಮಾಡಿದ್ದೇ? ನನ್ನ ಪ್ರೀತಿಯನ್ನು ಒಂದು ಪಿತೂರಿಯಂತೆ ಮಾಡಿ ಮುಗಿಸಿದೆಯಲ್ಲೇ.

ಎಂಟು ವರ್ಷ ಕಣ್ಣಲ್ಲಿ ಕಣ್ಣಿಟ್ಟು ನಿನ್ನನ್ನು ಪ್ರೀತಿಸಿದೆ, ಕಾಪಾಡಿದೆ… ಅಷ್ಟೇಅಲ್ಲ, ದೇವತೆಯ ಹಾಗೆ ಪೂಜಿಸಿದೆ. ಆ ಎಂಟು ವರ್ಷಗಳಲ್ಲಿ ನಾವು ಎಷ್ಟೋ ಸಲ ಭೇಟಿಯಾಗಿದ್ದೇವೆ. ನೀನೇ ಹೇಳು… ಒಂದು ಸಲವಾದರೂ ನಿನ್ನ ಕಿರು ಬೆರಳನ್ನಾದರೂ ಮುಟ್ಟಿದ್ದೆನಾ? ಹೇಳು ಗೆಳತಿ… ಪ್ರೀತಿಯ ಪಾವಿತ್ರವನ್ನು ಕಾಪಾಡುತ್ತಲೇ ನಿನ್ನನ್ನು ಪ್ರೇಮಿಸಿದೆ. ಆದರೆ, ಆ ಪವಿತ್ರ ಪ್ರೀತಿಗೆ ನೀನು ಕೊಟ್ಟ ಬೆಲೆ ಏನು?

ದೇವರು ಮತ್ತು ಮಾನವರ ಕುರಿತು ನಿಂತರವಾದ ಏಕರೂಪ ಪ್ರೀತಿಯನ್ನು ಯಾರಾದರೂ ಇಟ್ಟುಕೊಳ್ಳಲು ಸಾಧ್ಯವಾ? ಹಾಗೇನಾದರೂ ಇದ್ದರೆ, ಅದೊಂದು ನಾಟಕ ಅಥವಾ ಮೂರ್ಖತನ. ಅಪರಾಧವಲ್ಲದ ಅಪರಾಧಕ್ಕೂ ಬಿಟ್ಟುಹೋಗುವ ದೊಡ್ಡ ಶಿಕ್ಷೆಯನ್ನು ಏಕೆ ಕೊಟ್ಟೆ ಗೆಳತಿ? ಇಡಿಯಾಗಿ ದಕ್ಕಿದ್ದು ಯಾವುದೂ ನಮ್ಮದಲ್ಲ. ದಕ್ಕುವ ತನಕ ಹೋರಾಟವೇ ಬದುಕು!

Advertisement

ಪ್ರೀತ್ಸೋದು ಕಷ್ಟ. ಅದನ್ನು ಪ್ರೀತಿಯಾಗಿಯೇ ಉಳಿಸಿಕೊಳ್ಳೋದು ಇನ್ನೂ ಕಷ್ಟ. ಹಾಗಾದರೆ, ಪ್ರೀತ್ಸೋದು ಅಂದ್ರೇನು? ಒಂದಷ್ಟು ಹೊತ್ತು ಜೊತೆಗಿದ್ದು ಬಿಡೋದಾ? ಕಟ್ಟಿಕೊಂಡು ತಿರುಗೋದಾ? ಸಿಕ್ಕವರನ್ನು ಲಪಟಾಯಿಸಿಕೊಂಡು ಓಡಾಡೋದಾ? ಸುದೀರ್ಘ‌ವಾಗಿ ಪ್ರೇಮಿಸೋದಾ? ಸಂಸಾರ ಮಾಡೋದಾ?

ಬೆಳಕಿಲ್ಲದೇ, ದಾರಿ ಕಾಣೋದಿಲ್ಲ. ಅದೇ ಬೆಳಕು ಹೆಚ್ಚಾದರೂ ದಾರಿ ಕಾಣೋದಿಲ್ಲ, ಅಲ್ವಾ ಗೆಳತಿ?
ಗೆಳತಿ ನನ್ನ ಜೊತೆ ಈಗ ನೀನಿಲ್ಲ. ನಾನೀಗ ಒಂಟಿ. ಆದರೂ ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಒಬ್ಬರೇ ಬಂದು ಒಬ್ಬರೇ ಹೋಗುವ ಯಾನಕ್ಕೆ ಸಂಬಂಧಗಳೆಲ್ಲ ಯಾಕೆ ಬಿಡು ಗೆಳತಿ… ನನ್ನನ್ನು ಮರೆತು ಸುಖವಾಗಿರು. ಭೂತಕ್ಕೂ ಭವಿಷ್ಯಕ್ಕೂ ಸೇತುವೆ ಏತಕೆ?

ಕಿರಣ ಪ. ನಾಯ್ಕನೂರ

Advertisement

Udayavani is now on Telegram. Click here to join our channel and stay updated with the latest news.

Next