Advertisement
ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ ಮತ್ತು ಶಂಕಿತ ಡೆಂಗ್ಯೂ ಜ್ವರದಿಂದ 12ಕ್ಕೂ ಹೆಚ್ಚು ಮಂದಿ ಕಳೆದ ಮೂರ್‍ನಾಲ್ಕು ತಿಂಗಳ ಅವಧಿಯೊಳಗೆ ಮೃತಪಟ್ಟಿದ್ದಾರೆ. ಬಹುಶಃ ಇತ್ತೀಚಿನ ಕೆಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಡೆಂಗ್ಯೂವಿನಂಥ ಜ್ವರ ಬಾಧೆಯಿಂದ ಸಾವು ಸಂಭವಿಸಿದೆ. ಕಳೆದ ವರ್ಷ ಸುಮಾರು ಏಳು ಮಂದಿ ಡೆಂಗ್ಯೂ ಬಾಧೆಯಿಂದ ಮೃತಪಟ್ಟಿದ್ದರು. ಮೃತರ ಪೈಕಿ ಬಹುತೇಕರು ಡೆಂಗ್ಯೂ ಜ್ವರದಿಂದಲೇ ಮೃತಪಟ್ಟಿದ್ದಾರೆಂದು ಸಂಬಂಧಿಕರು, ಕುಟುಂಬಿಕರು ಹೇಳಿದ್ದಾರೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಶಂಕಿತ ಪ್ರಕರಣ ಎಂದೋ, ಬೇರೆ ಕಾಯಿಲೆಯಿಂದ ಸಾವು ಸಂಭವಿಸಿದೆ ಎಂದೇ ಹೇಳುವ ಮೂಲಕ ಏನೂ ಆಗಿಲ್ಲ ಎಂಬುದಾಗಿ ಬಿಂಬಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಡೆಂಗ್ಯೂ ಇಷ್ಟೊಂದು ವ್ಯಾಪಕವಾಗಿ ವ್ಯಾಪಿಸಿದ್ದರೂ ಅದರ ನಿಯಂತ್ರಣ ಅಥವಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವತ್ತ ಜಿಲ್ಲಾಡಳಿತವಾಗಲಿ, ಆರೋಗ್ಯ ಇಲಾಖೆಯಾಗಲಿ ಇತ್ತೀಚಿನ ದಿನಗಳಲ್ಲಿ ಅಷ್ಟಾಗಿ ಗಮನಹರಿಸುತ್ತಿಲ್ಲ ಎನ್ನುವುದು ವಾಸ್ತವ. ಡೆಂಗ್ಯೂನಿಂದಾಗಿ 1,000ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಈಗಲೂ ದಾಖಲಾಗುವವರ ಸಂಖ್ಯೆ ಮುಂದುವರಿಯುತ್ತಿದೆ. ಆದರೆ ಇಲಾಖೆ ಅಧಿಕಾರಿಗಳು ಕಳೆದೆರಡು ದಿನಗಳಲ್ಲಿ ಸುಮಾರು 10-20 ಮಂದಿಯಷ್ಟೇ ದಾಖಲಾಗಿದ್ದು, ಡೆಂಗ್ಯೂ ನಿಯಂತ್ರಣದಲ್ಲಿದೆ ಎನ್ನುತ್ತಾರೆ.
Related Articles
ಖಾಸಗಿ ಸುದ್ದಿ ವಾಹಿನಿ ಕೆಮರಾಮನ್ ನಾಗೇಶ್ ಪಡು, ಕಡಬದ ವೀಣಾ ನಾಯಕ್, ವಿದ್ಯಾರ್ಥಿನಿ ಶ್ರದ್ಧಾ ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ದೃಢಪಡಿಸಿದೆ. ಆದರೆ ಪುತ್ತೂರಿನ ಉದ್ಯಮಿ ಪ್ರಶಾಂತ್ ಸರಳಾಯ, ತೊಕ್ಕೊಟ್ಟಿನ ಹರ್ಷಿತ್ ಗಟ್ಟಿ, ಗಣೇಶ್ ಕರ್ಕೇರ, ವಿದ್ಯಾರ್ಥಿ ಕೃಷ್, ಕಡಬದ ಶ್ರೀಧರ ಗೌಡ, ಬೋಳಾರ ಮುಳಿಹಿತ್ಲು ನಿವಾಸಿ ಕಾರ್ತಿಕ್ ಶೆಟ್ಟಿ, ಬೆಂಗ್ರೆಯ ಎಂಟು ವರ್ಷದ ಬಾಲಕಿ, ಪುತ್ತೂರಿನ ರಂಜನ್ ಹಾಗೂ ಕಳೆದ ಸೋಮವಾರ ಮೃತಪಟ್ಟ ಪಾಂಡೇಶ್ವರದ ಸುಧಾಕರ ಆಚಾರ್ಯ ಅವರ ಸಾವಿನ ಕುರಿತು ಆರೋಗ್ಯ ಇಲಾಖೆಯ ಬಳಿ ಸರಿಯಾದ ಮಾಹಿತಿ ಇಲ್ಲ.
Advertisement
ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣದಲ್ಲಿದೆ. ಈಗ ಯಾವ ಸ್ಥಿತಿಯಲ್ಲಿದೆ ಎಂಬ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ತರಿಸಿಕೊಂಡು ಆ ಬಗ್ಗೆ ಗಮನ ಹರಿಸಲಾಗುವುದು.-ಸಿಂಧೂ ರೂಪೇಶ್, ಜಿಲ್ಲಾಧಿಕಾರಿ ಆತಂಕ ಬೇಡ
ಜಿಲ್ಲೆಯಲ್ಲಿ ಮೂವರು ಡೆಂಗ್ಯೂನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಉಳಿದ ಕೆಲವು ಪ್ರಕರಣಗಳ ವರದಿ ಕೈ ಸೇರಿದ್ದು, ಯಾವ ಸಾವೂ ಡೆಂಗ್ಯೂ ಜ್ವರದಿಂದ ಸಂಭವಿಸಿಲ್ಲ. ಎಲ್ಲವನ್ನೂ ಡೆಂಗ್ಯೂ ಜ್ವರ ಎಂದು ನಿರ್ಧರಿಸುವುದು ಸರಿಯಲ್ಲ. ದೃಢಪಡಿಸುವುದಕ್ಕೆ ಕೆಲವು ಪ್ರಕ್ರಿಯೆಗಳಿರುತ್ತವೆ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಸದ್ಯ ನಿಯಂತ್ರಣದಲ್ಲಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ.
-ಡಾ| ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಾಧಿಕಾರಿ