ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಕೊನೆಗೆ ಎಲ್ಲೋ ಒಂದು ಕಡೆ ಸೇರುವ ನಾಲ್ಕೈದು ದಿಕ್ಕು-ದೆಸೆಯಿಲ್ಲದ ಹುಡುಗರು ಸ್ನೇಹಿತರಾಗುವುದು. ತಪ್ಪು ಅಂಥ ಗೊತ್ತಿದ್ದರೂ, ಮಹಾನಗರದಲ್ಲಿ ಬದುಕು ಸಾಗಿಸುವ ಅನಿವಾರ್ಯತೆಗೆ ಈ ಹುಡುಗರು ಪ್ರತಿನಿತ್ಯ ಹತ್ತಾರು ಜನಕ್ಕೆ ಟೋಪಿ ಹಾಕುವುದು. ಕೊನೆಗೆ ತಾವು ಮಾಡುವುದು ತಪ್ಪು ಎಂಬ ಜ್ಞಾನೋದಯವಾಗುವುದು. ಇದರ ನಡುವೆ ಒಂದಷ್ಟು ನಿರೀಕ್ಷಿತ ಟರ್ನ್ಸ್, ಟ್ವಿಸ್ಟ್‌ಗಳು… ಕೊನೆಗೆ ಕ್ಲೈಮ್ಯಾಕ್ಸ್‌ನಲ್ಲಿ ಸುಖಾಂತ್ಯ.
ಇಂಥ ಕಥೆಯನ್ನು ಇಟ್ಟುಕೊಂಡು ಕನ್ನಡದಲ್ಲಿ ಬಂದಿರುವ ಅದೆಷ್ಟೋ ಚಿತ್ರಗಳನ್ನು ನೋಡಿರುತ್ತೀರಿ. ಇಂಥದ್ದೇ ಕಥೆಯನ್ನು ಹುಡುಗರ ಬದಲು ಹುಡುಗಿಯರ ಮೂಲಕ ಹೇಳಿದರೆ, ಹೇಗಿರುತ್ತದೆ ಅನ್ನೋ ಕುತೂಹಲವಿದ್ದರೆ ಈ ವಾರ ತೆರೆಗೆ ಬಂದಿರುವ “ಪುಣ್ಯಾತ್‌ಗಿತ್ತೀರು’ ಚಿತ್ರವನ್ನು ನೋಡಬಹುದು. ಹೆಸರೇ ಹೇಳುವಂತೆ, “ಪುಣ್ಯಾತ್‌ಗಿತ್ತೀರು’ ನಾಲ್ಕು ಹುಡುಗಿಯರ ಸುತ್ತ ನಡೆಯುವ ಕಥೆ.
ಅನಾಥರಾಗಿ ಬೆಳೆದ ನಾಲ್ಕು ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಬದುಕನ್ನು ಸಾಗಿಸಲು ಯಾವ ಯಾವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ನಾವು ಕೂಡ ಹುಡುಗರಿಗೆ ಕಮ್ಮಿ ಇಲ್ಲ ಎಂಬ ಮನೋಭಾವನೆಯಲ್ಲಿ ಏನೆಲ್ಲಾ ಆಟಾಟೋಪಗಳನ್ನು ಮಾಡುತ್ತಾರೆ. ಅಂತಿಮವಾಗಿ ಇವರು ಮಾಡುವ ಕೆಲಸಗಳು ಯಾರ್ಯಾರಿಗೆ ಉಪಕಾರ – ಉಪದ್ರವ ಮಾಡುತ್ತೆ ಅನ್ನೋದೆ “ಪುಣ್ಯಾತ್‌ಗಿತ್ತೀರು’ ಚಿತ್ರದ ಕಥೆಯ ಬಂಡವಾಳ.
“ಪುಣ್ಯಾತ್‌ಗಿತ್ತೀರು’ ಚಿತ್ರದ ಕಥೆಯ ಎಳೆಯಲ್ಲಾಗಲಿ, ಚಿತ್ರಕಥೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಎಲ್ಲೂ ಹೊಸತನವನ್ನು ನಿರೀಕ್ಷಿಸುವಂತಿಲ್ಲ. ಕನ್ನಡ ಚಿತ್ರ ಪ್ರೇಕ್ಷಕರು ಈಗಾಗಲೇ ಕೇಳಿರುವ, ಕಂಡಿರುವ ಹತ್ತಾರು ಅಂಶಗಳನ್ನೆ ಇಲ್ಲೂ ಕೂಡ ಒಂದಷ್ಟು ಮಸಾಲೆ ಬೆರೆಸಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು ಎನ್ನಬಹುದು. ಆದರೆ ಸದ್ಯ, ಹೊಸತನದ ತುಡಿತ, ಹೊಸಕಥೆಯ ಹುಡುಕಾಟದಲ್ಲಿರುವ ಪ್ರೇಕ್ಷಕರಿಗೆ ನಿರ್ದೇಶಕರು ಹೊಸದೇನಾದ್ರೂ ಹೇಳಿದ್ದರೆ, ಪ್ರೇಕ್ಷಕರ ಕಣYಳಿಗೆ “ಪುಣ್ಯಾತ್‌ಗಿತ್ತೀರು’ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಗಳಿದ್ದವು.
ಇನ್ನು “ಪುಣ್ಯಾತ್‌ಗಿತ್ತೀರು’ ಚಿತ್ರದಲ್ಲಿ ಆರ್ಟಿಸ್ಟ್ ಆರತಿ ಪಾತ್ರದಲ್ಲಿ ಮಮತಾ ರಾವುತ್, ಬಾಯಿ ಬಡುಕಿಯಾಗಿ ಐಶ್ವರ್ಯಾ, ಮೀಟ್ರಾ ಮಂಜುಳ ಆಗಿ ದಿವ್ಯಶ್ರೀ, ಸುಳ್ಳಿ ಸುಜಾತ ಆಗಿ ಸಂಭ್ರಮ ನಾಲ್ವರು ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಧಮ್ ಹೊಡೆಯುತ್ತ, ಧಮ್ಕಿ ಹಾಕುತ್ತ, ಕೈಯಲ್ಲಿ ಬಾಟಲ್ ಹಿಡಿದು ಡ್ಯಾನ್ಸ್ ಮಾಡುವವರೆಗೂ ನಾಲ್ವರದ್ದೂ ಬೋಲ್ಡ್ ಆ್ಯಕ್ಟಿಂಗ್.
ಉಳಿದಂತೆ ಶೋಭರಾಜ್, ಕುರಿ ರಂಗ, ಗೋವಿಂದೇ ಗೌಡ ಮೊದಲಾದವರ ಪಾತ್ರಗಳು ಹಾಗೆ ಬಂದು ಹೀಗೆ ಹೋಗುವುದರಿಂದ ಮನಸ್ಸಿನಲ್ಲಿ ಉಳಿಯುವುದಿಲ್ಲ. ಚಿತ್ರದಲ್ಲಿ ಶರತ್ ಕುಮಾರ್. ಜಿ ಛಾಯಾಗ್ರಹಣ, ಶಿವಪ್ರಸಾದ್ ಸಂಕಲನ ಚೆನ್ನಾಗಿ ಮೂಡಿಬಂದಿದೆ. ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ಒಟ್ಟಾರೆ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ವಾರಾಂತ್ಯದಲ್ಲಿ ಒಮ್ಮೆ “ಪುಣ್ಯಾತ್‌ಗಿತ್ತೀರು’ ಹೇಳ್ಳೋದನ್ನ ನೋಡಿಕೊಂಡು ಬರಲು ಯಾವುದೇ ಅಡ್ಡಿಯಿಲ್ಲ.
ಚಿತ್ರ: ಪುಣ್ಯಾತ್‌ಗಿತ್ತೀರು
ನಿರ್ಮಾಣ: ಸತ್ಯನಾರಾಯಣ ಮನ್ನೆ
ನಿರ್ದೇಶನ: ರಾಜ್ ಬಿ.ಎನ್
ತಾರಾಗಣ: ಮಮತಾ ರಾವುತ್, ಐಶ್ವರ್ಯಾ, ದಿವ್ಯಶ್ರೀ, ಸಂಭ್ರಮ, ಶೋಭರಾಜ್, ಕುರಿರಂಗ, ಗೋವಿಂದೇ ಗೌಡ, ಸುಧೀ ಇತರರು
* ಜಿ.ಎಸ್ ಕಾರ್ತಿಕ ಸುಧನ್