Advertisement

ಮಡಿಕೇರಿ-ಸಂಪಾಜೆ ರಸ್ತೆ ಹದಗೆಟ್ಟರೆ ಸಂಚಾರ ಸ್ಥಗಿತ ಭೀತಿ

10:25 AM Jun 11, 2019 | keerthan |

ಸುಳ್ಯ: ಮಡಿಕೇರಿ-ಸಂಪಾಜೆ ರಸ್ತೆ ಕೈ ಕೊಟ್ಟರೆ ಪರ್ಯಾಯ ಬಳಕೆಗೆ ರಸ್ತೆಗಳಿದ್ದರೂ ಅವು ಸಂಚಾರಕ್ಕೆ ಈ ಬಾರಿಯೂ ಸಿದ್ಧವಾಗಿಲ್ಲ. ಈ ಬಾರಿ ಸಂಪರ್ಕ ಕಡಿತಗೊಂಡರೆ ಬದಲಿ ವ್ಯವಸ್ಥೆ ಸಂಚಾರ ಸ್ಥಗಿತವಷ್ಟೆ!

Advertisement

ಕಳೆದ ವರ್ಷ ಪ್ರಾಕೃತಿಕ ಅವಘಡದಿಂದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ-ಸಂಪಾಜೆ ನಡುವೆ ಕೆಲವು ತಿಂಗಳು ಸಂಚಾರ ವ್ಯತ್ಯಯಗೊಂಡಿತ್ತು. ಈ ಬಾರಿ ತುರ್ತು ಸಂದರ್ಭ ಎದುರಿಸಲು ಅನಿವಾರ್ಯವಾದ ಪರ್ಯಾಯ ರಸ್ತೆಗಳು ಹೇಗಿವೆ ಎಂದು ಪರಿಶೀಲಿಸಿದರೆ, ಅಪೂರ್ಣ ಹಂತದಲ್ಲೇ ಇರುವುದು ಕಂಡಿದೆ.

ಈಡೇರದ ಬೇಡಿಕೆ
ಪರ್ಯಾಯ ರಸ್ತೆಗಳ ಅಭಿವೃದ್ಧಿ ನಿರ್ಲಕ್ಷ್ಯದ ಕಾರಣ ಅವು ಸಂಚಾರ ಯೋಗ್ಯ ಸ್ಥಿತಿಯಲ್ಲಿ ಇಲ್ಲ. ಮೂರು ರಸ್ತೆಗಳಲ್ಲಿ ಸಂಚಾರವೇ ಅಸಾಧ್ಯ ಎಂಬಂತಿದ್ದರೆ ಇನ್ನೊಂದರಲ್ಲಿ ಸುತ್ತು ಬಳಸಿ ಪ್ರಯಾಣಿಸಬೇಕು. ಅರಣ್ಯ ವ್ಯಾಪ್ತಿ, ಕಚ್ಚಾ ರಸ್ತೆ, ಸೇತುವೆ ಇಲ್ಲದಿರುವುದು ಇಲ್ಲಿನ ದಶಕಗಳ ಸಮಸ್ಯೆ. ಇವುಗಳನ್ನು ಅಭಿವೃದ್ಧಿಪಡಿಸಿ ಸಂಚಾರ ಮುಕ್ತವನ್ನಾಗಿಸಿದರೆ ಮಡಿಕೇರಿ-ಸುಳ್ಯ- ಮಂಗಳೂರು ಸಂಚಾರ ನಿರ್ಬಂಧದ ಪ್ರಮೇಯವೇ ಬಾರದು. ಸಂಪಾಜೆ-ಮಡಿಕೇರಿ ರಸ್ತೆ ಸಂಪರ್ಕ ಕಡಿತವಾದಾಗ ಇಲಾಖೆ, ಸಚಿವರಿಗೆ, ಸರಕಾರಕ್ಕೆ ಇದನ್ನು ಮನವರಿಕೆ ಮಾಡಲಾಗಿತ್ತು. ಘಟನೆ ಸಂಭವಿಸಿ ವರ್ಷವಾಗುತ್ತಿದ್ದರೂ ಪರ್ಯಾಯ ರಸ್ತೆ ಅಭಿವೃದ್ಧಿ ಕಂಡಿಲ್ಲ.

ಪರ್ಯಾಯ ರಸ್ತೆಗಳಿವು
ಅರಂತೋಡು – ಸಂಪಾಜೆ – ಕಲ್ಲುಗುಂಡಿ – ಬಾಲೆಂಬಿ – ದಬ್ಬಡ್ಕ – ಕೊಪ್ಪಟ್ಟಿ – ಚೆಟ್ಟಿಮಾನಿ – ಭಾಗಮಂಡಲ – ಮಡಿಕೇರಿ ನಡುವೆ 72 ಕಿ.ಮೀ. ದೂರದ ರಸ್ತೆಯಲ್ಲಿ ಸುಳ್ಯ-ಮಡಿಕೇರಿ ಸಂಚಾರಕ್ಕೆ ಒಂದೂವರೆ ತಾಸು ಸಾಕು. ಇಲ್ಲಿನ 1 ಕಿ.ಮೀ. ದೂರಕ್ಕೆ ಅರಣ್ಯ ಇಲಾಖೆ ತಕರಾರು, ಸಣ್ಣ ಎರಡು ಸೇತುವೆ ನಿರ್ಮಾಣ ಆಗದಿರುವುದು ಇರುವ ಅಡ್ಡಿ.ಇನ್ನೊಂದು ಸಂಪರ್ಕ ಬ್ರಿಟಿಷರ ಕಾಲದ ತೊಡಿಕಾನ-ಪಟ್ಟಿಘಾಟಿ-ತಣ್ಣಿ ಮಾನಿ-ಭಾಗಮಂಡಲ ರಸ್ತೆ. ಇದು ಬಾಚಿ ಮಲೆಯಲ್ಲಿ ಬಾಗಮಂಡಲ ರಸ್ತೆಯನ್ನು ಸಂಧಿಸುತ್ತದೆ. 40 ಕಿ.ಮೀ. ದೂರದ ಈ ರಸ್ತೆ ದ.ಕ. ಮತ್ತು ಕೊಡಗು ಜಿಲ್ಲೆಯನ್ನುಅತಿ ಕಡಿಮೆ ಅವಧಿಯಲ್ಲಿ ಸಂಪರ್ಕಿಸುವಂಥದ್ದು. 6 ಕಿ.ಮೀ. ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿಯಾಗಿದೆ.

ಮೂರನೆಯದು ಪೆರಾಜೆ- ಪಟ್ಟಿಘಾಟಿ – ಆವಂದೂರು- ತಣ್ಣಿಮಾನಿ ರಸ್ತೆ. ಇದರಲ್ಲಿ ಭಾಗಮಂಡಲಕ್ಕೆ 29 ಕಿ.ಮೀ. ಇಲ್ಲೂ ಅರಣ್ಯ ಭೂಮಿ ಸಮಸ್ಯೆ ರಸ್ತೆ ವಿಸ್ತರಣೆಗೆ ಅಡ್ಡಗಾಲು.

Advertisement

4ನೆಯದು ಅರಂತೋಡು -ಮರ್ಕಂಜ -ಎಲಿಮಲೆ – ಸುಬ್ರಹ್ಮಣ್ಯ- ಕಲ್ಮಕಾರು – ಗಾಳಿಬೀಡು ರಸ್ತೆ. ಕಲ್ಮಕಾರು – ಗಾಳಿಬೀಡು ತನಕ ಕಚ್ಚಾ ರಸ್ತೆ ಇದ್ದು, ಮಡಿಕೇರಿ ಚೆಕ್‌ಪೋಸ್ಟ್‌ಗೆ ಜೋಡಣೆ ಆಗುತ್ತದೆ. ಇದರಲ್ಲಿ ಸುಬ್ರಹ್ಮಣ್ಯದಿಂದ ಮಡಿಕೇರಿಗೆ ಕೇವಲ 45 ಕಿ.ಮೀ. 1972ರಲ್ಲಿಯೇ ಶಿಲಾನ್ಯಾಸ ನಡೆದಿದ್ದರೂ ಅರಣ್ಯ ವ್ಯಾಪ್ತಿಗೆ ಸೇರಿರುವುದರಿಂದ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿಲ್ಲ.

ಕಳೆದ ಬಾರಿಯ ಏಕೈಕ ಕೊಂಡಿ
ಕಳೆದ ಬಾರಿ ಮಡಿಕೇರಿ-ಸುಳ್ಯ ನಡುವೆ ಏಕೈಕ ಕೊಂಡಿ ಆಗಿದ್ದದ್ದು ಸುಳ್ಯ-ಆಲೆಟ್ಟಿ ಪಾಣತ್ತೂರು-ಕರಿಕೆ- ಭಾಗಮಂಡಲ-ಮಡಿಕೇರಿ ರಸ್ತೆ. ಏಕಪಥ, ಗುಡ್ಡ ಕುಸಿತದ ಭೀತಿ ಇದ್ದರೂ ಜನರಿಗೆ ಈ ರಸ್ತೆ ಅನಿವಾರ್ಯವಾಗಿತ್ತು. ಘನ ವಾಹನ ಹೊರತುಪಡಿಸಿ ಉಳಿದ ವಾಹನಗಳು 98 ಕಿ.ಮೀ. ದೂರದ ಈ ರಸ್ತೆಯನ್ನು ಬಳಸಿದ್ದವು. ಸುಳ್ಯ-ಕರಿಕೆ-ಮಡಿಕೇರಿ ರಸ್ತೆಯ ಕೊಡಗು ವ್ಯಾಪ್ತಿಯ 30 ಕಿ.ಮೀ. ಮೇಲ್ದರ್ಜೆಗೇರಿಸಲು ಲೋಕೋಪಯೋಗಿ ಇಲಾಖೆ ಸಲ್ಲಿಸಿರುವ 13 ಕೋ.ರೂ. ಪ್ರಸ್ತಾವನೆ ಕಡತದಲ್ಲೇ ಬಂದಿಯಾಗಿದೆ.

ಬೇಡಿಕೆ ಸಲ್ಲಿಸಿದ್ದೇವೆ
13 ಕೋ.ರೂ.ಗಳ ರಸ್ತೆ ಮೇಲ್ದರ್ಜೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಬಿಡುಗಡೆಯಾಗಿಲ್ಲ. ಕರಿಕೆ ಗಡಿ ಭಾಗದಲ್ಲಿ ರಸ್ತೆ ಅಭಿವೃದ್ಧಿಗೆ 2 ಕೋ.ರೂ. ಅನುದಾನಕ್ಕೆ ಅನುಮೋದನೆ ದೊರೆತಿದೆ. ಮಳೆ ಹಾನಿ ಯೋಜನೆಯಲ್ಲಿ 2 ಕಿ.ಮೀ. ರಸ್ತೆ ದುರಸ್ತಿಗೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ದೇವರಾಜು, ಎಂಜಿನಿಯರ್‌, ಪಿಡಬ್ಲ್ಯುಡಿ ಇಲಾಖೆ, ಮಡಿಕೇರಿ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next