ಕುಂದಾಪುರ: ರಾಜ್ಯ ವಿಧಾನಸಭೆಗೆ 2018ರ ವರೆಗೆ ನಡೆದಿರುವ ಚುನಾವಣೆಗಳಲ್ಲಿ ಅವಿಭಜಿತ ದ.ಕ. ಜಿಲ್ಲೆಯ 13 ಕ್ಷೇತ್ರಗಳ ಪೈಕಿ ಅತೀ ಕಡಿಮೆ ಅಂತರದ ಗೆಲುವಿನ ಶ್ರೇಯ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ. 1983ರಲ್ಲಿ ನಡೆದ ಚುನಾವಣೆಯಲ್ಲಿ ಬೈಂದೂರಿನಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಬಿ. ಅಪ್ಪಣ್ಣ ಹೆಗ್ಡೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಎಸ್. ಆಚಾರ್ ಅವರ ವಿರುದ್ಧ 24 ಮತಗಳ ಅಂತರದಿಂದ ಗೆದ್ದಿದ್ದರು.
ಇದು ಉಭಯ ಜಿಲ್ಲೆಗಳ ಈವರೆಗಿನ ಕನಿಷ್ಠ ಅಂತರದ ಜಯವಾಗಿರುವುದು ವಿಶೇಷ. ಆಗ ಒಟ್ಟು 53,579 ಮತ ಚಲಾವಣೆಯಾಗಿದ್ದು, ಅಪ್ಪಣ್ಣ ಹೆಗ್ಡೆಯವರು 25,771 ಮತ ಪಡೆದಿದ್ದರೆ, ಅವರ ಸಮೀಪದ ಸ್ಪರ್ಧಿ ಜಿ.ಎಸ್. ಆಚಾರ್ 25,747 ಮತ ಪಡೆಯುವ ಮೂಲಕ ನಿಕಟ ಅಂತರದಿಂದ ಸೋಲನುಭವಿಸಿದ್ದರು. ಇನ್ನು ಇದೇ ಬೈಂದೂರಿನಿಂದ 1985ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಜಿ.ಎಸ್. ಆಚಾರ್ ಅವರು ಆಗ ಜನತಾದಳದಲ್ಲಿದ್ದ ಮಾಣಿ ಗೋಪಾಲ್ ಅವರ ಎದುರು 404 ಮತಗಳಿಂದ ಜಯ ಗಳಿಸಿದ್ದರು. 1989ರಲ್ಲಿಯೂ ಇದೇ ಮಾಣಿ ಗೋಪಾಲ್ ಅವರ ವಿರುದ್ಧ ಮತ್ತೂಮ್ಮೆ ಜಿ.ಎಸ್. ಆಚಾರ್ ಅವರು 509 ಮತಗಳ ಅಂತರದಿಂದ ಗೆದ್ದಿದ್ದರು.