ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಡಿಎಂಡಿಕೆ ನಾಯಕ ವಿಜಯಕಾಂತ್ (71) ಅವರು ಗುರುವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿರುವ ಸುದ್ದಿ ಇಡೀ ಸಿನಿಲೋಕಕ್ಕೆ ಶಾಕ್ ನೀಡಿದೆ. ಅವರ ನಿಧನಕ್ಕೆ ಕಮಲ್ ಹಾಸನ್, ರಜಿನಿಕಾಂತ್ ಪ್ರಧಾನಿ ಮೋದಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.
ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿತ್ತು ಆದರೆ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರ ನಿಧನದ ಸುದ್ದಿ ಸಿನಿಲೋಕಕ್ಕೆ ಆಘಾತ ನೀಡಿದೆ. ಈ ಸುದ್ದಿ ಚಾಲ್ತಿರುವಾಗಲೇ ಖ್ಯಾತ ನಿರ್ದೇಶಕರೊಬ್ಬರು ಮಾಡಿರುವ ಗಂಭೀರ ಆರೋಪ ಎಲ್ಲೆಡೆ ಸದ್ದು ಮಾಡುತ್ತಿದೆ.
ಮಾಲಿವುಡ್ ಸಿನಿಮಾರಂಗದ ಖ್ಯಾತ ನಿರ್ದೇಶಕ ಅಲ್ಫೋನ್ಸ್ ಪುತ್ರೆನ್ ಅವರು ವಿಜಯಕಾಂತ್ ಅವರ ನಿಧನದ ಬಗ್ಗೆ ಹಾಕಿರುವ ಇನ್ಸ್ಟಾಗ್ರಾಮ್ ಸ್ಟೋರಿ ಎಲ್ಲೆಡೆ ಹರಿದಾಡುತ್ತಿದೆ.
ವಿಜಯಕಾಂತ್ ಅವರು ಕೊಲೆಯಾಗಿದ್ದಾರೆ. ಇದರ ಬಗ್ಗೆ ತನಿಖೆ ಮಾಡಿ ಎಂದು ನಟ, ರಾಜಕಾರಣಿ ಉದಯನಿಧಿ ಸ್ಟಾಲಿನ್ ಅವರಲ್ಲಿ ಮನವಿ ಮಾಡಿದ್ದಾರೆ.
ಇನ್ಸ್ಟಾ ಸ್ಟೋರಿ ಏನಿದೆ: ನಾನು ಕೇರಳದವನು. ಇದು ಉದಯನಿಧಿ ಅವರಿಗಾಗಿ. ನಾನು ಕೇರಳದ ಕಚೇರಿಯಲ್ಲಿ ಕೂತಿದ್ದೇನೆ. ನಾನು ಇದರ ಬಗ್ಗೆ ತನಿಖೆ ಆಗಬೇಕೆಂದು ಕೇಳುತ್ತಿದ್ದೇನೆ. ಕಲೈಂಜರ್, ಐರನ್ ಲೇಡಿ ಜಯಲಲಿತಾ, ಕೊಂದವರು ಯಾರೆಂದು ನಾನು ಕೇಳಿದ್ದೆ. ಈಗ ಕ್ಯಾಪ್ಟನ್ ವಿಜಯಕಾಂತ್ ಅವರನ್ನು ಕೊಲೆ ಮಾಡಿದವರನ್ನು ನೀವು ಪತ್ತೆ ಮಾಡಬೇಕು. ನೀವು ಇದನ್ನು ನಿರ್ಲಕ್ಷ್ಯ ಮಾಡಿದರೆ, ಅವರು ಈಗಾಗಲೇ ಇಂಡಿಯನ್ -2 ಸೆಟ್ ನಲ್ಲಿ ಸ್ಟಾಲಿನ್ ಹಾಗೂ ಕಮಲ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ನೀವು ಈಗ ಕೊಲೆಗಾರರ ಹಿಂದೆ ಬೀಳದೆ ಇದ್ದರೆ, ಅವರು ನಿಮ್ಮ ಅಥವಾ ಸ್ಟಾಲಿನ್ ಅವರನ್ನು ಟಾರ್ಗೆಟ್ ಮಾಡುತ್ತಾರೆ. ʼನೇರಂʼ ಸಿನಿಮಾ ಹಿಟ್ ಆದ ಬಳಿಕ ನೀವು ನನಗೆ ಐಫೋನ್ ಗಿಫ್ಟ್ ಆಗಿ ಕೊಟ್ಟದ್ದು ನೆನಪಿದೆಯಾ? ನಿಮಗೆ ನೆನಪಿರಬಹುದೆಂದುಕೊಳ್ಳುತ್ತೇನೆ. ಕೊಲೆಗಾರರು ಹಾಗೂ ಅವರ ಉದ್ದೇಶವನ್ನು ಕಂಡು ಹಿಡಿಯಿರಿ” ಎಂದು ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಇದಲ್ಲದೆ ಅವರು ಅಜಿತ್ ಕುಮಾರ್ ಅವರು ರಾಜಕೀಯಕ್ಕೆ ಇಳಿಯುವಂತೆ ಹೇಳಿರುವ ಸ್ಟೋರಿಯನ್ನು ಹಾಕಿದ್ದಾರೆ.
ʼಪ್ರೇಮಂʼ ನಿರ್ದೇಶಕ ಒಂದಾದ ಮೇಲೆ ಒಂದಾರಂತೆ ಈ ರೀತಿಯ ಸ್ಟೋರಿ ಹಾಗೂ ಪೋಸ್ಟ್ ಹಾಕಿರುವುದನ್ನು ನೋಡಿರುವ ಕೆಲವರು ಅವರ ಖಾತೆ ಹ್ಯಾಕ್ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಅವರು ಬಳಲುತ್ತಿರುವ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಕಾಯಿಲೆಯಿಂದ ಈ ರೀತಿ ವರ್ತಿಸುತ್ತಿದ್ದಾರೆ ಕಮೆಂಟ್ ಮಾಡಿದ್ದಾರೆ.