ಮಂಗಳೂರು: ದೇಶದಲ್ಲಿ ಮೌಲ್ಯಯುತ, ಸಂಸ್ಕಾರ, ಸಂಸ್ಕೃತಿ ಬೆಸೆಯುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ದ.ಕ. ಜಿಲ್ಲೆ ಶಿಕ್ಷಣ ಕಾಶಿಯಾಗಿದ್ದು, ಸಂತ ಅಲೋಶಿಯಸ್ ಸಂಸ್ಥೆ ಜಿಲ್ಲೆಯ ಹಿರಿಮೆಯಾಗಿದೆ. 144 ವರ್ಷಗಳ ಇತಿಹಾಸದಲ್ಲಿ ಅನೇಕ ಸಾಧಕರನ್ನು ಸಂಸ್ಥೆ ದೇಶಕ್ಕೆ ನೀಡಿರುವುದು ಹೆಮ್ಮೆಯ ವಿಚಾರ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಸಂತ ಅಲೋಶಿಯಸ್ ಕಾಲೇಜು ಪರಿಗಣಿತ ವಿಶ್ವವಿದ್ಯಾನಿಲಯ ಮಾನ್ಯತೆ ಪಡೆದ ಹಿನ್ನೆಲೆಯಲ್ಲಿ ಬುಧವಾರ ಕಾಲೇಜು ಆವರಣದಲ್ಲಿ ನಡೆದ ಅಧಿಕೃತ ಘೋಷಣೆ, ಸಂಭ್ರಮಾಚರಣೆ ಹಾಗೂ ನೂತನ ವಿ.ವಿ.ಯ ಲೋಗೋ ಅನಾವರಣಗೊಳಿಸಿ ಅವರು ಮಾತನಾಡಿದರು.
ಸಂತ ಅಲೋಶಿಯಸ್ ಸಂಸ್ಥೆಯು ದ.ಕ. ಜಿಲ್ಲೆಯ ಇತಿಹಾಸದಲ್ಲಿ 5ನೇ ಡೀಮ್ಡ್ ಯುನಿವರ್ಸಿಟಿಯಾಗಿದೆ. ಇಲ್ಲಿನ ಬೋಧಕ ವರ್ಗವು ಅತ್ಯಂತ ನೈಪುಣ್ಯ ಹೊಂದಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಪ್ರಮಾಣಿಕ ಪ್ರಯತ್ನ ನಡೆಸುತ್ತಿದೆ. ಹಲವು ವರ್ಷದ ನಿರಂತರ ಪ್ರಯತ್ನಕ್ಕೆ ಇಂದು ಫಲ ಸಿಕ್ಕಿದೆ. ಪ್ರಕ್ರಿಯೆ ನಡೆಯುವ ವೇಳೆ ದಿಲ್ಲಿಯಲ್ಲಿ ಅನೇಕ ದಿನಗಳು ಕಾಯಬೇಕಾದ ಅನಿವಾರ್ಯ ಬಂದಿತ್ತು. ಇಲಾಖೆಯ ಎಲ್ಲ ಕೆಲಸ ಮುಗಿಸಿಕೊಂಡು ನಮ್ಮಲ್ಲಿ ಬಂದು ತಾಳ್ಮೆಯಿಂದ ಈ ಕೆಲಸ ಕಾರ್ಯಗಳನ್ನು ಇಲ್ಲಿನ ಪ್ರಮುಖರು ನಡೆಸಿದ್ದಾರೆ. ಈ ಕನಸು ನನಸಾಗಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಂಪೂರ್ಣ ಸಹಕಾರ ನೀಡಿರುವುದು ಸ್ಮರಣೀಯ. ಭಗವಂತನ ಪ್ರೇರಣೆಯಿಂದ ಶತಮಾನದ ಕನಸು ನನಸಾಗಿದೆ ಎಂದರು.
ಉಡುಪಿ ಧರ್ಮಪ್ರಾಂತದ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಕ್ ಲೋಬೊ ಮಾತನಾಡಿ, ಶಿಕ್ಷಣ, ಜ್ಞಾನಾರ್ಜನೆ ಮೂಲಕ ಮನುಕುಲಕ್ಕೆ ನೀಡಿರುವ ಸೇವೆಯ ಮೈಲುಗಲ್ಲು ಅನಾವರಣಗೊಂಡಿದೆ. ಸಂಸ್ಥೆಯು ವಿವಿಧ ಹಂತಗಳಲ್ಲಿ ಬೆಳೆದು ಇಂದು ಉನ್ನತ ಸ್ಥಾನಕ್ಕೆ ತಲುಪಿರುವುದು ಹೆಮ್ಮೆಯ ವಿಚಾರ. ನಿರಂತರ ಪರಿಶ್ರಮ ಹಾಗೂ ಸಮರ್ಪಣ ಭಾವದಿಂದಾಗಿ ಸಂಸ್ಥೆ ಈ ಅಸಾಧಾರಣ ಸಾಧನೆ ಮಾಡಲು ಸಾಧ್ಯವಾಗಿದೆ. ಶಿಕ್ಷಣದಲ್ಲಿ ನೀಡುತ್ತಿರುವ ಅಪ್ರತಿಮ ಸೇವೆಯಿಂದಾಗಿ ಸಂಸ್ಥೆಯ ಹಿರಿಮೆಗೆ ಪರಿಗಣಿತ ವಿಶ್ವ ವಿದ್ಯಾಲಯದ ಗರಿ ಸಿಕ್ಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಲೋಶಿಯಸ್ ವಿ.ವಿ.ಯ ಕುಲಪತಿ ವಂ| ಡೈನೀಶಿಯಸ್ ವಾಸ್ ಎಸ್.ಜೆ. ಮಾತನಾಡಿ, ಸಂಸ್ಥೆ ಅನೇಕ ವರ್ಷಗಳಿಂದ ಹೊಂದಿದ್ದ ಕನಸು ನನಸಾಗಲು ಹಲವು ಮಂದಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಅದರ ಫಲವೇ ಪರಿಗಣಿತ ವಿಶ್ವವಿದ್ಯಾಲಯವಾಗಿದೆ ಎಂದರು.
ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಶಿವಮೊಗ್ಗ ಬಿಷಪ್ ರೈ ರೆ| ಡಾ| ಫ್ರಾನ್ಸಿಸ್ ಸೆರಾವೊ, ಮಂಗಳೂರಿನ ವಿಶ್ರಾಂತ ಬಿಷಪ್ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ, ಗುಲ್ಬರ್ಗಾ ಬಿಷಪ್ ರಾಬರ್ಟ್ ಮಿರಾಂದ, ವಂ| ಫ್ರಾನ್ಸಿಸ್ ಗೋಮ್ಸ್, ಕಾರ್ಪೊರೇಟರ್ ಎ.ಸಿ. ವಿನಯ್ ರಾಜ್ ಉಪಸ್ಥಿತರಿದ್ದರು.
ರೆಕ್ಟರ್ ವಂ| ಮೆಲ್ವಿನ್ ಪಿಂಟೊ ಎಸ್.ಜೆ. ಸ್ವಾಗತಿಸಿದರು. ಪ್ರಭಾರ ಉಪ ಕುಲಪತಿ ಡಾ| ಪ್ರವೀಣ್ ಮಾರ್ಟಿಸ್ ವಂದಿಸಿದರು. ಪ್ರಾಧ್ಯಾಪಕಿ ಡಾ| ಮೋನ ಮೆಂಡೋನ್ಸಾ ನಿರೂಪಿಸಿದರು. ರಿಜಿಸ್ಟ್ರಾರ್ ಡಾ| ಆಲ್ವಿನ್ ಡೆಸಾ ಸಹಕರಿಸಿದರು.