ಹೊಸದಿಲ್ಲಿ: ಭಾರತೀಯ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ ಹಾಗೂ ಹೋಮಿಯೋಪತಿ ವೈದ್ಯರೂ ಬ್ರಿಜ್‌ಕೋರ್ಸ್ ಮಾಡಿಕೊಂಡಲ್ಲಿ, ಅಲೋಪತಿ ಔಷಧವನ್ನೂ ನೀಡುವ ಅವಕಾಶವನ್ನು ಒದಗಿಸಲು ಕೇಂದ್ರ ಸರಕಾರ ನಿರ್ಧರಿಸಿದೆ!
ಈ ಸಂಬಂಧ ಲೋಕಸಭೆಯಲ್ಲಿ ಮಸೂದೆ ಯನ್ನು ಮಂಡಿಸಲಾಗಿದೆ. ರಾಷ್ಟ್ರೀಯ ವೈದ್ಯ ಕೀಯ ಆಯೋಗ ಮಸೂದೆ – 2017ರಲ್ಲಿ ಈ ಅವಕಾಶದ ಕುರಿತು ಪ್ರಸ್ತಾವಿಸಲಾಗಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆ ತರಲು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಯನ್ನು ವಜಾಗೊಳಿಸಿ, ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ಸ್ಥಾಪಿಸ ಲಾಗಿದೆ. ಇದಕ್ಕಾಗಿ ಮಂಡಿಸಲಾದ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ 2017ರಲ್ಲಿ ಈ ಅವಕಾಶ ಕಲ್ಪಿಸಲಾಗಿದೆ.
ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ರಾಷ್ಟ್ರೀಯ ವೈದ್ಯಕೀಯ ಆಯೋಗ, ಹೋಮಿಯೋಪತಿ ರಾಷ್ಟ್ರೀಯ ಕೌನ್ಸಿಲ್ ಮತ್ತು ಭಾರತೀಯ ಔಷಧದ ಕೇಂದ್ರೀಯ ಕೌನ್ಸಿಲ್ ಸಭೆ ಸೇರಬೇಕು ಮತ್ತು ಭಾರತೀಯ ಔಷಧ ವ್ಯವಸ್ಥೆ, ಆಧುನಿಕ ಔಷಧ ವಿಧಾನ, ಹೋಮಿಯೋಪತಿಯ ಮಧ್ಯೆ ಸಹಯೋಗ ಸಾಧಿಸಲು ಕ್ರಮ ಕೈಗೊಳ್ಳಬೇಕಿದೆ. ಎಲ್ಲ ಸಮಿತಿಗಳ ಸಹಭಾಗಿತ್ವ ಪಡೆದು ವಿವಿಧ ವೈದ್ಯ ಕೀಯ ಪದ್ಧತಿಗಳಲ್ಲಿ ಪರಿಣತಿ ಪಡೆದವರು ಬ್ರಿಜ್ ಕೋರ್ಸ್ ಮೂಲಕ ಇತರ ವೈದ್ಯಕೀಯ ಪದ್ಧತಿಗಳಲ್ಲೂ ಪ್ರಾಕ್ಟೀಸ್ ಮಾಡಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಲಾಗಿದೆ.
ನೂತನ ಆಯೋಗದಡಿ ನಾಲ್ಕು ಸ್ವಾಯತ್ತ ಮಂಡಳಿಗಳನ್ನು ಸ್ಥಾಪಿಸಲಾಗುತ್ತದೆ. ಇದರ ಅಡಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ವೈದ್ಯಕೀಯ ಸಂಸ್ಥೆಗಳ ವಿಶ್ಲೇಷಣೆ ಮತ್ತು ರೇಟಿಂಗ್ ಹಾಗೂ ವೈದ್ಯರ ನೋಂದಣಿಗಾಗಿ ಮಂಡಳಿ ಸ್ಥಾಪಿಸಲಾಗುತ್ತದೆ. ಆಯೋಗಕ್ಕೆ ಸರಕಾರ ಚೇರ್‌ಮನ್ ಹಾಗೂ ಸದಸ್ಯರನ್ನು ನಾಮನಿರ್ದೇಶನ ಮಾಡಲಿದೆ. ಅಲ್ಲದೆ, ಮಂಡಳಿ ಸದಸ್ಯರನ್ನು ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿನ ಸಮಿತಿಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಮಸೂದೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಯನ್ನು ಪ್ರಸ್ತಾವಿಸಲಾಗಿದೆ. ಅಷ್ಟೇ ಅಲ್ಲ, ಶಿಕ್ಷಣ ಪೂರೈಸಿದವರು ಪ್ರಾಕ್ಟೀಸ್ ಆರಂಭಿಸಲು ಪರೀಕ್ಷೆ ಬರೆದು ಲೈಸೆನ್ಸ್ ಪಡೆಯಬೇಕಾಗುತ್ತದೆ. ಈ ಮಸೂದೆ ಅನು ಮೋದನೆಗೊಂಡರೆ ಸದ್ಯ ಪ್ರಾಕ್ಟೀಸ್ ಮಾಡುತ್ತಿರುವ ವೈದ್ಯರು ಮೂರು ವರ್ಷದೊಳಗೆ ಪರೀಕ್ಷೆ ಪಾಸಾಗಬೇಕಾಗುತ್ತದೆ.
ರೋಗಿಗಳ ಗತಿ ಏನು?: ಐದೂವರೆ ವರ್ಷದ ವೈದ್ಯಕೀಯ ಪದವಿ ಪಡೆದವರು ನೀಡುವ ಚಿಕಿತ್ಸೆಗೂ 3ರಿಂದ 6 ತಿಂಗಳ ಬ್ರಿಜ್ ಕೋರ್ಸ್ ಪಡೆದವರು ನೀಡುವ ಚಿಕಿತ್ಸೆ ಒಂದೇ ಸಮ ನಾಗಿರುವುದೇ? ಒಂದೊಮ್ಮೆ ಬ್ರಿಜ್ ಕೋರ್ಸ್ ಪಡೆದು ಅಲೋಪಥಿ ಚಿಕಿತ್ಸೆ ನೀಡಲು ಮುಂದಾದರೆ ದೇಶದ ರೋಗಿಗಳ ಗತಿ ಏನು? ದೇಶದ ಜನರ ಆರೋಗ್ಯ ರಕ್ಷಣೆ ಹೊಣೆ ಹೊತ್ತ ಕೇಂದ್ರ ಸರಕಾರ ಜನರ ಆರೋಗ್ಯದ ಜತೆಗೆ ಚೆಲ್ಲಾಟವಾಡಬಾರದು ಎಂದು ಅಲೋಪಥಿ ವೈದ್ಯರು ಪ್ರತಿಕ್ರಿಯಿಸಿದ್ದಾರೆ.