Advertisement
ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ಮಾಹಿತಿ ನೀಡಿದ್ದಾರೆ. ಪಾರ್ಟಿ ನಡೆದ ಸಂದರ್ಭದಲ್ಲಿ ಶ್ರೀಲತಾ ಸ್ಥಳದಲ್ಲಿದ್ದರು. ಅವರ ಪುತ್ರ ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಇದೆ. ಹಾಸನ ಪೊಲೀಸರು ತಪಾಸಣೆಗೆ ಬಂದಾಗ ಶ್ರೀಲತಾ ತಾನು ಮಂಗಳೂರು ಸಿಸಿಬಿ ಎಎಸ್‌ಐ ಎಂದು ಹೇಳಿ ವಾಗ್ವಾದ ನಡೆಸಿದ್ದು, ಹುದ್ದೆ ದುರುಪಯೋಗ ಮಾಡಿಕೊಂಡಿದ್ದಾರೆ. ಅವರಿಗೆ ಪಾರ್ಟಿಯ ಆಯೋಜಕರ ಸಂಪರ್ಕವಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಈಗಾಗಲೇ ಹಾಸನ ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಕೊರೊನಾ ಮಾರ್ಗಸೂಚಿಗಳಿದ್ದರೂ ಉಲ್ಲಂಘಿಸಿ, ಅನುಮತಿ ಪಡೆಯದೆ ನಡೆದ ಪಾರ್ಟಿಯಲ್ಲಿ ಮಂಗಳೂರು, ಬೆಂಗಳೂರಿನ ಸುಮಾರು 130ಕ್ಕೂ ಅಧಿಕ ಯುವಕ -ಯುವತಿಯರು ಪಾಲ್ಗೊಂಡಿದ್ದರು. ಮದ್ಯ, ಡ್ರಗ್ಸ್ ಬಳಕೆ ಮಾಡಲಾಗಿತ್ತು ಎಂಬ ಆರೋಪವಿದೆ. ಹಾಸನ ಎಸ್.ಪಿ. ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಪೊಲೀಸ್ ದಾಳಿ ನಡೆದಿದ್ದು, ಇನ್ನೂ ಹಲವರ ಬಂಧನ ಬಾಕಿ ಇದೆ. ನಗರಗಳಲ್ಲಿ ಕೊರೊನಾ ರಾತ್ರಿ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಮತ್ತು ಪೊಲೀಸರ ಕಣ್ತಪ್ಪಿಸಿ ಮೋಜು ನಡೆಸುವ ಉದ್ದೇಶದಿಂದ ಒಳಪ್ರದೇಶದ ಎಸ್ಟೇಟ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ. ಶ್ರೀಲತಾ ಈ ರೇವ್‌ಪಾರ್ಟಿ ಆಯೋಜನೆಯಲ್ಲಿ ಆಯೋಜಕರಿಗೆ ಹೇಗೆ ನೆರವಾಗಿದ್ದರು ಎಂಬ ತನಿಖೆ ಇನ್ನಷ್ಟೇ ನಡೆಯಬೇಕಿದೆ.