Advertisement

ಎಲ್ಲರೂ ಒಗ್ಗೂಡಿ ಸಹ ಪಂಕ್ತಿ ಭೋಜನ ನಡೆಸಿ

07:29 AM Feb 23, 2019 | |

ಮೈಸೂರು: ರಾಜ ಮಹಾರಾಜರುಗಳು ಶೂದ್ರರನ್ನು ಜೀತಕ್ಕೆ ಬಳಸಿಕೊಳ್ಳುತ್ತಿದ್ದರು. ಕರ್ನಾಟಕದಲ್ಲಿ ಬಸವಣ್ಣ ಹುಟ್ಟದಿದ್ದರೆ ಜಾತಿ ಮತ್ತು ಜೀತಪದ್ಧತಿ ಇನ್ನೂ ಜೀವಂತವಾಗಿರುತ್ತಿತ್ತು ಎಂದು ರಮ್ಮನಹಳ್ಳಿ ಮಠದ ಬಸವಲಿಂಗಮೂರ್ತಿ ಸ್ವಾಮೀಜಿ ಹೇಳಿದರು.

Advertisement

ಮೈಸೂರು ತಾಲೂಕು ವರುಣ ಗ್ರಾಮದ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ತಾಲ್ಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಸ್ಪೃಶ್ಯತಾ ನಿರ್ಮೂಲನಾ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಲ್ಲಿ ಸೂರ್ಯ ಮತ್ತು ಬೆಂಕಿ ಎರಡೇ ಅಸ್ಪೃಶ್ಯ, ಉಳಿದಿದ್ದೆಲ್ಲಾ ಸ್ಪೃಶ್ಯ. ಭಾರತದಲ್ಲಿ ಅಶೋಕ ಚಕ್ರವರ್ತಿಯನ್ನು ಹೊರತುಪಡಿಸಿ ಉಳಿದ ರಾಜರೆಲ್ಲರೂ ಅಸ್ಪೃಶ್ಯತೆ ವಿಚಾರದಲ್ಲಿ ತಟಸ್ಥರಾಗಿದ್ದರು. ಬುದ್ಧ, ಬಸವಣ್ಣ, ಯೇಸು, ಪೈಗಂಬರ್‌, ನಾರಾಯಣಗುರು, ಕಬೀರ್‌ದಾಸ, ಮೀರಾಬಾಯಿಯಂತಹ ಮಹನೀಯರು ಅಸ್ಪೃಶ್ಯತೆ ಹೋಗಲಾಡಿಸಲು ಶ್ರಮಿಸಿದರು ಎಂದರು.

ಸಮಾಜದಲ್ಲಿ ಜಾತಿಕಲಹ ಮಾಡುವವರು ಅಜ್ಞಾನಿಗಳು, ಮೂಢರು, ಅಹಂಕಾರಿಗಳಾಗಿದ್ದಾರೆ. ದೇವರ ದೃಷ್ಟಿಯಲ್ಲಿ ಯಾರೂ ಕೀಳಲ್ಲ, ಮೇಲಲ್ಲ. ಅಸ್ಪೃಶ್ಯತೆಯನ್ನು ಬೇರು ಸಹಿತ ಕಿತ್ತು ಹಾಕಬೇಕಾದರೆ ಎಲ್ಲರೂ ವಿದ್ಯಾವಂತರಾಗಬೇಕು. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು.

ಡಾ.ಬಿ.ಆರ್‌.ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಎಲ್ಲಾ ಜಾತಿಯ ಬಡವರಿಗೂ, ಸಾಮಾಜಿಕ ನ್ಯಾಯ ದೊರಕಿಸಲು ಶ್ರಮಿಸಿದ್ದಾರೆ. ಎಲ್ಲರೂ ಪ್ರೀತಿಯಿಂದ ಬದುಕಬೇಕು. ಮೇಲ್ವರ್ಗದವರು ಮನಸ್ಸು ಮಾಡಿ ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಹಬ್ಬ ಹರಿದಿನಗಳಲ್ಲಿ ಸಹ ಪಂಕ್ತಿ ಭೋಜನ ಮಾಡಿ ಒಟ್ಟಾಗಿ ಬದುಕಬೇಕು ಎಂದರು.

Advertisement

ಸಮಾರಂಭದಲ್ಲಿ ಮಾಜಿ ಮೇಯರ್‌ ಪುರುಷೋತ್ತಮ್‌, ತಹಶೀಲ್ದಾರ್‌ ರಮೇಶ್‌ಬಾಬು, ಇಒ ಲಿಂಗರಾಜಯ್ಯ, ಎಪಿಎಂಸಿ ಉಪಾಧ್ಯಕ್ಷ ಜವರಪ್ಪ, ಚೋರನಹಳ್ಳಿ ಶಿವಣ್ಣ, ಚೌಹಳ್ಳಿ ನಿಂಗರಾಜು, ಭುಗತಗಳ್ಳಿ ಮಣಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next