Advertisement

ಸಾಲದ ಜೊತೆಗೇ ಸಮಸ್ಯೆಯೂ ಬರುತ್ತದೆ!

06:44 PM Sep 22, 2019 | Sriram |

ಯಾಕೋ ಕೈಯಲ್ಲಿ ದುಡ್ಡೇ ಉಳಿಯೋಲ್ಲ. ಸಂಬಳದ ಹಣ ಎರಡೇ ವಾರದಲ್ಲಿ ಖಾಲಿ ಆಗಿಬಿಡುತ್ತೆ. ಎಲ್ಲಿ, ಹೇಗೆ ಖಾಲಿ ಆಗುತ್ತೆ ಅಂತಾನೇ ಗೊತ್ತಾಗ್ತಾ ಇಲ್ಲ. ಇದು, ಎಲ್ಲರೂ ಹೇಳ್ಳೋ ಸಾಮಾನ್ಯವಾದ ಮಾತು. ಆದರೆ, ದುಡ್ಡನ್ನು ಸರಿಯಾದ ಯೋಜನೆ ಮಾಡಿ ಖರ್ಚು ಮಾಡಿದರೆ, ಚಿಕ್ಕ ಸಂಬಳದ ನೌಕರಿ ಇದ್ದಾಗ ಕೂಡ ಒಂದಷ್ಟು ಹಣ ಉಳಿತಾಯ ಮಾಡಬಹುದು.

Advertisement

ಪರಿಚಯದ ಒಬ್ಬ ವ್ಯಕ್ತಿ ಅಂದುಕೊಳ್ಳಿ .ಅವನು ಆರು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿರುತ್ತಾನೆ. ಅಷ್ಟು ದಿನದವರೆಗೂ ಸಿಟಿಬಸ್‌ ನಲ್ಲಿ ಓಡಾಡುತ್ತಾ ಇದ್ದವನು, ನೌಕರಿ ಸಿಕ್ಕ ಕೆಲವೇ ದಿನಗಳಲ್ಲಿ ಬೈಕ್‌ ನ ಮಾಲೀಕ ಆಗುತ್ತಾನೆ. ಹೇಗಿದ್ದರೂ ಕೆಲಸ ಸಿಕ್ಕಿದೆ. ಅವನ ಬಳಿ ಸಾಕಷ್ಟು ಹಣ ಇರಬಹುದು ಎಂದುಕೊಂಡು ಮಾತು ಶುರು ಮಾಡಿ, ಸ್ವಲ್ಪ ಹಣದ ಅಗತ್ಯ ಇತ್ತು ಅಂದರೆ, ಅಯ್ಯೋ , ದುಡ್ಡು ಇಲ್ಲ ರ್ಸಾ. ಬೈಕ್‌ ತಗೊಂಡೆ ಅಲ್ವ? ಅದರದ್ದೇ ಹತ್ತು ವರ್ಷ ಕಂತು ಕಟ್ಟಬೇಕಿದೆ ಅನ್ನುತ್ತಾನೆ. ಅಂದರೆ, ಕೆಲಸ ಸಿಕ್ಕಿದ ತಕ್ಷಣ ಅವನು ಸಂಬಳದಾರ ಮತ್ತು ಸಾಲಗಾರ-ಎರಡೂ ಆದಂತೆ ಆಯಿತು.

ಸಾಲಗಾರ ಆಗುವುದೆಂದರೆ, ಸಮಸ್ಯೆಗೆ ಸಿಕ್ಕಿಕೊಳ್ಳುವುದು ಅಂತಾನೇ ಅರ್ಥ. ಸಾಲ ಮಾಡದೆಯೇ, ಬೈಕ್‌ನ ಮಾಲೀಕ ಆಗುವ ಅವಕಾಶ ಅವನಿಗೆ ಇತ್ತು. ಹೇಗೆ ಅಂದಿರಾ? ಇಷ್ಟು ದಿನ ಆರಾಮಾಗಿ ಸಿಟಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದವನು, ನೌಕರಿ ಸಿಕ್ಕಿದ ನಂತರ ಕೂಡ ಎರಡು ವರ್ಷಗಳ ಕಾಲ ಬಸ್‌ ನಲ್ಲಿ ಪ್ರಯಾಣ ಮಾಡಬಹುದಿತ್ತು. ಅವನಿಗೆ ಒಂದು ತಿಂಗಳಿಗೆ 12000 ಸಂಬಳ ಅಂದುಕೊಳ್ಳಿ, ಅದರಲ್ಲಿ, ತಿಂಗಳಿಗೆ 2500 ರೂಪಾಯಿ ಉಳಿಸಿದರೂ ವರ್ಷದ ಕೊನೆಗೆ ಆ ಮೊತ್ತ 30,000 ಆಗುತ್ತಿತ್ತು. ಎರಡು ವರ್ಷ ತುಂಬಿದರೆ, ಹೀಗೆ ಉಳಿಸಿದ ಮೊತ್ತವೇ 60,000 ಆಗುತ್ತಿತ್ತು. ಅಕಸ್ಮಾತ್‌, ಮೂರನೇ ವರ್ಷ ಕೂಡ ಬಸ್‌ನಲ್ಲಿ ಓಡಾಡುವ ನಿರ್ಧಾರ ಮಾಡಿ ಉಳಿತಾಯ ಮಾಡಿದ್ದರೆ, ಈ ಹಣವೇ 90,000 ಆಗುತ್ತಿತ್ತು. ಅಷ್ಟೂ ಹಣವನ್ನು ಕೊಟ್ಟು, ನಯಾ ಪೈಸೆ ಸಾಲ ಮಾಡದೆ ಒಂದು ಬೈಕ್‌ ಖರೀದಿಸಬಹುದಿತ್ತು ಅಲ್ಲವಾ?

ಆ ಮೂಲಕ ಸಾಲದ ಶೂಲದಿಂದ ತಪ್ಪಿಸಿಕೊಳ್ಳಬಹುದಿತ್ತು ಅಲ್ಲವಾ? ಉಹೂಂ, ನಮ್ಮಲ್ಲಿ ಹೆಚ್ಚಿನವರು ಹೀಗೆ ಯೋಚನೆಯನ್ನೇ ಮಾಡುವುದಿಲ್ಲ. ಕೈಗೆ ನಾಲ್ಕು ಕಾಸು ಬಂತು ಅಂದರೆ, ತಕ್ಷಣ ಸಾಲ ಮಾಡಲು ಮುಂದಾಗುತ್ತಾರೆ. ನಾಳೆ ಏನಾಗುತ್ತೋ ಯಾರಿಗೆ ಗೊತ್ತು? ಸದ್ಯಸುಲಭದಲ್ಲಿ ಸಾಲ ಸಿಕ್ತಾ ಇದೆ. ಈಗ ತಗೊಂಡು, ಖುಷಿಯಾಗಿದ್ದು, ಲೈಫ್ಅನ್ನು ಎಂಜಾಯ್‌ ಮಾಡೋಣ ಎಂದು ಉಡಾಫೆಯ ಮಾತಾಡುತ್ತಾರೆ. ಬೇರೆ ವಿಷಯದಲ್ಲಿ ನಾಳೆ ಏನು ಬೇಕಾದರೂ ಆಗಬಹುದು. ಆದರೆ, ಸಾಲದ ವಿಷಯದಲ್ಲಿ ಮಾತ್ರ ಯಾವ ಪವಾಡವೂ, ಬದಲಾವಣೆಯೂ ನಡೆಯುವುದಿಲ್ಲ. ಪೂರ್ತಿ ತೀರಿಸುವವರೆಗೂ ಸಾಲ ಎಂಬುದು ಒಂದು ಹೊರೆಯ ರೂಪದಲ್ಲಿ, ಸಮಸ್ಯೆಯ ಹೆಸರಿನಲ್ಲಿ ನಮ್ಮ ಜೊತೆಗೇ ಇರುತ್ತದೆ.

ಹಾಗಾಗಿ, ಸಾಲ ಮಾಡುವ ಮುನ್ನ ಹತ್ತು ಬಾರಿ ಯೋಚಿಸಿ. ಆದಷ್ಟೂ ಸಾಲ ಮಾಡದೇ ಬದುಕಲು, ಅಥವಾ ಕಡಿಮೆ ಮೊತ್ತದ ಸಾಲ ಮಾಡಿ ಬದುಕಲು ಪ್ರಯತ್ನಿಸಿ. ಅಂದಹಾಗೆ, ನೌಕರಿ ಮಾಡುವಷ್ಟು ದಿನವೂ, ಪ್ರತಿ ತಿಂಗಳೂ, ಸಾವಿರ ರೂಪಾಯಿಗಳನ್ನೇ ಆದರೂ ಉಳಿತಾಯ ಮಾಡಲು ಮರೆಯಬೇಡಿ. ಚಿಕ್ಕ ಮೊತ್ತ ಕಷ್ಟ ಕಾಲದಲ್ಲಿ ನಮ್ಮ ಸಹಾಯಕ್ಕೆ ಬಂದೇಬರುತ್ತದೆ, ನೆನಪಿರಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next