Advertisement

ಪೊಲೀಸ್‌ ಸೇವೆಗೇ ವರ್ಮಾ ವಿದಾಯ

09:56 AM Jan 12, 2019 | Harsha Rao |

ಹೊಸದಿಲ್ಲಿ: ಕೇಂದ್ರ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಗಳ ನಡುವಿನ ಕಲಹವು ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಸಿಬಿಐ ಮಾಜಿ ನಿರ್ದೇಶಕ ಅಲೋಕ್‌ ಕುಮಾರ್‌ ವರ್ಮಾ ಪೊಲೀಸ್‌ ಸೇವೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಯಿಂದ ಕೇಂದ್ರ ತನಿಖಾ ಸಂಸ್ಥೆಯ ನಿರ್ದೇಶಕ ಸ್ಥಾನ ದಿಂದ ವಜಾ ಬಳಿಕ ಅವರನ್ನು ಹೋಂಗಾರ್ಡ್ಸ್‌ ಮತ್ತು ಅಗ್ನಿಶಾಮಕ ಸೇವೆಗಳ ಮಹಾ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಅದಾದ ಮಾರನೇ ದಿನವೇ ಅವರು ತಮ್ಮ ಹುದ್ದೆಗೆ ಗುಡ್‌ಬೈ ಹೇಳಿದ್ದಾರೆ.
“ಸಹಜ ನ್ಯಾಯ ನಿರಾಕರಿಸಲಾಗಿದೆ ಮತ್ತು ಒಬ್ಬ ವ್ಯಕ್ತಿ ಮಾಡಿದ ಸುಳ್ಳು ಆರೋಪಗಳನ್ನು ನಂಬಿ ನನ್ನನ್ನು ವರ್ಗಾಯಿಸಲಾಯಿತು’ ಎಂದು ಅವರು ಕೇಂದ್ರ ಸರಕಾರಕ್ಕೆ ಬರೆದ ರಾಜೀನಾಮೆ ಪತ್ರದಲ್ಲಿ ದೂರಿದ್ದಾರೆ. 
ಸೇವೆಗೇ ವಿದಾಯ: ಎಲ್ಲರೂ ಸೇರಿಕೊಂಡು ಆತ್ಮ ವಿಮರ್ಶೆ ಮಾಡಬೇಕಾದ ಸಮಯವಿದು ಎಂದು ಅಲೋಕ್‌ ವರ್ಮಾ ಹೇಳಿಕೊಂಡಿದ್ದು, ಆಯ್ಕೆ ಸಮಿತಿ ಕೇಂದ್ರ ಜಾಗೃತ ದಳ (ಸಿವಿಸಿ) ಸಲ್ಲಿಸಿರುವ ತನಿಖಾ ವರದಿಯನ್ನು ಪರಾಮರ್ಶೆ ನಡೆಸಿಯೇ ಇಲ್ಲ ಎಂದು ಆರೋಪಿಸಿದ್ದಾರೆ.  ಸಹಜ ನ್ಯಾಯ ನಿರಾಕರಿಸಲಾಗಿದೆೆ ಎಂದು ಹೇಳಿಕೊಂಡಿರುವ ಅವರು, ತಮ್ಮನ್ನು ತಕ್ಷಣ ಸೇವೆಯಿಂದ ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ. ಹೋಂ ಗಾರ್ಡ್ಸ್‌ ಮತ್ತು ಅಗ್ನಿಶಾಮಕ ಸೇವೆಗಳ ವಿಭಾಗದ ಮಹಾ ನಿರ್ದೇಶಕ ಸ್ಥಾನವನ್ನು ವಹಿಸಿಕೊಳ್ಳುವ ವಯೋಮಿತಿ ದಾಟಿರುವುದಾಗಿ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ಅರುಣಾಚಲ ಪ್ರದೇಶ, ಗೋವಾ ಮತ್ತು ಮಿಜೋರಾಂ, ಕೇಂದ್ರಾಡಳಿತ ಪ್ರದೇಶ (ಎಜಿಎಂಯುಟಿ) ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿರುವ ವರ್ಮಾ, ದಿಲ್ಲಿ  ಪೊಲೀಸ್‌ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದು, ಜ.31ರಂದು ಸಿಬಿಐ ನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಲಿದ್ದರು.

Advertisement

ಅಸ್ಥಾನಾಗೆ ಹಿನ್ನಡೆ
ಲಂಚ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್‌ ಅಸ್ಥಾನಾ ವಿರುದ್ಧ ದಾಖಲಾಗಿರುವ ಎಫ್ಐಆರ್‌ ಅನ್ನು ರದ್ದು ಮಾಡಲು ದೆಹಲಿ ಹೈಕೋರ್ಟ್‌ ನಿರಾಕರಿಸಿದೆ. ಜತೆಗೆ ತನಿಖೆಯಿಂದ ಯಾವುದೇ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ನ್ಯಾ.ನಜ್ಮಿ ವಜಿರಿ ನೇತೃತ್ವದ ನ್ಯಾಯಪೀಠ ಹೇಳಿದೆ. ಇದರ ಜತೆಗೆ ಸಿಬಿಐ ಡಿಎಸ್‌ಪಿ ದೇವೇಂದ್ರ ಕುಮಾರ್‌ ಮತ್ತು ಮಧ್ಯವರ್ತಿ ಮನೋಜ್‌ ಪ್ರಸಾದ್‌ ವಿರುದ್ಧದ ಎಫ್ಐಆರ್‌ ಕೂಡ ರದ್ದು ಮಾಡಲು ಸಾಧ್ಯವಿಲ್ಲ ಎಂದಿದೆ. ಅಸ್ಥಾನಾ ವಿರುದ್ಧದ ಪ್ರಕರಣದ ತನಿಖೆಯನ್ನು 10 ವಾರಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಿಬಿಐಗೆ ನ್ಯಾಯಪೀಠ ಆದೇಶಿಸಿದೆ. ಹೈದರಾಬಾದ್‌ ಮೂಲಕದ ಉದ್ಯಮಿ ಸತೀಶ್‌ ಬಾಬು ಸನ ಅವರ ದೂರಿನ ಆಧಾರದಲ್ಲಿ ಅಸ್ಥಾನಾ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು. 2018 ಡಿ.20ರಂದು ದೆಹಲಿ ಹೈಕೋರ್ಟ್‌ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿತ್ತು. ವಿಶೇಷ ನಿರ್ದೇಶಕರ ವಿರುದ್ಧ ಸನಾ ಸುಲಿಗೆ, ಭ್ರಷ್ಟಾಚಾರದ ಆರೋಪ ಮಾಡಿದ್ದರು. 

ಪಂಜರದ ಗಿಣಿಗೆ ಹಾರಲು ಉನ್ನತಾಧಿಕಾರದ ಸಮಿತಿ ಅವಕಾಶ ಕೊಡಲೇ ಇಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ಅದು ಎಲ್ಲಾ ವಿಚಾರಗಳನ್ನು ಬಹಿರಂಗ ಮಾಡಬಹುದು ಎಂಬ ಭೀತಿಯಿಂದ ಅದನ್ನು ಬಂಧಿಸಿಯೇ ಇಡಲಾಯಿತು. 
– ಕಪಿಲ್‌ ಸಿಬಲ್‌  ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next