Advertisement

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

12:24 AM May 27, 2022 | Team Udayavani |

ಮಂಗಳೂರು : ಯುವಕರೊಂದಿಗೆ ಉತ್ತಮ ಸಂವಹನ ಹೊಂದಲು ಪೊಲೀಸ್‌ ಠಾಣೆಯ ಮಟ್ಟದಲ್ಲಿ ಯುವ ಸಮಿತಿಗಳನ್ನು ರಚಿಸಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಎಡಿಜಿಪಿ ಆಲೋಕ್‌ ಕುಮಾರ್‌ ಹೇಳಿದ್ದಾರೆ.

Advertisement

ಗುರುವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಣೆ ಪರಿಶೀಲನೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರು ಸಾರ್ವಜನಿಕವಾಗಿ ಸಕ್ರಿಯವಾಗಿರುವ ಯುವಕರ ಗುಂಪಿನೊಂದಿಗೆ ಉತ್ತಮ ಸಂವಹನ ಹೊಂದಿರಬೇಕು. ಇದಕ್ಕೆ ಪೂರಕವಾಗಿ 40 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರನ್ನು ಒಳಗೊಂಡ ಯುವ ಸಮಿತಿಗಳನ್ನು ರಚಿಸಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಈ ಯುವಕರು ಪ್ರಮುಖ ಪಾತ್ರ ವಹಿಸುತ್ತಾರೆ. ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಪ್ರತೀ ತಿಂಗಳ ಮೂರನೇ ಶನಿವಾರ ಅಪರಾಧ ಸಂತ್ರಸ್ತರನ್ನು ಭೇಟಿ ಮಾಡುವ ಪ್ರಕ್ರಿಯೆಯನ್ನು ಪುನರಾರಂಭಿಸಲು ಸೂಚನೆ ನೀಡಲಾಗಿದೆ ಎಂದರು.

ಕಾನೂನು ಸುವ್ಯವಸ್ಥೆ
ಮಂಗಳೂರು ಸೂಕ್ಷ್ಮ ಪ್ರದೇಶ. ಒಂದು ವರ್ಷದಲ್ಲಿ ಚುನಾವಣೆಯೂ ಇದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಮುಂಚಿತವಾಗಿಯೇ ಅಂದಾಜಿಸು ವುದರಿಂದ ಕೆಲವೊಂದು ಚಟುವಟಿಕೆಗಳನ್ನು ತಡೆಯಲು ಸಾಧ್ಯವಿದೆ ಎಂದು ಆಲೋಕ್‌ ಕುಮಾರ್‌ ತಿಳಿಸಿದರು.

ಮಾದಕ ವಸ್ತು ನಿಯಂತ್ರಣ
ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಯಂತ್ರಿಸಲು ಈಗಾಗಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರು ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಕಾಸರಗೋಡು ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ಜನರ ವಿಶ್ವಾಸ ಗಳಿಸಿ
ಮಂಗಳೂರು: ಜನರ ವಿಶ್ವಾಸ ಗಳಿಸಿ ಪೊಲೀಸಿಂಗ್‌ ಕೆಲಸ ಮಾಡಿದಾಗ ಎಲ್ಲವೂ ಸಲೀಸಾಗಲು ಸಾಧ್ಯ ಎಂದು ಆಲೋಕ್‌ ಕುಮಾರ್‌ ಹೇಳಿದ್ದಾರೆ.
ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿ ಬೀಟ್‌ ವ್ಯವಸ್ಥೆ ಬಲಪಡಿಸಬೇಕು. ತಾಂತ್ರಿಕತೆ ಬಳಸಿದರೆ ಕರ್ತವ್ಯದಲ್ಲಿ ಪ್ರಗತಿ ಸಾಧ್ಯವಿದೆ. ಠಾಣೆಯಲ್ಲಿರುವ ಪ್ರಕರಣಗಳನ್ನು ಶೀಘ್ರ ಗತಿಯಲ್ಲಿ ಇತ್ಯರ್ಥಪಡಿಸಬೇಕು, ಸಮನ್ಸ್‌, ವಾರಂಟ್‌ ಜಾರಿಯನ್ನು ಶೀಘ್ರ ಗತಿಯಲ್ಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಡಿಜಿಪಿಯವರು ಬಂದರು ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಮಳಲಿ ವಿವಾದ: ಕಾನೂನು ಸುವ್ಯವಸ್ಥೆ ಧಕ್ಕೆಗೆ ಅವಕಾಶವಿಲ್ಲ
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಲೋಕ್‌ ಕುಮಾರ್‌ ಅವರು, ಮಳಲಿಯಲ್ಲಿ ಮಸೀದಿ ವಿಚಾರಕ್ಕೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಲು ಆಸ್ಪದ ನೀಡುವುದಿಲ್ಲ. ಈ ವಿಚಾರ ನ್ಯಾಯಾಲಯದಲ್ಲಿದ್ದು ಜೂ.3ರ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ ಎಂದು ಹೇಳಿದರು.
ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌, ಡಿಸಿಪಿಗಳಾದ ಹರಿರಾಂ ಶಂಕರ್‌, ದಿನೇಶ್‌ ಕುಮಾರ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next