ಅಳ್ನಾವರ: ಧಾರವಾಡದ ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ಜಿಪಂ, ತಾಪಂ, ಪಪಂ, ನಾಗರಿಕ ಮಿತ್ರ ಸಂಸ್ಥೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ತಾಲೂಕು ಮಟ್ಟದ “ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮ ನಡೆಯಿತು.
ಮಾಜಿ ಸೈನಿಕ ಸಂಘದ ಅಧ್ಯಕ್ಷ ಅಜ್ಜಪ್ಪ ಕುರುಬರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರು ಪದವಿ ಶಿಕ್ಷಣ ಪಡೆದ ನಂತರ ದೇಶ ಸೇವೆಗೆ ಸನ್ನದ್ಧರಾಗಬೇಕು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ದೇಶಕ್ಕಾಗಿ ಒಳ್ಳೆಯ ಕೊಡುಗೆ ನೀಡಲು ಮುಂದಾಗಬೇಕು.
ಪ್ರತಿಯೊಬ್ಬ ಯುವಕನಿಗೆ ಮಿಲಿಟರಿ ತರಬೇತಿ ದೊರೆತರೆ ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಬೇರು ಸಮೇತ ಕಿತ್ತು ಹೋಗಲು ಸಾಧ್ಯ ಎಂದರು. ನೆಹರು ಯುವ ಕೇಂದ್ರದ ಅಧಿಕಾರಿ ಗೌತಮರೆಡ್ಡಿ ಮಾತನಾಡಿ, ಅಮೃತ ಕಳಸ ಸಂಗ್ರಹ, ಜಾಗೃತಿ ಜಾಥಾ, ಮಾಜಿ ಸೈನಿಕರ ಸತ್ಕಾರ, ದೇಶಕ್ಕಾಗಿ ಪ್ರಮಾಣ ವಚನ ಸ್ವೀಕಾರ ಮುಂತಾದ ಅರ್ಥಪೂರ್ಣ ಕಾರ್ಯದ ಜೊತೆಗೆ ಈ ಮಹೋನ್ನತ ಅಭಿಯಾನವನ್ನು ಯಶಸ್ವಿಗೊಳಿಸೋಣ. ಇಲ್ಲಿ ಸಂಗ್ರಹಿಸಿದ ಕಳಸವನ್ನು ತಾಲೂಕಿನ ಪ್ರತಿನಿಧಿಯಾಗಿ ವಿದ್ಯಾರ್ಥಿನಿ ಸಂಜನಾ ಕುನ್ನೂರಕರ ದೆಹಲಿಗೆ ತೆರಳಿ ಹಸ್ತಾಂತರಿಸುವಳು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಪ್ರವೀಣ ಆನಂದಕಂದಾ ಮಾತನಾಡಿ, ನಮಗೆ ಸ್ವಾತಂತ್ರ್ಯ ದೊರೆಯಲು ಶ್ರಮಿಸಿದ ಸೈನಿಕರನ್ನು ನೆನೆಯುವುದು ನಮ್ಮ ಧರ್ಮ. ಸ್ವಾತಂತ್ರ್ಯ ದೊರೆತ 75ನೇ ವರ್ಷಾಚರಣೆ ಪ್ರಯುಕ್ತ ದೇಶದುದ್ದಕ್ಕೂ ಸಂಗ್ರಹಿಸಿದ ಮಣ್ಣು ಮತ್ತು ಅಕ್ಕಿಯನ್ನು ದೆಹಲಿಯಲ್ಲಿ ಅಮೃತ ಮಹೋತ್ಸವ ಸ್ಮಾರಕ ನಿರ್ಮಾಣಕ್ಕೆ ಬಳಸಲಾಗುವುದು ಎಂದರು.
ಸನ್ಮಾನ: ಮಾಜಿ ಸೈನಿಕ ಸಂಘದ ಅಧ್ಯಕ್ಷ ಅಜ್ಜಪ್ಪ ಕುರುಬರ, ಎ.ಎ. ಡಿಸೋಜಾ, ಎಚ್ .ಐ. ದೇಸಾಯಿ, ಶಿವಾನಂದ ಅಂಬ್ಲಿ, ಶಿವಾಜಿ ಕುಣಕಿಕೊಪ್ಪ, ಮಹಾದೇವ ಕುಂಬಾರ ಅವರನ್ನು ಸತ್ಕರಿಸಲಾಯಿತು. ವಿವಿಧ ಬೀದಿಯಲ್ಲಿ ಜಾಗೃತಿ ಜಾಥಾ ನಡೆಯಿತು. ಕಲಘಟಗಿ ತಾಲೂಕಿನ ಸೋಮನಕೊಪ್ಪ ಗ್ರಾಮದ ಜೈ ಹನುಮಾನ ಕೋಲಾಟ ತಂಡದವರು ಕೋಲಾಟ ಆಡುತ್ತಾ ಜಾಗೃತಿ ಗೀತೆ ಹಾಡಿದರು.
ನಾಗರಿಕ ಮಿತ್ರ ಸಂಸ್ಥೆಯ ಅಧ್ಯಕ್ಷ ಎಸ್. ಎಂ. ಮುಲ್ಲಾ, ಡಾ| ಉಮಾ ಪೂಜಾರ, ಡಾ| ಸುರೇಶ ದೊಡ್ಡಮನಿ, ಸಿದ್ದೇಶ್ವರ ಕಣಬರ್ಗಿ,
ಅಶ್ವಿನಿ ನಿಪ್ಪಾಣಿ, ನಾಗರಾಳ, ಪಿ.ಬಿ. ಚಾರಿ, ಸುಶೀಲಾ ಕರ್ಜಗಿ ಇದ್ದರು. ರೂಪಾ ಮುನವಳ್ಳಿ ಸ್ವಾಗತಿಸಿದರು. ತೇಜಲ ಠಕ್ಕಣ್ಣವರ ಹಾಗೂ ಶ್ವೇತಾ ದುಗ್ಗಾಣಿ ನಿರೂಪಿಸಿದರು. ಮುಷರಫ್ ಯಳ್ಳೂರ ವಂದಿಸಿದರು.