ಹುಬ್ಬಳ್ಳಿ: ಕೋವಿಡ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಘೋಷಣೆ ಮಾಡಿದಂತೆ ಪ್ರತಿ ರವಿವಾರ ಲಾಕ್ ಡೌನ್ ಜಾರಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ರವಿವಾರ ಬಹುತೇಕ ವ್ಯಾಪಾರ-ವಹಿವಾಟು, ಸಂಚಾರ ಸ್ತಬ್ಧವಾಗಿತ್ತು.
ಶನಿವಾರ ಸಂಜೆ 7:00 ರಿಂದ ಸೋಮವಾರ ಬೆಳಿಗ್ಗೆ 7:00 ಗಂಟೆವರೆಗೆ ಲಾಕ್‌ಡೌನ್ ಜಾರಿಯಲ್ಲಿದ್ದು, ಯಾರೂ ಕೂಡಾ ಹೊರ ಬರದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಅದರಂತೆ ಶನಿವಾರ ಸಂಜೆ 7:00 ಗಂಟೆಯಿಂದ ನಗರದಲ್ಲಿ ಪೊಲೀಸರು ವ್ಯಾಪಕ ಕ್ರಮ ಕೈಗೊಳ್ಳುವ ಮೂಲಕ ಎಲ್ಲೆಡೆ ನಾಕಾಬಂದಿ ಹಾಕಿದ್ದರು. ಸಂಜೆ 7:00 ಗಂಟೆ ನಂತರ ಹೊರ ಬರುವ ವಾಹನಗಳಿಗೆ ದಂಡ ಹಾಕುವುದು ವಾಹನಗಳ ಸೀಜ್ ಮಾಡುವುದು ಸೇರಿದಂತೆ ಇನ್ನಿತರೆ ಕಠಿಣ ಕ್ರಮ ಜರುಗಿಸಿದ್ದರು. ಆದರೆ ರವಿವಾರ ಬೆಳಿಗ್ಗೆಯಿಂದ ನಗರದ ಎಲ್ಲ ರಸ್ತೆಗಳು ಜನ-ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿರುವುದು ಕಂಡು ಬಂತು.
ಇನ್ನು ಹೊಸ ಬಸ್ ನಿಲ್ದಾಣದಲ್ಲಿ ಹೊರಗಡೆಯಿಂದ ಐದು ಬಸ್ ಹಾಗೂ ಒಂದು ಕುಟುಂಬದ ಸುಮಾರು 7 ಜನರು ಹೊಸ ಬಸ್ ನಿಲ್ದಾಣದಲ್ಲಿರುವುದು ಕಂಡು ಬಂತು. ಇನ್ನುಳಿದಂತೆ ನಗರದ ಮಾರುಕಟ್ಟೆ ಸೇರಿದಂತೆ ಎಲ್ಲವೂ ಸ್ತಬ್ದಗೊಂಡಿತ್ತು. ನಗರ ಪ್ರಮುಖ ಪ್ರದೇಶಗಳಾದ ಕಿತ್ತೂರು ಚನ್ನಮ್ಮ ವೃತ್ತ, ದಾಜಿಬಾನ ಪೇಟೆ, ಜನತಾ ಬಜಾರ್, ದುರ್ಗದ ಬಯಲು, ಹಳೇ ಹುಬ್ಬಳ್ಳಿ, ನೀಲಿಜಿನ್ ರಸ್ತೆ, ಗೋಕುಲ ರಸ್ತೆ, ವಿದ್ಯಾನಗರ, ಶಿರೂರ ಪಾರ್ಕ್, ಇಂಡಿ ಪಂಪ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜನ ವಾಹನ, ಜನರ ಓಡಾಟಗಳೇ ಇರಲಿಲ್ಲ. ಅಲ್ಲೊಂದು ಇಲ್ಲೊಂದು ದ್ವಿಚಕ್ರ ವಾಹನ ಸವಾರರು ಕಂಡುಬಂದರು.
ಜನರಲ್ಲಿ ಗೊಂದಲ: ಲಾಕ್‌ಡೌನ್ ಹಿನ್ನೆಲೆಯಲ್ಲಿ ವ್ಯಾಪಾರು- ವಹಿವಾಟು ನಡೆಸಬೇಕು- ಬೇಡ ಎನ್ನುವ ಗೊಂದಲದಲ್ಲಿ ಹಲವು ಜನರು ಇರುವುದು ಕಂಡು ಬಂತು. ನಗರದ ಕೆಲ ಹೊಸ ಬಡಾವಣೆಗಳಲ್ಲಿ ಜನರು ಕೆಲ ಅಂಗಡಿಗಳನ್ನು ತೆರೆದು ಮಧ್ಯಾಹ್ನದ ನಂತರ ಬಂದ್ ಮಾಡಿದರೆ ಇನ್ನು ಕೆಲವರು ತೆಗೆಯದೇ ಹಾಗೇ ಬಿಟ್ಟಿರುವುದು ಕಂಡು ಬಂತು. ಇದಲ್ಲದೇ ಕೆಲ ಕಡೆ ತರಕಾರಿ ಮಾರಾಟ ಮಾಡುತ್ತಿರುವುದು ಕಂಡು ಬಂತು.
ಪರವಾನಗಿಯೊಂದಿಗೆ ವಿವಾಹ: ನಗರದಲ್ಲಿ ಜಿಲ್ಲಾಡಳಿತದ ಅನುಮತಿಯೊಂದಿಗೆ 50 ಜನರ ಮಿತಿಯೊಂದಿಗೆ ಕೆಲ ವಿವಾಹ ಸಮಾರಂಭಗಳು ಸರಳವಾಗಿ ಸೂಸುತ್ರವಾಗಿ ನಡೆದವು.
ಬ್ಯಾರಿಕೇಡ್‌ನಿಂದ ಬಂದ್: ಪ್ರಮುಖ ರಸ್ತೆಗಳು ತೆರೆದಿರುವುದು ಬಿಟ್ಟರೆ ಇನ್ನುಳಿದಂತೆ ಒಳ ರಸ್ತೆಗಳೆಲ್ಲವನ್ನು ಬ್ಯಾರಿಕೇಡ್‌ಗಳಿಂದ ಬಂದ್ ಮಾಡಲಾಗಿತ್ತು. ರಸ್ತೆಯಲ್ಲಿ ಅಡ್ಡವಾಗಿ ಬ್ಯಾರಿಕೇಡ್ ಇಡುವ ಮೂಲಕ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಇದಲ್ಲದೇ ನಗರ ಪ್ರವೇಶ ಮಾಡುವ ಎಲ್ಲ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಇಡುವ ಮೂಲಕ ತಪಾಸಣೆ ಮಾಡಿ ಒಳಗಡೆ ಬಿಡುತ್ತಿರುವುದು ಕಂಡು ಬಂತು. ಇನ್ನು ಸರಕು ಸಾಗಣೆ ವಾಹನ ಸಂಚಾರ ಯಥಾ ಪ್ರಕಾರ ಕಂಡು ಬಂತು.