ಹೈದರಾಬಾದ್ : ಎಲ್ಲಾ ರೀಲ್ ಹೀರೋಗಳು ನಿಜ ಜೀವನದಲ್ಲಿ ಹೀರೋಗಳಾಗಿರುವುದಿಲ್ಲ. ದಕ್ಷಿಣ ಭಾರತದ ಕೆಲವು ನಟರು ಮಾನವೀಯ ನೆರವು ನೀಡುವುದರಲ್ಲಿ ಮುಂದಿದ್ದು, ಖ್ಯಾತ ನಟ ಅಲ್ಲು ಅರ್ಜುನ್ ಅವರು ಕೇರಳದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರ ಶಿಕ್ಷಣಕ್ಕೆ ನೆರವಾಗುವ ಮೂಲಕ ಮಾದರಿಯಾಗಿದ್ದಾರೆ.
‘ಪುಷ್ಪಾ’ ಯಶಸ್ಸಿನ ಬಳಿಕ ನಟ ಅಲ್ಲು ಅರ್ಜುನ್ ಅವರು ತನ್ನ ನರ್ಸಿಂಗ್ ಅಧ್ಯಯನವನ್ನು ಮುಂದುವರಿಸಲು ದಾರಿ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಕೇರಳದ ವಿದ್ಯಾರ್ಥಿನಿಗೆ ಸಹಾಯ ಹಸ್ತ ಚಾಚಿದ್ದಾರೆ. ಎಲ್ಲಾ ಖರ್ಚುಗಳನ್ನು ಭರಿಸುವ ಮೂಲಕ ನಾಲ್ಕು ವರ್ಷಗಳ ಅವಧಿಯ ಕೋರ್ಸ್ ಅನ್ನು ಪ್ರಾಯೋಜಿಸುವ ಭರವಸೆ ನೀಡಿದ್ದಾರೆ.
ಅಲಪ್ಪುಳ ಜಿಲ್ಲಾಧಿಕಾರಿ ವಿ. ಆರ್. ಕೃಷ್ಣ ತೇಜ ಅವರು ತಮ್ಮ ಫೇಸ್‌ಬುಕ್ ಪುಟದ ಮೂಲಕ ಅರ್ಜುನ್ ಅವರ ಉದಾತ್ತತೆಯನ್ನು ಬಹಿರಂಗಪಡಿಸಿದ್ದಾರೆ.
ಗುರುವಾರ ಎಫ್‌ಬಿ ಪೋಸ್ಟ್‌ನಲ್ಲಿ, ಮುಸ್ಲಿಂ ಹುಡುಗಿ ತನ್ನ ಅಧ್ಯಯನವನ್ನು ಮುಂದುವರಿಸಲು ಸಹಾಯ ಕೋರಿ ತನ್ನನ್ನು ಭೇಟಿ ಮಾಡಲು ಬಂದಿರುವುದನ್ನು ಜಿಲ್ಲಾಧಿಕಾರಿ ವಿವರಿಸಿದ್ದಾರೆ. ಅವಳು ಪ್ಲಸ್ ಟು ಪರೀಕ್ಷೆಗಳಲ್ಲಿ 92 ಪ್ರತಿಶತ ಅಂಕಗಳನ್ನು ಗಳಿಸಿದ್ದರೂ, ಕಳೆದ ವರ್ಷ ಅವಳ ತಂದೆ ಕೋವಿಡ್ ಗೆ ಬಲಿಯಾದ ನಂತರ ಆರ್ಥಿಕ ಅಡಚಣೆಗಳಿಂದ ಅವಳು ತನ್ನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.ನಾನು ಅವಳ ಕಣ್ಣುಗಳಲ್ಲಿ ಭರವಸೆ ಮತ್ತು ವಿಶ್ವಾಸವನ್ನು ನೋಡಿದೆ. ಆದ್ದರಿಂದ, ನಾವು ಅಲೆಪ್ಪಿ ಯೋಜನೆಯ ಭಾಗವಾಗಿ ಆಕೆಗೆ ಎಲ್ಲಾ ಸಹಾಯವನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ತೇಜ ಬರೆದಿದ್ದಾರೆ.
ನರ್ಸ್ ಆಗುವ ಆಸೆ ಹೊಂದಿದ್ದರಿಂದ ಅಧಿಕಾರಿಗಳು ಹಲವು ಕಾಲೇಜುಗಳನ್ನು ಸಂಪರ್ಕಿಸಿ ಕೊನೆಗೆ ಆಕೆಗೆ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಮಾಡಿಕೊಡಲಾಗಿದೆ. ಆಕೆಯ ಅಧ್ಯಯನವನ್ನು ಪ್ರಾಯೋಜಿಸಲು ಒಬ್ಬ ದಾನಿಯ ನೆರವನ್ನು ಪಡೆಯುವುದು ಅಗತ್ಯವಾಗಿತ್ತು. ಸಹಾಯ ಕೋರಿ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಸಂಪರ್ಕಿಸಿದೆ ಮತ್ತು ಅವರು ಅದಕ್ಕೆ ತಕ್ಷಣ ಒಪ್ಪಿಕೊಂಡರು ಎಂದು ಆಂಧ್ರಪ್ರದೇಶ ಮೂಲದಿಂದ ಬಂದಿರುವ ಅಧಿಕಾರಿ ಹೇಳಿಕೊಂಡಿದ್ದಾರೆ.
“ನಮ್ಮ ನೆಚ್ಚಿನ ಚಲನಚಿತ್ರ ನಟ ಅಲ್ಲು ಅರ್ಜುನ್ ಅವರು ಸದುದ್ದೇಶಕ್ಕಾಗಿ ವಿಷಯ ತಿಳಿದ ತಕ್ಷಣ, ಒಂದು ವರ್ಷದ ಬದಲು ನಾಲ್ಕು ವರ್ಷಗಳ ಕಾಲ ಹಾಸ್ಟೆಲ್ ಶುಲ್ಕ ಸೇರಿದಂತೆ ಸಂಪೂರ್ಣ ಅಧ್ಯಯನದ ವೆಚ್ಚವನ್ನು ಭರಿಸಲು ಒಪ್ಪಿಕೊಂಡರು. ಮೊನ್ನೆ ತಾನೇ ಹುಡುಗಿಯ ಅಡ್ಮಿಷನ್‌ಗೆ ಹೋಗಿದ್ದೆ” ಎಂದು ಜಿಲ್ಲಾಧಿಕಾರಿ ಹೇಳಿದರು.
“ಅವಳು ಚೆನ್ನಾಗಿ ಓದುತ್ತಾಳೆ ಮತ್ತು ಭವಿಷ್ಯದಲ್ಲಿ ನರ್ಸ್ ಆಗುತ್ತಾಳೆ, ಅವಳು ತನ್ನ ತಾಯಿ ಮತ್ತು ಸಹೋದರನನ್ನು ನೋಡಿಕೊಳ್ಳುತ್ತಾಳೆ, ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಾಳೆ” ಎಂದು ಅವರು ಸದಾಶಯ ವ್ಯಕ್ತ ಪಡಿಸಿದ್ದಾರೆ.