Advertisement

ಲಘು ವಾಹನಗಳಿಗೆ ಅವಕಾಶ: ಸಚಿವ ನಾಗೇಶ್‌ 

11:02 PM Jul 24, 2022 | Team Udayavani |

ಮಡಿಕೇರಿ: ಜಿಲ್ಲಾಡಳಿತ ಭವನ ಬಳಿ ಮಡಿಕೇರಿ-ಮಂಗಳೂರು ರಸ್ತೆಯ ತಡೆಗೋಡೆಯ ಸ್ಲ್ಯಾಬ್‌ಗಳು ಹೊರಚಾಚಿದ್ದ ಹಿನ್ನೆಲೆ, ತಾತ್ಕಾಲಿಕವಾಗಿ ಸಾರಿಗೆ ಸಂಚಾರ ಬಂದ್‌ ಮಾಡಲಾಗಿದೆ. ಸದ್ಯ ಮರಳು ಮೂಟೆ ಅಳವಡಿಸಿದ ಅನಂತರ ಲಘು ವಾಹನ (ದ್ವಿಚಕ್ರ, ಆಟೋ) ಸಂಚಾರಕ್ಕೆ ಅವಕಾಶ ಮಾಡಲಾಗುವುದು. ಆ ನಿಟ್ಟಿನಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ.

Advertisement

ಜಿಲ್ಲಾಡಳಿತ ಭವನ ಬಳಿಯ ಮಂಗಳೂರು ರಸ್ತೆ ತಡೆಗೋಡೆ ವೀಕ್ಷಿಸಿದ ಬಳಿಕ, ಮದೆನಾಡು ಸಮೀಪದ ಸೀಮೆಹುಲ್ಲು ಕಜೆ ಗುಡ್ಡದ ಬದಿಯೊಂದು ಕುಸಿದಿರುವ ಪ್ರದೇಶಕ್ಕೆ ರವಿವಾರ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದ ಅನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ತಡೆಗೋಡೆ ಪರಿಶೀಲನೆ ಸಂದರ್ಭ ಸ್ಥಳೀಯರು, ರಸ್ತೆ ಮುಚ್ಚಿರುವುದರಿಂದ ಇಲ್ಲಿನ ಜನರು 11 ಕಿ.ಮೀ. ಬಳಸಿಕೊಂಡು ಬರಬೇಕಿದೆ. ಕೂಡಲೇ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ತಡೆಗೋಡೆಯನ್ನು ಅವೈಜ್ಞಾನಿಕ ‌ ವಾಗಿ ನಿರ್ಮಿಸಲಾಗಿದೆ. ಜತೆಗೆ ಜಿಲ್ಲಾಧಿಕಾರಿ ಅವರ ಕಚೇರಿಗೆ ತೆರಳಲು ರಸ್ತೆ ಮಾಡಿದ ಪರಿಣಾಮವಾಗಿ ಇಂತಹ ದುಃಸ್ಥಿತಿ ಎದುರಿಸುವಂತಾಗಿದೆ ಎಂದು ಸ್ಥಳೀಯರೊಬ್ಬರು ಜಿಲ್ಲಾ ಸಚಿವರ ಗಮನಕ್ಕೆ ತಂದರು.

ಲೋಕೋಪಯೋಗಿ ಇಲಾಖೆಯ ಇಇ ನಾಗರಾಜು ಅವರು ತಡೆಗೋಡೆ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್‌, ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ, ಜಿ.ಪಂ. ಸಿಇಒ ಭಂವರ್‌ ಸಿಂಗ್‌ ಮೀನಾ, ಉಪ ವಿಭಾಗಾಧಿಕಾರಿ ಯತೀಶ್‌ ಉಳ್ಳಾಲ್‌, ಡಿವೈಎಸ್‌ಪಿ ಗಜೇಂದ್ರ ಪ್ರಸಾದ್‌, ತಹಶೀಲ್ದಾರ್‌ ಮಹೇಶ್‌ ಉಪಸ್ಥಿತರಿದ್ದರು.

Advertisement

ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ:

ಮದೆನಾಡು ಸಮೀಪದ ಸೀಮೆಹುಲ್ಲು ಕಜೆ ಗುಡ್ಡದ ಬದಿಯೊಂದು ಕುಸಿದಿರುವ ಪ್ರದೇಶಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್‌ ಅವರು ರವಿವಾರ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು. ಈ ಪ್ರದೇಶದಲ್ಲಿ 3 ಕುಟುಂಬಗಳು ವಾಸವಾಗಿವೆ. ಮಳೆಗಾಲ ಮುಗಿಯುವ ವರೆಗೆ ಸಂಬಂಧಿಕರ ಮನೆಗೆ ತೆರಳುವಂತೆ ಅವರಲ್ಲಿ ಸಚಿವರು ಮನವಿ ಮಾಡಿದರು.

ಸಂತ್ರಸ್ತರಿಗೆ ಸರಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು.  ಜಾನು ವಾರು ಗಳಿಗೂ ಮೇವು ಒದಗಿಸಲಾಗುವುದು. ಜನತೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ಮಳೆಗಾಲ  ದಲ್ಲಿ ಇಲ್ಲಿ ಪದೇ ಪದೆ ಭೂಕುಸಿತವಾಗುತ್ತಿರುವ ಕಾರಣ ಮತ್ತೂಂದು ಬಾರಿ ತಜ್ಞರಿಂದ ಅಧ್ಯಯನ ವರದಿ ಪಡೆಯ ಲಾಗುವುದು ಎಂದು ನಾಗೇಶ್‌ ತಿಳಿಸಿದರು.

ಶಾಸಕರ ಭೇಟಿ:

ಮಳೆಯಿಂದ ಹಾನಿಗೀಡಾಗಿರುವ ಹಚ್ಚಿನಾಡು ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ ಶಿರಂಗಳ್ಳಿ ಮೂವತ್ತೂಕ್ಲು ಗ್ರಾಮಗಳಿಗೆ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್‌ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next