Advertisement

ಮರ ಸಾಗಾಟ ಅವಕಾಶ: ಸಮಯ ಕೋರಿದ ಜಿಲ್ಲಾಡಳಿತ

06:30 AM Sep 06, 2018 | Team Udayavani |

ಮಡಿಕೇರಿ: ಪ್ರಕೃತಿ ವಿಕೋಪದಿಂದ ಕೊಡಗಿನ ಬೆಳೆಗಾರರು ಸಂಕಷ್ಟದಲ್ಲಿರುವುದರಿಂದ ಮರದ ದಿಮ್ಮಿಗಳ ಸಾಗಾಟಕ್ಕೆ ಹೇರಿರುವ ನಿರ್ಬಂಧವನ್ನು ತೆಗೆದುಹಾಕಬೇಕು ಎಂದು ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ಮರ ವ್ಯಾಪಾರಿಗಳನ್ನೊಳಗೊಂಡ ನಿಯೋಗ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.

Advertisement

ಮಂಗಳವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯ ಕುರಿತು ಮನವರಿಕೆ ಮಾಡುವುದರೊಂದಿಗೆ ಮರ ಸಾಗಾಟಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಕಾಫಿ ಬೆಳೆಗಾಗರರು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ನಡುವೆ ಭಾರೀ ಗಾಳಿಗೆ ಸಿಲುಕಿ ತೋಟದ ಮರಗಳು ನೆಲಕ್ಕುರುಳಿವೆ. ಇವುಗಳ ಮಾರಾಟದಿಂದ ಮಾತ್ರ ಬೆಳೆಗಾರರು ಆರ್ಥಿಕ ಸ್ಥಿತಿಯನ್ನು ಸರಿದೂಗಿಸಿಕೊಳ್ಳಬಹುದಾಗಿದೆ.ಮಳೆಗಾಲದಲ್ಲಿ ರಸ್ತೆಗಳು ಹದಗೆಡುತ್ತವೆ ಎನ್ನುವ ಕಾರಣಕ್ಕೆ ಆಗಸ್ಟ್‌ 31 ರವರೆಗೆ ಮರಗಳ ಸಾಗಾಟಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಆದರೆ ಇದೀಗ ಮತ್ತೆ ಎರಡು ತಿಂಗಳು ನಿರ್ಬಂಧವನ್ನು ವಿಸ್ತರಿಸಿದ್ದು, ಈ ಕ್ರಮದಿಂದಾಗಿ ಬೆಳೆಗಾರರು ಮಾತ್ರವಲ್ಲದೆ ಕಾರ್ಮಿಕರು ಹಾಗೂ ಜನಸಾಮಾನ್ಯರು ಕೂಡ ಕಷ್ಟ,ನಷ್ಟ ಅನುಭವಿಸಬೇಕಾಗುತ್ತದೆ. ಕಾಫಿ ಹಾಗೂ ಕರಿಮೆಣಸು ಮಹಾಮಳೆಗೆ ಸಂಪೂರ್ಣವಾಗಿ ನಾಶವಾಗಿದೆ. ಮರಗಳು ಬಿದ್ದಿರುವುದರಿಂದ ಕಾಫಿ ಗಿಡಗಳು ನೆಲಕಚ್ಚಿವೆ. ಇಂತಹ ಪರಿಸ್ಥಿತಿಯಲ್ಲಿ ಬಿದ್ದಿರುವ ಮರಗಳನ್ನು ತೋಟದಲ್ಲೇ ಬಿಡುವುದರಿಂದ ತೋಟಗಳಿಗೆ ಮತ್ತಷ್ಟು ಹಾನಿಯಾಗುವುದಲ್ಲದೆ, ಬಿದ್ದಿರುವ ಮರಗಳು ಮೃದು ಮರಗಳಾಗಿರುವುದರಿಂದ ಅವುಗಳೂ ಹಾಳಾಗಿ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರದಂತಾಗುತ್ತವೆ. ಆದ್ದರಿಂದ ಇದೀಗ ಮಹಾಮಳೆಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೆಳೆಗಾರರಿಗೆ ಮರ ಮಾರಾಟದಿಂದ ಒಂದಷ್ಟು ನೆರವಾಗಲಿದೆ ಎಂದು ಸಭೆಯಲ್ಲಿದ್ದ ಬಹುತೇಕ ಮಂದಿ ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ಸಭೆಯ ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅದರಂತೆ ಜಿಲ್ಲಾ ಪಂಚಾಯತ್‌ ಸದಸ್ಯೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯ ವಿ.ಪಿ.ಶಶಿಧರ್‌, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್‌.ಎಂ. ಚಂಗಪ್ಪ,ಸಂಘಟಕರಾದ ಶ್ಯಾಂ ಪ್ರಸಾದ್‌,ಸಮೀರ್‌ ಮತ್ತಿತರರನ್ನೊಳಗೊಂಡ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿತು. ಈ ಸಂದರ್ಭ ಗಾಳಿ ಮಳೆಗೆ ಬಿದ್ದಿರುವ ಮರಗಳನ್ನು ಕಾಫಿ ತೋಟಗಳಲ್ಲೇ ಬಿಡುವುದರಿಂದ ಆಗುವ ಹಾನಿಯ ಬಗ್ಗೆ ನಿಯೋಗದ ಸದಸ್ಯರು ಜಿಲ್ಲಾಧಿಕಾಗಳಿಗೆ ಮನವರಿಕೆ ಮಾಡಿದರಲ್ಲದೆ, ತಮಗೆ 20 ಟನ್‌ ತೂಕದ ಲಾರಿಗಳಲ್ಲಿ ಮರ ಸಾಗಾಟಕ್ಕೆ ಅವಕಾಶ ನೀಡದಿದ್ದರೂ,ಕೊಡಗಿನ ರಸ್ತೆಗಳಲ್ಲಿ ಕನಿಷ್ಟ 10 ಟನ್‌ ತೂಕದ ಲಾರಿಗಳಲ್ಲಿ ಮರ ಸಾಗಾಟಕ್ಕೆ ಅವಕಾಶ ನೀಡಿದಲ್ಲಿ ಜಿಲ್ಲೆಯ ಹೊರಭಾಗಕ್ಕೆ ಸಾಗಿಸಿ ಅಲ್ಲಿಂದ ಮತ್ತೆ ಹೆಚ್ಚು ತೂಕ ಸಾಗಿಸುವಲಾರಿಗಳಿಗೆ ತುಂಬಿಸಿ ಮರದ ಮಿಲ್‌ಗ‌ಳಿಗೆ ಸಾಗಿಸಲಾಗುವುದು ಎಂದು ಭರವಸೆ ನೀಡಿದರು.

ಅರ್ಧ ಗಂಟೆ ನಿಯೋಗದ ಮನವಿ ಆಲಿಸಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತಮಗೆ 8-10 ದಿನಗಳ ಕಾಲಾವಕಾಶ ನೀಡಿದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಭೂ ವಿಜ್ಞಾನಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವುದಾಗಿ ವಾಗ್ಧಾನ ನೀಡಿದರು.

Advertisement

ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಸೂಕ್ತ.ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಸೂಕ್ತ. ಒಂದುವೇಳೆ ಜಿಲ್ಲಾಧಿಕಾರಿ ಸ್ಪಂದಿಸದಿದ್ದರೆ ಮುಂದೆ ಸರಕಾರದ ಮಟ್ಟದಲ್ಲಿ ವ್ಯವಹರಿಸಿ ನಿರ್ಬಂಧವನ್ನು ತೆಗೆಸಬಹುದೆಂದು ವಿಧಾನಪರಿಷತ್‌ ಸದಸ್ಯ ಎಂ.ಪಿ.ಸುನಿಲ್‌ ಸುಬ್ರಮಣಿ ಅವರು  ಜಿಲ್ಲಾಧಿಕಾರಿಯವರ ಭೇಟಿಗೆ ಮೊದಲು ಸಲಹೆ ಮಾಡಿದರು. ಬೆಳೆಗಾರರು,ಜನಪ್ರತಿನಿಧಿಗಳು,ಮರ ವ್ಯಾಪಾರಿಗಳು ಹಾಗೂ ಕಾರ್ಮಿಕ ಮುಖಂಡ ರನ್ನೊಳಗೊಂಡಂತೆ ವಿವಿಧ ಸಂಘಟನೆಗಳ ಪ್ರಮುಖರು ಈ ಸಂದರ್ಭ ಮರ ಸಾಗಾಟ ನಿರ್ಬಂಧದಿಂದ ಜಿಲ್ಲೆಯ ಜನಜೀವನದ ಮೇಲಾಗಿರುವ ದುಷ್ಪರಿಣಾಮಗಳ ಕುರಿತು ಗಮನಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next