ಬೆಂಗಳೂರು: ನಗರದ ಪುಟ್ಟಣ್ಣಚೆಟ್ಟಿ ಪುರಭವನದ ಮುಂದೆ ಪ್ರತಿಭಟನೆಗೆ ಅವಕಾಶ ನೀಡುವುದು ಬೇಡ ಎಂದು ನಗರದ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲು ನಿರ್ಧರಿಸುವ ಪಾಲಿಕೆಯ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ನಿಷೇಧ ಹೇರಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ನಗರದ ಪುರಭವನ ಮುಂಭಾಗ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸೇರಿದ್ದ ಕಾರ್ಯಕರ್ತರು, ಕನ್ನಡಪರ ಹೋರಾಟಗಾರರು ಕಪ್ಪು ಪಟ್ಟಿ ಧರಿಸಿ, ಬಿಬಿಎಂಪಿ ಹೊರಡಿಸಿರುವ ಆದೇಶದ ವಿರುದ್ಧ ಧಿಕ್ಕಾರ ಕೂಗಿದರು. ಮೇಯರ್ ಅವರು ಈ ಕೂಡಲೇ ತಮ್ಮ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಪ್ರತಿಭಟನಾಕಾರರಿಗೆ ಪುರಭವನ ಶಕ್ತಿ ಕೇಂದ್ರವಾಗಿತ್ತು. ಪುರಭವನ ಮುಂದೆ ಹಲವು ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ, ಮೆರವಣಿಗೆ, ಸತ್ಯಾಗ್ರಹ ಅಥವಾ ಧರಣಿ ನಡೆಸಿಕೊಂಡು ಬಂದಿದ್ದಾರೆ. ಈಗ ಮೇಯರ್ ಅವರು ಪಾಲಿಕೆಯ ಆದಾಯ ಕಾರಣ ನೀಡಿ, ಪ್ರತಿಭಟನೆ ಮಾಡಬಾರದೆಂದು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ನಿರ್ಣಯಕ್ಕೆ ಅನುಮೋದನೆ ಪಡೆದುಕೊಂಡಿದ್ದಾರೆ.
ಇದು ಬೆಂಗಳೂರಿನ ಜನರಿಗೆ ಮಾಡುವ ಮೋಸ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪುರಭವನ ಮುಂಭಾಗ ಪ್ರತಿಭಟನೆಗೆ ನಿಷೇಧ ಹೇರಿರುವ ಮೇಯರ್ ಎಂ.ಗೌತಮ್‌ಕುಮಾರ್ ಅವರ ನಿರ್ಧಾರದಿಂದ ಪ್ರಜಾಪ್ರಭುತ್ವ ದಮನವಾಗಿದೆ. ಅವರ ಕಾರ್ಯವೈಖರಿ ಮಿಲಿಟರಿ ಆಡಳಿತದಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ನಾವೆಲ್ಲ ಕನ್ನಡಿಗರು. ಕರ್ನಾಟಕದಲ್ಲಿ ಕನ್ನಡಿಗರು ದನಿ ಎತ್ತುವುದಕ್ಕೆ ಅವಕಾಶ ನೀಡಬೇಕು. ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚಿಂತನೆ ಮಾಡಬೇಕು. ಮೇಯರ್ ಅವರು ತಮ್ಮ ನಿರ್ಧಾರ ಹಿಂಪಡೆಯದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಾಟಾಳ್ ಅವರು ಎಚ್ಚರಿಸಿದರು.