ಹುಣಸೂರು: ವಿಶ್ವ ವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಜೀವ ವೈವಿಧ್ಯತೆಯನ್ನು ಕಣ್ ತುಂಬಿಕೊಳ್ಳಲು ಇನ್ನು ಮುಂದೆ ಅರಣ್ಯ ಇಲಾಖೆ ವತಿಯಿಂದ ವೀರನಹೊಸಹಳ್ಳಿ ಪ್ರವೇಶ ದ್ವಾರದಿಂದಲೇ ಸಫಾರಿ ಆರಂಭಿಸುವ ಸಲುವಾಗಿ ಭರದಿಂದ ಸಿದ್ಧತೆಗಳು ನಡೆದಿವೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಮುಖ್ಯದ್ವಾರದ ಕಚೇರಿ (ಗೇಟ್) ಬಳಿಯೇ ಸುಸಜ್ಜಿತ ಸ್ವಾಗತ ಕೇಂದ್ರಕ್ಕೆ ಪರಿಸರ ಪೂರಕವಾದ ಆಧುನಿಕ ಟಚ್ ನೀಡಲಾಗುತ್ತಿದೆ. ಇದೇ ರೀತಿ ಇರ್ಪು ಜಲಪಾತ ವೀಕ್ಷಿಸಿ ಕೊಡಗು ಜಿಲ್ಲೆ ಕಡೆಯಿಂದ ಬರುವ ಪ್ರವಾಸಿಗರಿಗಾಗಿ ಕುಟ್ಟ (ನಾಣಚ್ಚಿ) ಗೇಟ್‌ನಿಂದಲೂ ಸಫಾರಿಗೆ ಅವಕಾಶ ಕಲ್ಪಿಸಲು ಅಧಿಕಾರಿಗಳು ಚಿಂತಿಸಿದ್ದು, ಅಲ್ಲಿಯೂ ನವೀಕರಣ ಕಾಮಗಾರಿ ನಡೆಯುತ್ತಿದೆ.
ಏನೇನು ಪ್ರಯೋಜನ: ವೀರನಹೊಸಹಳ್ಳಿ ಗೇಟ್‌ನಿಂದಲೇ ಸಫಾರಿ ಆರಂಭವಾಗುವುದರಿಂದ ಇಲ್ಲಿಂದಲೇ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು ಅನುಕೂಲ ವಾಗಲಿದೆ. ಈ ಹಿಂದಿನ 1 ಗಂಟೆ ಬದಲು 2 ಗಂಟೆಯ ಸಫಾರಿಗೆ ಅವಕಾಶ ಸಿಗಲಿದೆ. ಸಫಾರಿಗೆ ಬರುವ ವಾಹನಗಳನ್ನು ಒಳಗೆ ಬಿಡದಿರುವುದರಿಂದ ಪ್ರಾಣಿಗಳ ಸ್ವತ್ಛಂದ ಓಡಾಡಕ್ಕೆ ಅನುಕೂಲ ಜೊತೆಗೆ ಕೆಲ ಕಿಡಿಗೇಡಿ ಗಳು ಸಫಾರಿ ನೆಪದಲ್ಲಿ ವಾಹನ ನಿಲ್ಲಿಸಿ ಅರಣ್ಯದ ರಸ್ತೆಗಳಲ್ಲೇ ಅಡ್ಡಾಡುವುದು, ಮದ್ಯ ಸೇವಿಸುವುದು ಧೂಮಪಾನ ಮಾಡುವುದು ಹಾಗೂ ಇನ್ನಿತರೆ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.
ವೀರನಹೊಸಹಳ್ಳಿ ಗೇಟ್‌ನಿಂದ ನಾಗರಹೊಳೆಗೆ 25 ಕಿ.ಮೀ ದೂರವಿದ್ದು, ಇಲ್ಲಿಂದ ಇಲಾಖೆಯ 4 ವಾಹನಗಳು ಮಾತ್ರ ಪ್ರವಾಸಿಗರನ್ನು ಹೊತ್ತೂಯ್ಯಲಿದೆ. ಪ್ರತಿ ವಾಹನ ಹೋಗಿಬರಲು 50 ಕಿ.ಮೀ ಆಗಲಿದ್ದು, ಖಾಸಗಿ ವಾಹನಗಳ ಇಂಧನ ಉಳಿತಾಯ ಹಾಗೂ ಪರಿಸರ ಹಾನಿ ತಗ್ಗಲಿದೆ.
ಆಕರ್ಷಕ ಸ್ವಾಗತ ಕೇಂದ್ರ: ವೀರನಹೊಸಹಳ್ಳಿ ಗೇಟ್ ಬಳಿ ಇದ್ದ ಸ್ವಾಗತ ಕೇಂದ್ರದ ನವೀಕರಣದ ಜವಾಬ್ದಾರಿಯನ್ನು ಈ ಹಿಂದೆ ಆಕರ್ಷಕವಾಗಿ ಗೇಟ್ ನಿರ್ಮಿಸಿ ಕೊಟ್ಟಿರುವ ಉರಗತಜ್ಞ ಬೆಂಗಳೂರಿನ ಹನೀಸ್ ವಹಿಸಿದ್ದು, ಅಂತಿಮ ಟಚ್ ನೀಡುತ್ತಿದ್ದಾರೆ. ಕಟ್ಟಡದ ಹೊರ ಆವರಣಕ್ಕೆ ಅರಣ್ಯವೆಂದೇ ಪ್ರತಿಬಿಂಬಿಸುವ ಹಸಿರು-ಮಂದ ಬಿಳಿ ಬಣ್ಣದ ಚಿತ್ತಾರ ಬಿಡಿಸಲಾಗಿದೆ. ಕೇಂದ್ರದ ಒಳ ಆವರಣದಲ್ಲಿ ಪ್ರವಾಸಿಗಳು ಕುಳಿತುಕೊಳ್ಳಲು ಆಕರ್ಷಕ ಆಸನ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲಾಗಿದೆ.
ನಾಗರಹೊಳೆ ಪ್ರವೇಶಕ್ಕೂ ಮೊದಲೇ ಅರಣ್ಯ ಕಲ್ಪನೆಯಲ್ಲಿ ನಿರ್ಮಿಸಿರುವ ಗಮನ ಸೆಳೆವ ದ್ವಾರ, ಕಬ್ಬಿಣದ ಗೇಟ್‌ನಲ್ಲಿ ನಾಗರಹೊಳೆ ಸಂರಕ್ಷಿತ ಪ್ರದೇಶದ ಹೆಗ್ಗುರುತ್ತಾದ ಹುಲಿ ಚಿತ್ರ ನಿರ್ಮಿಸಲಾಗಿದೆ. ಬರುವ ಪ್ರವಾಸಿಗರಿಗೆ ಅರಣ್ಯ, ವನ್ಯಜೀವಿಗಳ ಪರಿಕಲ್ಪನೆಯನ್ನು ಪ್ರತಿಬಿಂಬಿಸಲಿದೆ, ಪ್ರವಾಸಿಗರು ಉಲ್ಲಾಸಿತರಾಗಿ ಒಳಪ್ರವೇಶಿಸುವಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.
ಅರಣ್ಯ ಮತ್ತು ವನ್ಯಜೀವಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ನಾಗರಹೊಳೆ ಆರಂಭದಿಂದಲೇ ಸಫಾರಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲದೆ ಹೆಚ್ಚಿನ ಸಮಯವನ್ನು ಕಾಡಿನಲ್ಲೇ ಕಳೆಯುವ ಅವಕಾಶ ಸಿಗಲಿದೆ. 4 ವಾಹನಗಳ ಮೂಲಕ ಸಫಾರಿ ವ್ಯವಸ್ಥೆ ಮಾಡಲಾಗುತ್ತದೆ. ಸ್ವಾಗತ ಕೇಂದ್ರದಲ್ಲಿ ಎಲ್ಲಾ ಮೂಲ ವ್ಯವಸ್ಥೆಯೊಂದಿಗೆ, ನಾಗರ ಹೊಳೆ ಜೀವವೈವಿಧ್ಯತೆ ಕುರಿತು ವಿಡಿಯೋ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗುವುದು. ಇಲ್ಲಿ ಮಾಹಿತಿ ನೀಡಲು ನ್ಯಾಚುರಲಿಸ್ಟ್ ಸಹ ಇರುತ್ತಾರೆ.
-ಮಣಿಕಂಠನ್, ಕ್ಷೇತ್ರ ನಿರ್ದೇಶಕ, ನಾಗರಹೊಳೆ ಹುಲಿ ಯೋಜನೆ
* ಸಂಪತ್‌ಕುಮಾರ್