ಬೆಂಗಳೂರು: ಎಂಟೂವರೆ ತಿಂಗಳ ತುಂಬು ಗರ್ಭಿಣಿಯಾಗಿರುವ ವಕೀಲೆಯೊಬ್ಬರಿಗೆ ಇಂದು (ನ.18) ಮತ್ತು ನಾಳೆ (ನ.19) ನಡೆಯಲಿರುವ ಸಿವಿಲ್ ನ್ಯಾಯಾಧೀಶ ನೇಮಕಾತಿಗೆ ಸಂಬಂಧಿಸಿದ ಮುಖ್ಯ ಲಿಖಿತ ಪರೀಕ್ಷೆಯನ್ನು ಆಕೆಯ ತವರೂರಲ್ಲೇ ಬರೆಯಲು ಅವಕಾಶ ಮಾಡಿಕೊಡುವ ಮೂಲಕ ಹೈಕೋರ್ಟ್ ಮಾನವೀಯತೆ ಮರೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ವಕೀಲೆ ನೇತ್ರಾವತಿ ಅವರು ಬೆಂಗಳೂರಿಗೆ ಪ್ರಯಾ ಣಿಸಲು ಇರುವ ಕಷ್ಟಸಾಧ್ಯತೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಿರುವ ರಾಜ್ಯ ಹೈಕೋರ್ಟ್, ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ.
“ತಾವು ಎಂಟೂವರೆ ತಿಂಗಳ ಗರ್ಭಿಣಿಯಾಗಿ ದ್ದೇನೆ. ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿರುವ ಕಾರಣ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಕಷ್ಟವಾಗಿದೆ. ಆದ್ದರಿಂದ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡದ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷೆ ಬರೆಯಲು ತಮಗೆ ಅನುಮತಿ ನೀಡಬೇಕು’ ಎಂದು ಕೋರಿ ವಕೀಲೆ ನೇತ್ರಾವತಿ ಹೈಕೋರ್ಟ್‌ಗೆ ಲಿಖಿತ ಮನವಿ ಪತ್ರ ಸಲ್ಲಿಸಿದ್ದರು. ಈ ಮನವಿಯನ್ನು ಹಿರಿಯ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ನೇತೃತ್ವದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿಯ ಮುಂದೆ ಇಡಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಲೆ ಅವರೊಂದಿಗೆ ಸಮಾಲೋಚಿಸಿದ ಬಳಿಕ ಈ ಮನವಿ ಪತ್ರವನ್ನು ಪರಿಗಣಿಸಿದ ಸಮಿತಿ, ನೇತ್ರಾವರಿಗೆ ಅವರಿಗೆ ಮಂಗಳೂರಿನಲ್ಲೇ ಪರೀಕ್ಷೆ ಬರೆಯಲು ಅನುಮತಿ ಕಲ್ಪಿಸಿದೆ. ಅಭ್ಯರ್ಥಿಯೋರ್ವರಿಗೆ ತಾವಿರುವ ಊರಿನಲ್ಲೇ ಸಿವಿಲ್ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯನ್ನು ಬರೆಯಲು ಅನುಮತಿ ಕಲ್ಪಿಸಿರುವುದು ಹೈಕೋರ್ಟ್ ಇತಿಹಾಸದಲ್ಲಿ ಇದೇ ಪ್ರಥಮವಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ತಿಳಿಸಿದ್ದಾರೆ. ಅಷ್ಟೆ ಅಲ್ಲದೆ, ನೇತ್ರಾವತಿ ಪರೀಕ್ಷೆ ಬರೆಯುವ ಕೇಂದ್ರದಲ್ಲಿ ಮಹಿಳಾ ನ್ಯಾಯಾಂಗ ಅಧಿಕಾರಿಯನ್ನು ಮೇಲ್ವಿಚಾರಕರಾಗಿ ನಿಯೋಜಿಸಲಾಗಿದೆ.
ಜತೆಗೆ, ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ, ನೇತ್ರಾವತಿ ಅವರಿಗೆ ಎಲ್ಲಾ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಹೈಕೋರ್ಟ್ ನೇಮಕಾತಿ ಸಮಿತಿಯ (ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿ) ನಿರ್ದೇಶನದ ಮೇರೆಗೆ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ನಿರ್ದೇಶಿಸಿದ್ದಾರೆ. ಇಂದು, ನಾಳೆ ಮುಖ್ಯ ಪರೀಕ್ಷೆ : ರಾಜ್ಯದಲ್ಲಿ ಖಾಲಿಯಿದ್ದ 57 ಸಿವಿಲ್ ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ 2023ರ ಮಾ.9ರಂದು ಹೈಕೋರ್ಟ್ ಅಧಿಸೂಚನೆ ಹೊರಡಿಸಿತ್ತು. ಜು.27ರಂದು ಪ್ರಾಥಮಿಕ ಪರೀಕ್ಷೆ ನಡೆಸಲಾಗಿತ್ತು. ಆರು ಸಾವಿರ ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆಗೆ ಹಾಜರಾಗಿದ್ದರು. ಆ ಪೈಕಿ 1,022 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು.
ಅದರಲ್ಲಿ ಮಂಗಳೂರಿನ ವಕೀಲೆ ನೇತ್ರಾವತಿ ಸಹ ಒಬ್ಬರಾಗಿದ್ದಾರೆ. ಇದೇ 18 ಮತ್ತು 19ರಂದು ಬೆಂಗಳೂರು ನಗರದಲ್ಲಿ ಮಾತ್ರ ಮುಖ್ಯ ಪರೀಕ್ಷೆ ನಡೆಯಲಿದೆ.