Advertisement

ಅಂಗವಿಕಲರಿಗೂ ಅವಕಾಶ ಕೊಡಿ

10:03 AM Dec 04, 2018 | |

ಕಲಬುರಗಿ: ಅಂಗವಿಕಲರಿಗೆ ಧೈರ್ಯ ತುಂಬಿ ಪೋತ್ಸಾಹಿಸಿದಲ್ಲಿ ಅವರು ಕೂಡ ಯಾರಿಗೂ ಕಮ್ಮಿ ಇಲ್ಲ. ಯಾವುದೋ ಕಾರಣಕ್ಕೆ ತಮ್ಮ ಅಂಗಗಳನ್ನು ಕಳೆದುಕೊಂಡು ಅವರು ಅಸಹಾಯಕರಾಗಿರುತ್ತರೇ ಹೊರತು ಅವರು ಸಾಮಾನ್ಯರಂತೆ ಕ್ರಿಯಾಶೀಲರು. ಅವರಿಗೂ ಸರಿಯಾದ ಅವಕಾಶಗಳು ಸಿಕ್ಕಲ್ಲಿ ತಮ್ಮ ಅಂಗವಿಕಲತೆ ಮರೆತು ಎಲ್ಲರಂತೆ ಚೈತನ್ಯದಿಂದ ಬಾಳುವರು…

Advertisement

ಇಂತಹದ್ದೊಂದು ಸಂದೇಶ ಸಾರಿದ್ದು ನಗರದ ಡಾ| ಎಸ್‌.ಎಂ. ಪಂಡಿತ ರಂಗ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಲಕಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳ ವಿಶೇಷಚೇತನರು ಪಾಲ್ಗೊಂಡಿದ್ದರು.

ದೃಷ್ಟಿದೋಷ, ಶ್ರವಣದೋಷ, ಬುದ್ಧಿಮಾಂದ್ಯ ಹಾಗೂ ದೈಹಿಕ ಅಂಗವಿಕತೆ ಮಕ್ಕಳು, ಹಿರಿಯರಿಂದ ಬಹುತೇಕ ರಂಗಮಂದಿರ ಭರ್ತಿಯಾಗಿತ್ತು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಾಲಾಜಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮಕ್ಕೆ ಮೆರುಗು ತುಂಬಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಕನೀಜ್‌ ಫಾತೀಮಾ, ವಿಶೇಷಚೇತನ ಮಕ್ಕಳು ದೇವರ ಮಕ್ಕಳಿದ್ದಂತೆ. ಅವರಿಗೆ ಧೈರ್ಯ ತುಂಬಿ ಮುನ್ನಡೆಸುವ ಹೊಣೆ ಎಲ್ಲರದ್ದಾಗಿದೆ. ಅಂಬುಬಾಯಿ ಅಂಧ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಾಸಕರ ನಿಧಿಯಿಂದ ಹಾರೋ ಪ್ಲಾಂಟ್‌ ಸ್ಥಾಪಿಸಲಾಗಿದೆ. ಮುಂದೆ ಸಹ ಅಂಗವಿಕಲರ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಗಮನಕ್ಕೆ ತಂದಿಲ್ಲ. ಅವುಗಳನ್ನು ಸರ್ಕಾರಕ್ಕೆ ಮುಟ್ಟಿಸಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಅಭಯ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಬನ್ಸಿ ಆರ್‌. ಪವಾರ, ಅಂಗವಿಕಲರಲ್ಲಿ ಪ್ರತಿಭೆ ಅಡಗಿದ್ದು, ಅವರಿಗೆ ಅನುಕಂಪಕ್ಕೆ ಹೆಚ್ಚಾಗಿ ಅವಕಾಶಗಳು ಸಿಗಬೇಕಿದೆ. ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕೆ ಎಂದೇ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗಿದೆ. ಆದರೆ, ಇಲಾಖೆ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇಲ್ಲ. ವಿಕಲಚೇತನರ ಕಾರ್ಯಗಳು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತೆರಳುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.

Advertisement

2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 67 ಸಾವಿರ ಅಂಗವಿಕಲರು ಇದ್ದಾರೆ. ಇದುವರೆಗೆ ಕೇವಲ 50 ಸಾವಿರ ಜನರ ಮಾಹಿತಿ ಲಭ್ಯವಿದೆ. ಅಂಗವಿಕರಿಗೆ 21 ಮಾದರಿಯಲ್ಲಿ ಪ್ರಮಾಣ ಪತ್ರಗಳು ಸಿಗುತ್ತವೆ. ಸರ್ಕಾರದ ಯೋಜನೆಗಳು ಎಲ್ಲರಿಗೂ ಮುಟ್ಟಬೇಕಾಗಿದ್ದು, ಸುತ್ತ-ಮತ್ತಲಿನ ಅಂಗವಿಕಲರ ಬಗ್ಗೆ ಇಲಾಖೆಗೆ ಮಾಹಿತಿ ಕೊಡಿ. ಈಗ ಮಗುವನ್ನು ಕೇಂದ್ರವಾಗಿಟ್ಟುಕೊಂಡು ಅನುದಾನ ನೀಡಲಾಗುತ್ತಿದ್ದು, ಇದರ ಲಾಭ ಎಲ್ಲರೂ ಪಡೆಯುವಂತಾಗಬೇಕು ಎಂದು ಹೇಳಿದರು. 

ಅಂಬುಬಾಯಿ ಅಂಧ ಹೆಣ್ಣು ಮಕ್ಕಳ ಶಾಲೆ ಮುಖ್ಯೋಪಾಧ್ಯಯ ದತ್ತು ಅಗರವಾಲ್‌, ಅಪ್ಪಾರಾವ ಅಕ್ಕೋಣೆ ಮಾತನಾಡಿದರು. ಬಸವರಾಜ ಹಡಪದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮಂತ ರೇವೂರ, ನಾಗರಾಜ ಅವಂಟೆ, ಯಶೋರಾವ, ಶಿವಶರಣಪ್ಪ ರಾಜ, ಅನಂತರಾಜ, ಆನಂದ ಸಜ್ಜನ, ನಾಗಣ್ಣ, ಪ್ರಕಾಶ ಭಜಂತ್ರಿ ಇದ್ದರು. 

ಭಾಷಣ ಮಾಡಿದ ಮೂಕ ಬಾಲಕಿ!
ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಶೇಷಚೇತನ ಮಕ್ಕಳು ತಮ್ಮದೇ ಆದ ಪ್ರತಿಭೆಯಿಂದ ಗಮನ ಸೆಳೆದರು. ಅಂಜನಾ ಮೂಗ ಶಾಲೆ ಬಾಲಕಿ ಪ್ರಿಯಾಂಕಾ ಬಿರಾದಾರ ಅವರನ್ನು ಭಾಷಣಕ್ಕೆ ಆಹ್ವಾನಿಸಿದಾಗ ಹೇಗೆ ಮಾತನಾಡುವಳು ಎಂದು ನೆರೆದಿದ್ದ ಎಲ್ಲರೂ ಕ್ಷಣ ಆಶ್ಚರ್ಯಗೊಂಡರು. 

ಮತ್ತೂಬ್ಬರ ಸಹಾಯದೊಂದಿಗೆ ವೇದಿಕೆಗೆ ಬಂದ ಪ್ರಿಯಾಂಕಾ ಕೈಗಳಿಂದ ಸಂಜ್ಞೆ ಮಾಡಲು ಆರಂಭಿಸಿದಳು. ಇತ್ತ, ಪಕ್ಕದಲ್ಲೇ ಇದ್ದ ಶಿಕ್ಷಕಿಯೊಬ್ಬರು ಪ್ರಿಯಾಂಕಾಳ ಸಂಜ್ಞೆಯನ್ನೇ ಗಮನಿಸುತ್ತಾ ವಿವರಿಸಿದರು. 1980ರ ಭೋಪಾಲ ಅನಿಲ ದುರಂತದ ಪರಿಣಾಮ ಮತ್ತು ವಿಶ್ವ ವಿಕಲಚೇನರ ದಿನದ ಹಿನ್ನೆಲೆಯನ್ನು ಪ್ರಿಯಾಂಕಾ ಸಂಜ್ಞೆಯಿಂದಲೇ ಸಭಿಕರ ಮನ ಮುಟ್ಟಿಸಿದಳು. ಇದಕ್ಕೂ ಮುನ್ನ ಮೂಕ ಮಕ್ಕಳಿಗೂ ಕಾರ್ಯಕ್ರಮ ತಲುಪಬೇಕು ಎಂಬ ನಿಟ್ಟಿನಲ್ಲಿ ಅಂಜನಾ ಮೂಗ ಶಾಲೆಯ ರಾಘವೇಂದ್ರ ಮಾನೆ ಅತಿಥಿಗಳ ಭಾಷಣವನ್ನು ಸಂಜ್ಞೆ ಮೂಲಕ ವಿವರಿಸಿದರು. ಇದೇ ವೇಳೆ ಬುದ್ಧಿಮಾಂದ್ಯ ಮಕ್ಕಳು ತಾವೇ ತಯಾರಿಸಿದ ಕಾಗದದ ಹೂವಿನ ಮಾದರಿಗಳನ್ನು ಗಣ್ಯರಿಗೆ ವಿತರಿಸಿ ಗಮನ ಸೆಳೆದರು. 

Advertisement

Udayavani is now on Telegram. Click here to join our channel and stay updated with the latest news.

Next