ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆಯ ಎರಡನೇ ಹಂತದ ಪ್ರಹಸನ ಇದೀಗ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಂಗಳಕ್ಕೆ ತಲುಪಿದೆ.
ಟಿಕೆಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದವರ ಪೈಕಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮೂವರ ಹೆಸರನ್ನು ಅಂತಿಮಗೊಳಿಸಿ ಆ ಪಟ್ಟಿಯನ್ನು ರಾಜ್ಯ ಚುನಾವಣಾ ಸಮಿತಿಗೆ ಕಳಿಸಿಕೊಡುವ ಅಧಿಕಾರವನ್ನು ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೀಡಲು ಭಾನುವಾರ ನಡೆದ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದಾಗ 1,350 ಅರ್ಜಿಗಳು ಬಂದಿವೆ. ಆ ಅರ್ಜಿಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಹೆಸರಗಳನ್ನು ಆಯ್ಕೆ ಮಾಡಿ ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಡಿ.31ರೊಳಗೆ ರಾಜ್ಯ ಚುನಾವಣಾ ಸಮಿತಿಗೆ ಕಳಿಸಿಕೊಡಬೇಕು. ಜನವರಿ ಮೊದಲ ವಾರದಲ್ಲಿ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿ ಆ ಹೆಸರಗಳನ್ನು ಪರಿಶೀಲಿಸಿ ಹೈಕಮಾಂಡ್‌ಗೆ ಶಿಫಾರಸು ಮಾಡಲಿದೆ.
ಅಭ್ಯರ್ಥಿಗಳನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ ಎಂದು ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸದೆ ಇರುವ ಹೆಸರುಗಳನ್ನು ಪರಿಗಣಿಸಲಾಗುತ್ತದೆಯೇ ಎಂದು ಕೇಳಿದ್ದಕ್ಕೆ, ಉತ್ತಮ ಅಭ್ಯರ್ಥಿಗಳಿದ್ದರೆ ಪರಿಶೀಲಿಸಲಾಗುವುದು ಎಂದು ಉತ್ತರಿಸಿದರು.
ಡಿಕೆಶಿ ಖಡಕ್ ವಾರ್ನಿಂಗ್
ಅಭ್ಯರ್ಥಿಗಳನ್ನು ಘೋಷಿಸುವ ಅಧಿಕಾರ ಯಾರಿಗೂ ಇಲ್ಲ. ಅಭ್ಯರ್ಥಿಗಳ ಹೆಸರನ್ನು ಯಾರೂ ಘೋಷಿಸಬಾರದು. ಪಕ್ಷದ ಮಿತಿ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಗಂಗಾವತಿ, ಹುನಗುಂದದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದರು, ಭಾನುವಾರ ಮಾಜಿ ಸಚಿವ ಜಮೀರ್ ಅಹ್ಮದ್ ಮೈಸೂರಿನಲ್ಲಿ ಅಭ್ಯರ್ಥಿ ಹೆಸರು ಘೋಷಿಸಿದ್ದರು.