ಜೇವರ್ಗಿ: ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ನಿವೇಶನ ಮಂಜೂರು ಮಾಡಿದ ಹಿನ್ನೆಲೆಯಲ್ಲಿ ವೀರಶೈವ ಸಮಾಜ ತಾಲೂಕು ಘಟಕದ ವತಿಯಿಂದ ಸೋಮವಾರ ಬಸವೇಶ್ವರ ವೃತ್ತದ ಬಳಿ ಸಂಭ್ರಮಾಚರಣೆ ಆಚರಿಸಲಾಯಿತು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸಿದ್ದು ಸಾಹು ಅಂಗಡಿ ನೇತೃತ್ವದಲ್ಲಿ ಬಸವೇಶ್ವರ ಸರ್ಕಲ್ ಬಳಿ ಜಮಾಯಿಸಿದ ನೂರಾರು ಜನ ಬಸವಾಭಿಮಾನಿಗಳು ಸರ್ಕಾರದ ಪರ ಜಯಘೋಷ ಹಾಕುತ್ತಾ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ವಿತರಣೆ ಮಾಡುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಸೊನ್ನ ವಿರಕ್ತ ಮಠದ ಡಾ| ಶಿವಾನಂದ ಸ್ವಾಮೀಜಿ ಮಾತನಾಡಿ, ಕಳೆದ ಹಲವಾರು ವರ್ಷಗಳ ಬೇಡಿಕೆ ಈಡೇರಿದಂತಾಗಿದ್ದು, ರಾಜ್ಯ ಸರ್ಕಾರ ನಿವೇಶನ ಮಂಜೂರು ಮಾಡಿರುವುದು ಬಸವಾಭಿಮಾನಿಗಳಲ್ಲಿ ಹರ್ಷವನ್ನುಂಟು ಮಾಡಿದೆ. ಬರುವ ದಿನಗಳಲ್ಲಿ ಜೇವರ್ಗಿ ಪಟ್ಟಣದಲ್ಲಿ ಐತಿಹಾಸಿಕ ಅತೀ ಎತ್ತರದ ಅಶ್ವಾರೂಢ ಬಸವಣ್ಣನವರ ಮೂರ್ತಿ ಸ್ಥಾಪನೆ ಆಗಲಿದೆ ಎಂದರು.
ನೆಲೋಗಿ ವಿರಕ್ತ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಸಮಾನತೆಯ ಹರಿಕಾರ, ವಿಶ್ವಗುರು ಅಣ್ಣ ಬಸವಣ್ಣನವರ ಪುತ್ಥಳಿ ಸ್ಥಾಪನೆಗೆ ನಿವೇಶನ ಮಂಜೂರು ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಪಿಎಂಸಿ ಸಚಿವ ಎಸ್.ಟಿ. ಸೋಮಶೇಖರ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರಿಗೆ ತಾಲೂಕಿನ ಬಸವಾಭಿಮಾನಿಗಳ ಹಾಗೂ ವೀರಶೈವ-ಲಿಂಗಾಯತ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು. ಶೀಘ್ರದಲ್ಲಿ ಪುತ್ಥಳಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದರು.
ಸಂಭ್ರಮಾಚರಣೆಯಲ್ಲಿ ಜಿಪಂ ಮಾಜಿ ಸದಸ್ಯ ಬಸವರಾಜ ಪಾಟೀಲ ನರಿಬೋಳ, ಷಣ್ಮುಖಪ್ಪ ಹಿರೇಗೌಡ, ರಾಜಶೇಖರ ಸೀರಿ, ವಿಜಯಕುಮಾರ ಹಿರೇಮಠ, ಆದಪ್ಪ ಸಾಹು ಸಿಕೇದ್, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಸಂಗನಗೌಡ ಗುಳ್ಳಾಳ, ಬಾಪುಗೌಡ ಬಿರಾಳ, ಷಣ್ಮುಖಪ್ಪ ಸಾಹು ಗೋಗಿ, ಬಸವರಾಜ ಸಾಸಾಬಾಳ, ಮಹಾಂತಸಾಹು ಹರವಾಳ, ಬಾಪುಗೌಡ ಪಾಟೀಲ ಕಲ್ಲಹಂಗರಗಾ, ಸಂಗನಗೌಡ ರದ್ದೇವಾಡಗಿ, ಗುರುಗೌಡ ಮಾಲಿಪಾಟೀಲ, ಗುರುಲಿಂಗಯ್ಯ ಸ್ವಾಮಿ ಯನಗುಂಟಿ, ಪ್ರಕಾಶಚಂದ್ರ ಕೂಡಿ, ಷಣ್ಮುಖಯ್ಯ ಘಂಟಿಮಠ, ತಿಪ್ಪಣ್ಣ ಹಡಪದ, ದೇವೀಂದ್ರ ಬನ್ನೆಟ್ಟಿ, ಮಲ್ಲಿಕಾರ್ಜುನ ಬಿರಾದಾರ, ಸಿದ್ಧು ಅಂಕಸದೊಡ್ಡಿ, ಗೌರಿಶಂಕರ ಸಂಕಾ, ವಿಶ್ವ ಪಾಟೀಲ, ಬಿ.ಸಿ. ಗದ್ದಗಿಮಠ, ಸಾಹೇಬಗೌಡ ಬುಟ್ನಾಳ, ರವಿ ಅವಂಟಿ, ಕೇದಾರಲಿಂಗಯ್ಯ ಹಿರೇಮಠ, ವಿಶಾಲ ಭಂಕೂರ ಸೇರಿದಂತೆ ಹಲವಾರು ಜನ ಬಸವಾಭಿಮಾನಿಗಳು ಇದ್ದರು.