Advertisement

High Court: ಶವಸಂಸ್ಕಾರಕ್ಕೆ ಸ್ಮಶಾನ ಜಾಗ ಮಂಜೂರು- ಸರ್ಕಾರಿ ಜಮೀನು ಒತ್ತುವರಿ ತೆರವು

09:20 PM Aug 09, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಜನವಸತಿ ಇರುವ ಎಲ್ಲಾ ಗ್ರಾಮಗಳಿಗೆ ಗೌರವಯುತ ಮತ್ತು ಸಾಂಪ್ರದಾಯಿಕವಾಗಿ ಶವ ಸಂಸ್ಕಾರ ಮಾಡಲು ಸ್ಮಶಾನ ಭೂಮಿ ಒದಗಿಸಲು ಹಾಗೂ ಒತ್ತುವರಿಯಾದ ಸರ್ಕಾರಿ ಜಮೀನುಗಳನ್ನು ತೆರವುಗೊಳಿಸಲು ನ್ಯಾಯಾಲಯದ ನಿರ್ದೇಶನದಂತೆ ಕೈಗೊಂಡಿರುವ ಕ್ರಮಗಳ ಕುರಿತು ಅರ್ಜಿದಾರರು ಎತ್ತಿರುವ ಆಕ್ಷೇಪಗಳಿಗೆ ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು ಹೈಕೋರ್ಟ್‌ ಹೊರಡಿಸಿರುವ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್‌ ಇಕ್ಬಾಲ್‌ ಸಲ್ಲಿಸಿದ್ದ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯು ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಹಾಗೂ ನ್ಯಾ. ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ಅನುಪಾಲನಾ ವರದಿ ಬಗ್ಗೆ ಅರ್ಜಿದಾರರು ಎತ್ತಿರುವ ಆಕ್ಷೇಪಗಳಿಗೆ ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ರಾಜ್ಯದಲ್ಲಿ ಜನಸವತಿ ಇರುವ ಎಲ್ಲಾ ಗ್ರಾಮಗಳಿಗೆ ಶವ ಸಂಸ್ಕಾರಕ್ಕಾಗಿ ಸ್ಮಶಾನ ಜಾಗ ಮಂಜೂರು ಮಾಡಬೇಕು ಹಾಗೂ ಒತ್ತುವರಿಯಾದ ಸರ್ಕಾರ ಜಮೀನನ್ನು ತೆರವುಗೊಳಿಸಬೇಕು ಎಂದು 2019ರ ಆಗಸ್ಟ್‌ 20ರಂದು ಹೈಕೋರ್ಟ್‌ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳುತ್ತಾ ಬಂದಿದೆ. ಆದರೆ, ವಾಸ್ತವ ಸಂಗತಿ ಬೇರೆಯೇ ಇದೆ. ಇನ್ನೂ ಅನೇಕ ಗ್ರಾಮಗಳಿಗೆ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಒದಗಿಸಿಲ್ಲ.

ಹಾಸನ ಜಿಲ್ಲೆ ಅರಕಲಗೋಡಿನಲ್ಲಿ ಕಳೆದ ತಿಂಗಳು ದಲಿತ ವ್ಯಕ್ತಿಯೊಬ್ಬರು ಮೃತಪಟ್ಟಾಗ ಶವಸಂಸ್ಕಾರಕ್ಕೆ ಜಾಗ ಇಲ್ಲದ ಕಾರಣ, ಮೃತರ ಮನೆ ಮುಂದೆಯೇ ಶವಸಂಸ್ಕಾರ ನಡೆದಿದೆ. ಖುದ್ದು ಸ್ಥಳಕ್ಕೆ ತಾನು ಭೇಟಿ ಕೊಟ್ಟಿದ್ದೆ. ಇನ್ನೂ ಸ್ಮಾಶನ ಜಾಗ ಒದಗಿಸಬೇಕಾಗಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ ಎಂದು ಅರ್ಜಿದಾರರು ತಮ್ಮ ಆಕ್ಷೇಪಣಾ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

Advertisement

ಹೈಕೋರ್ಟ್‌ ಆದೇಶ ಮಾಡಿದ್ದಾಗ ಒತ್ತುವರಿಯಾದ ಸರ್ಕಾರಿ ಜಮೀನಿನ ಪ್ರಮಾಣ 11.77 ಲಕ್ಷ ಎಕರೆಗೂ ಅಧಿಕ ಇತ್ತು. ಈಗ ಒತ್ತುವರಿಯಾದ ಸರ್ಕಾರಿ ಜಮೀನಿನ ಪ್ರಮಾಣ 14.62 ಲಕ್ಷ ಎಕರೆ ಇದೆ. ಈ ರೀತಿ ಸರ್ಕಾರದ ಜಮೀನಿನ ಒತ್ತುವರಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಮೈಸೂರು ತಾಲೂಕಿನಲ್ಲಿ ಒತ್ತುವರಿಯಾಗಿರುವ 2.25 ಎಕರೆ ಸ್ಮಶಾನ ಜಾಗ 10 ವರ್ಷ ಕಳೆದರೂ ತೆರವುಗೊಳಿಸಿಲ್ಲ. ನನಗೆ ಲಭ್ಯವಾಗಿರುವ ಮಾಹಿತಿ ಪ್ರಕಾರವೇ 16 ಗ್ರಾಮಗಳ ನಿವಾಸಿಗಳು ತಮ್ಮ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರಾತಿಗೆ ಕೋರಿದ್ದಾರೆ. ಮನವಿ ಸಲ್ಲಿಸಿದವರಲ್ಲಿ ಮುಸ್ಲಿಂ, ಬೌದ್ಧ ಹಾಗೂ ಜೈನ ಸಮುದಾಯದವರು ಇದ್ದಾರೆ. ಇನ್ನೂ ಸ್ಮಶಾನಕ್ಕಾಗಿ ಹೆಚ್ಚುವರಿ ಭೂಮಿ ಮಂಜೂರಾತಿಗೆ ಕೋರಲಾಗಿದ್ದು, ಅವುಗಳನ್ನು ಸರ್ಕಾರ ಪರಿಗಣಿಸಬೇಕಿದೆ ಅರ್ಜಿದಾರರು ತಮ್ಮ ಆಕ್ಷೇಪಣಾ ಪ್ರಮಾಣಪತ್ರದಲ್ಲಿ ವಿವರಿಸಿದ್ದಾರೆ. ಇದಕ್ಕೆ ಎರಡು ವಾರಗಳಲ್ಲಿ ಸರ್ಕಾರ ವಿವರಣೆ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next