Advertisement

ಬೈಂದೂರು ತಾಲೂಕಿಗೆ ಅಗ್ನಿಶಾಮಕ ಠಾಣೆ ಮಂಜೂರು

11:26 PM Feb 03, 2020 | Sriram |

ಬೈಂದೂರು: ಕಳೆದ ಹಲವು ಸಮಯದಿಂದ ಬೇಡಿಕೆಯಿರುವ ಬೈಂದೂರು ತಾಲೂಕು ಅಗ್ನಿಶಾಮಕ ಠಾಣೆಗೆ ಸರಕಾರದಿಂದ ಮಂಜೂರಾತಿ ದೊರೆತಿದೆ. ಈ ಮೂಲಕ ಬೈಂದೂರು ತಾಲೂಕು ಅಭಿವೃದ್ಧಿಗೆ ಇನ್ನಷ್ಟು ವೇಗ ಕಂಡುಕೊಳ್ಳಬೇಕಾಗಿದೆ. ಸಂಸದರು ಹಾಗೂ ಶಾಸಕರು ಈ ಕುರಿತು ವಿಶೇಷ ಮುತುವರ್ಜಿ ವಹಿಸಿದ್ದು ಇನ್ನಷ್ಟು ಯೋಜನೆಗಳ ಸಾಕಾರವಾಗುವ ಮೂಲಕ ತಾಲೂಕು ಕೇಂದ್ರದ ಅಭಿವೃದ್ಧಿ ಮತ್ತುಷ್ಟು ಚುರುಕು ಕಾಣಬೇಕಾಗಿದೆ.

Advertisement

ಅಗ್ನಿಶಾಮಕ ಠಾಣೆ
ಬೈಂದೂರಿಗೆ ಯಾಕೆ ಅವಶ್ಯ?
ಬೈಂದೂರು ಕ್ಷೇತ್ರದ ಭೌಗೋಳಿಕ ವಿನ್ಯಾಸ ಆತ್ಯಂತ ವಿಭಿನ್ನ ಹಾಗೂ ವಿಶಿಷ್ಟವಾಗಿದೆ.ಸುಮಾರು 500ಕ್ಕೂ ಅಧಿಕ ಕೈಗಾರಿಕಾ ಘಟಕಗಳಿವೆ. ಸಹ್ಯಾದ್ರಿ ಮಲೆನಾಡು ಹಾಗೂ ಕರಾವಳಿ ಭಾಗವನ್ನೊಳಗೊಂಡಿದೆ. ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತದೆ.ರಸ್ತೆ ಅವಘಡ, ಕಾಡ್ಗಿಚ್ಚು ಸಂಭವಿಸಿದಾಗ ಕುಂದಾಪುರ ಹಾಗೂ ಭಟ್ಕಳದಿಂದ ಅಗ್ನಿಶಾಮಕ ವಾಹನಗಳು ಬರಬೇಕಾಗುತ್ತದೆ. ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಜತೆಗೆ ಮೀನುಗಾರಿಕೆ ಬಂದರು ದೋಣಿ ನಿರ್ಮಾಣ ಕೇಂದ್ರ ಕೂಡ ಇದೆ. ಕೈಗಾರಿಕೆಗಳು ಅಭಿವೃದ್ಧ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಬೈಂದೂರಿನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಬೇಕು ಎಂದು ಸ್ಥಳೀಯರು ಹಲವು ಸಮಯದಿಂದ ಬೇಡಿಕೆ ಸಲ್ಲಿಸಿದ್ದರು ಕಳೆದ ಮೂರು – ನಾಲ್ಕು ವರ್ಷದ ಹಿಂದೆ ಇಲ್ಲಿನ ನಾಗರೀಕರ ಒತ್ತಡಕ್ಕೆ ಸ್ಪಂದಿಸಿದ ಅಂದಿನ ಶಾಸಕ ಕೆ. ಗೋಪಾಲ ಪೂಜಾರಿಯವರು ಯಡ್ತರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಯೋಜನಾನಗರದ ಬಳಿ ಸರ್ವೆ ನಂಬರ್‌ 263/ಪಿ2 ರಲ್ಲಿ ಒಂದು ಏಕ್ರೆ ಸರ್ಕಾರಿ ಜಾಗವನ್ನು ಗುರುತಿಸಿ, ಜಿಲ್ಲಾಧಿಕಾರಿಗಳ ಮೂಲಕ ಇಲಾಖೆಯ ಹೆಸರಿಗೆ ಮಂಜೂರು ಮಾಡಿಸಿದ್ದರು. ಪಹಣೆ ಕೂಡಾ ಇಲಾಖೆಯ ಹೆಸರಿಗೆ ದಾಖಲಾಗಿದೆ. ಬಳಿಕ ಅಗ್ನಿಶಾಮಕ ಠಾಣೆಯ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು ಕೂಡ ಕಾರಣಾಂತರದಿಂದಾಗಿ ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರ ಅವಿರತ ಶ್ರಮದ ಫಲವಾಗಿ ಅಗ್ನಿಶಾಮಕ ಠಾಣೆಗೆ ಸರ್ಕಾರದ ಮಂಜೂರಾತಿ ದೊರಕಿದೆ.

ಮಂಜೂರಾದ ಹುದ್ದೆ
ಬೈಂದೂರು ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ತೆರೆಯುವ ಪ್ರಸ್ತಾವನೆಯನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಂಜೂರು ಮಾಡಿದೆ.

ಒಂದು ಅಗ್ನಿಶಾಮಕ ಠಾಣಾಧಿಕಾರಿ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, 4 ಪ್ರಮುಖ ಅಗ್ನಿಶಾಮಕರು, 4 ಅಗ್ನಿಶಾಮಕ ಚಾಲಕರು, 1 ಚಾಲಕ ತಂತ್ರಜ್ಞ, 16 ಅಗ್ನಿಶಾಮಕರು, 2 ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ 29 ಸಿಬ್ಬಂದಿ ಹಾಗೂ ಠಾಣೆಗೆ ಅಗತ್ಯವಿರುವ 2 ಜಲವಾಹನ, 2 ಪೋರ್ಟ್‌ಬಲ್‌ ಪಂಪು, ಮೋಟಾರ್‌ ಸೈಕಲ್‌, ಏರ್‌ ಕಂಪ್ರಷರ್‌ನ್ನು ಸರ್ಕಾರ ಮಂಜೂರು ಮಾಡಿದೆ.

ಹಲವು ಸಮಯದಿಂದ ಬೈಂದೂರಿನಲ್ಲಿ ಪ್ರತ್ಯೇಕ ಅಗ್ನಿಶಾಮಕ ಠಾಣೆ ಆರಂಭಿಸು ವಂತೆ ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

Advertisement

ಹಿಂದಿನ ಶಾಸಕರು ಅಗ್ನಿಶಾಮಕ ಠಾಣೆಗೆ ಸ್ಥಳ ಮಂಜೂರಾತಿ ಗೊಳಿಸಿದ್ದರು. ಹಾಲಿ ಶಾಸಕರು ಹಾಗೂ ಸಂಸದರ ಸಹಕಾರದಿಂದ ಅಗ್ನಿಶಾಮಕ ಠಾಣೆಗೆ ಮಂಜೂರಾತಿ ದೊರಕಿರುವುದು ಸಂತಸದ ವಿಷಯ ಆದಷ್ಟು ಬೇಗ ನಿರ್ಮಾಣ ಕಾರ್ಯ ನಡೆಯಬೇಕಿದೆ.

ಶೀಘ್ರ ಸುಸಜ್ಜಿತ ಕಟ್ಟಡ ನಿರ್ಮಾಣ
ಬೈಂದೂರು ಜನತೆಯ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, ಸಂಸದರ ಸಹಕಾರದಿಂದ, ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ, ನೂತನ ಬೈಂದೂರು ತಾಲೂಕಿಗೆ ಅಗ್ನಿಶಾಮಕ ಠಾಣೆ ಮಂಜೂರಾತಿ ದೊರಕಿಸಿಕೊಡಲಾಗಿದೆ. ಸದ್ಯ ತಾತ್ಕಾಲಿಕ ಕಟ್ಟಡದಲ್ಲಾದರೂ ಕಾರ್ಯಾರಂಭ ಮಾಡಿಸಿ, ಶೀಘ್ರ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು.
– ಬಿ.ಎಂ. ಸುಕುಮಾರ ಶೆಟ್ಟಿ, ಶಾಸಕರು

ಅಗತ್ಯ ಕ್ರಮ
ಬೈಂದೂರಿನಲ್ಲಿ ನೂತನ ಅಗ್ನಿ ಶಾಮಕ ಠಾಣೆ ತೆರೆಯುವ ಸಂಬಂಧ ಸರ್ಕಾರ ಮಂಜೂರಾತಿ ದೊರಕಿರುವುದು ವಿವಿಧ ಮೂಲದ ಮೂಲಕ ಗಮನಕ್ಕೆ ಬಂದಿದೆ. ಇಲಾಖಾಧಿಕಾರಿಗಳ ಮೂಲಕ ಅಧಿಕೃತ ಆದೇಶ ಇನ್ನಷ್ಟೆ ಬರಬೇಕಾಗಿದೆ.ಆ ಬಳಿಕ ಇದರ ಕಾರ್ಯಾರಂಭದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
– ವಸಂತ, ಜಿಲ್ಲಾ
ಅಗ್ನಿಶಾಮಕದಳ ಅಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next