ಹಾಸನ: ನಗರದ ಸುತ್ತಮುತ್ತ 3 ಸಾವಿರ ನಿವೇಶನಗಳಿಗೆ ಜಾಗ ಗುರುತಿಸಲಾಗಿದ್ದು, ಹಲವು ವರ್ಷಗಳಿಂದ ಹಾಸನದಲ್ಲಿ ವಾಸವಿರುವ ಅರ್ಹ ವಸತಿ ರಹಿತರಿಗೆ ನಿವೇಶನಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಾಸನ ನಗರದಲ್ಲಿ ಹಲವು ವರ್ಷಗಳಿಂದ ವಾಸವಿದ್ದು, ಸ್ವಂತ ಮನೆ ಸ್ವಂತ ಇಲ್ಲದ ಅರ್ಹರಿಗೆ ನಿವೇಶನ ನೀಡಲು ನಿರ್ಧರಿ ಸಲಾಗಿದೆ. ಈ ಬಗ್ಗೆ ಜೂ.19ರಂದು ಸಾರ್ವಜನಿಕ ಪ್ರಕಟಣೆ ನೀಡಿ ಜೂ. 21 ರಿಂದ ವಾರ್ಡ್‌ವಾರು ಅರ್ಜಿಗಳನ್ನು ಸ್ವಿಕರಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಕಾರ್ಯಕ್ರಮ ರೂಪಿಸುವಂತೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಭೂ ಸ್ವಾಧಿನ ಪ್ರಕ್ರಿಯೆ ಚುರುಕಾಗಲಿ: ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಹಕರಿಸಬೇಕು. ಬೇಲೂರು – ಬಿಳಿಕೆರೆ (ಮೈಸೂರು) ರಾಷ್ಟ್ರೀಯ ಹೆದ್ದಾರಿ, ಹಾಸನ – ಬೇಲೂರು- ಚಿಕ್ಕಮಗಳೂರು ರೈಲ್ವೆ ಮಾರ್ಗ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅದಕ್ಕೆ ಸರ್ವೆ ಕಾರ್ಯ ತುರ್ತಾಗಿ ಮುಗಿಸಿ ಎಂದು ನಿರ್ದೇಶನ ನೀಡಿದ ಅವರು, ಹೊಸ ನೀರಾವರಿ ಯೋಜನೆಗೂ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ಅಗತ್ಯರುವ ಸರ್ವೆಯರ್‌ಗಳನ್ನು ಹಾಗೂ ಇತರ ಸಿಬ್ಬಂದಿಯನ್ನು ತಕ್ಷಣವೇ ನಿಯೋಜಿಸುವಂತೆ ಜಿಲ್ಲಾಧಿಕಾರಿಯವರು ಮತ್ತು ಭೂದಾಖಲೆಗಳ ಉಪ ನಿರ್ದೇಶಕರಿಗೆ ಸಚಿವರು ತಾಕೀತು ಮಾಡಿದರು.
ತೋಟಗಾರಿಕೆ ಕಾಲೇಜಿಗೆ ಸೂಕ್ರ ಕ್ರಮ ಕೈಗೊಳ್ಳಿ: ಹಾಸನ ತಾಲೂಕು ಸೋಮನಹಳ್ಳಿ ಕಾವಲ್ನ ಆಲೂಗಡ್ಡೆ ಸಂಶೋಧನಾ ಕೇಂದ್ರ, ತೋಟಗಾರಿಕಾ ಕಾಲೇಜು, ಫಲಪುಷ್ಪ ಅಭಿವೃದ್ಧಿ ಕೇಂದ್ರದ ಮಾದರಿಯಾಗಿ ನಿರ್ಮಾಣವಾಗಬೇಕು ಅದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಮಾದರಿ ಕೃಷಿ ಪದ್ಧತಿ ರೂಪಿಸಿ: ಎಲ್ಲಾ ತಾಲೂಕುಗಳಲ್ಲಿ 500 ಎಕರೆ ಜಮೀನು ಗುರುತಿಸಿ, ಉದ್ಯೋಗ ಖಾತರಿ, ಕೃಷಿ, ತೋಅಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ ಇಲಾಖೆ ಯೋಜನೆ ಗಳನ್ನು ಸಂಯೋಜಿಸಿ ಸಬ್ಸಿಡಿ, ಬ್ಯಾಂಕ್ ಸಾಲವನ್ನು ಒಳಗೊಂಡಂತೆ ಪಂಚವಾರ್ಷಿಕ ಯೋಜನೆಯಂತೆ ಮಾದರಿ ಕೃಷಿ ಪದ್ಧತಿ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸಚಿವ ರೇವಣ್ಣ ಸೂಚಿಸಿದರು.
ನಗರದ ಎನ್.ಆರ್. ವೃತ್ತದಿಂದ ತಣ್ಣೀರು ಹಳ್ಳದ ವರೆಗೆ ಮುಂದಿನ ನಾಲ್ಕು ತಿಂಗಳಲ್ಲಿ ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಪೂರ್ಣಗೊಳಿಸಬೇಕು, ಪೊಲೀಸ್ ಇಲಾಖೆ ಇದಕ್ಕೆ ಅಗತ್ಯ ಸಂಚಾರಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಮಾರ್ಗಸೂಚಿಯಂತೆ ವ್ಯವಸ್ಥಿತವಾಗಿ ರಸ್ತೆ ಕಾಮಗಾರಿ ಮುಗಿಸಿ ಎಂದು ಸಚಿವರು ರಾಷ್ಟ್ರೀಯ ಹೆದ್ದಾರಿ, ನಗರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.