ಮಂಡ್ಯ: ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಕೇವಲ ಉಪ ಚುನಾವಣೆಗೆ ಮಾತ್ರ ಸೀಮಿತವಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ. ಇದರ ಬಗ್ಗೆ ಈಗಾಗಲೇ ಮಾತುಕತೆ ನಡೆಸಿ ನಿರ್ಧಾರ ಮಾಡಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರು ಯಾವ ಪಕ್ಷಕ್ಕೂ ಬಹುಮತ ಕೊಡಲಿಲ್ಲ. ಕೋಮುವಾದಿ ಬಿಜೆಪಿ ಪಕ್ಷವನ್ನು ಹೊರಗಿಡಲು ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆವು.
ಹೀಗಾಗಿ ನಾವು ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಈ ಹೊಂದಾಣಿಕೆ ಕೇವಲ ಉಪ ಚುನಾವಣೆಗೆ ಮಾತ್ರ ಸೀಮಿತವಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ. ಇದರ ಬಗ್ಗೆ ಈಗಾಗಲೇ ಮಾತುಕತೆ ನಡೆಸಿ ನಿರ್ಧಾರ ಮಾಡಿ ಆಗಿದೆ. ಈ ವಿಷಯವಾಗಿ ಯಾರಲ್ಲೂ ಗೊಂದಲ, ಅಸಮಾಧಾನವಿಲ್ಲ. ಹಿಂದೆ ಆಗಿರುವುದನ್ನೆಲ್ಲಾ ಮರೆತಿದ್ದೇವೆ. ಮೈತ್ರಿ ಮಾಡಿಕೊಂಡ ಕಾರಣಕ್ಕೆ ಕಾಂಗ್ರೆಸ್ ದುರ್ಬಲ ಆಗೋಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಬಲಿಷ್ಠವಾಗಿದೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ನಾವೂ ಜೆಡಿಎಸ್ ವಿರುದ್ಧ ಕಠಿಣವಾಗಿ ಮಾತನಾಡಿದ್ದೇವೆ. ಅವರೂ ಕಠಿಣವಾಗಿ ಮಾತನಾಡಿದ್ದಾರೆ. ಅದೆಲ್ಲವನ್ನೂ ಮರೆಯಬೇಕು. ಜೆಡಿಎಸ್ ವಿರೋಧಿ ಮನಸ್ಥಿತಿಗಳನ್ನು ಒಗ್ಗೂಡಿಸುವ ಕೆಲಸ ಇಂದಿನಿಂದಲೇ ಆರಂಭವಾಗಲಿದೆ.
– ಸಿದ್ದರಾಮಯ್ಯ, ಮಾಜಿ ಸಿಎಂ