ಬಾಗಲಕೋಟೆ: ಜಿಲ್ಲೆಯ ಅಷ್ಟೂ ವಿಧಾನಸಭೆ ಕ್ಷೇತ್ರಗಳ ರಾಜಕೀಯಕ್ಕೂ, ಹುನಗುಂದ ಕ್ಷೇತ್ರದಲ್ಲಿನ ವಾತಾವರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಇಲ್ಲಿ ಜಾತಿ, ಪಕ್ಷ ರಾಜಕಾರಣದ ಜತೆಗೆ ಪ್ರತಿಷ್ಠೆ-ವೈಷಮ್ಯದ ರಾಜಕಾರಣವೂ ಪ್ರತಿ ಬಾರಿ ಪ್ರತಿಧ್ವನಿಸುತ್ತದೆ.
ಹೌದು, ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಬರೋಬ್ಬರಿ 35 ವರ್ಷಗಳ ಬಳಿಕ ಈ ತಾಲೂಕಿನ ಅಭ್ಯರ್ಥಿಯೊಬ್ಬರಿಗೆ ಅವಕಾಶ ಸಿಕ್ಕ ಪ್ರತಿಷ್ಠೆಯೊಂದಿಗೆ, ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಲ್ಲಿನ ಮಹಿಳೆಯೊಬ್ಬರಿಗೆ ಟಿಕೆಟ್ ಕೊಟ್ಟ ಖ್ಯಾತಿಯ ಕ್ರೆಡಿಟ್ ಕಾಂಗ್ರೆಸ್ ಪಡೆದುಕೊಂಡಿತ್ತು. ವೀಣಾ ಕಾಶಪ್ಪನವರ, ಲೋಕಸಭೆ ಚುನಾವಣೆಯ ಅಭ್ಯರ್ಥಿಯಾಗಿದ್ದೇ ತಡ, ಈ ಕ್ಷೇತ್ರದ ಹಾಲಿ ಶಾಸಕ, ಬಿಜೆಪಿಯ ದೊಡ್ಡನಗೌಡ ಪಾಟೀಲರು, ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಳೆದ 2014ರ ಲೋಕಸಭೆ ಚುನಾವಣೆಗಿಂತ, ಈ ಬಾರಿ ಅತಿಹೆಚ್ಚು ಕ್ರಿಯಾಶೀಲರಾಗಿ ದೊಡ್ಡನಗೌಡರು ಚುನಾವಣೆ ಮಾಡಿದ್ದು, ಅವರ ಸ್ಥಳೀಯ ರಾಜಕಾರಣದ ಗುಟ್ಟಲ್ಲದೇ ಬೇರೇನಲ್ಲ.
ಕ್ಷೇತ್ರದಲ್ಲಿ ದೊಡ್ಡನಗೌಡರಿಗೆ ಸ್ವಜಾತಿ ಬಲ ಇಲ್ಲದಿದ್ದರೂ, ಬೇರು ಮಟ್ಟದಲ್ಲಿ ಇರುವ ಬಿಜೆಪಿ ಸಂಘಟನೆ, ಮೋದಿ ಅಲೆ, ಲೋಕಸಭೆ ಅಭ್ಯರ್ಥಿ ಗದ್ದಿಗೌಡರ ಸ್ವಜಾತಿ ಬೆಂಬಲವಿದೆ. ಮುಖ್ಯವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳ ವಿಭಜನೆ, ಆಗ ಹಾಲಿ ಶಾಸಕರಾಗಿದ್ದ ವಿಜಯಾನಂದರ ರೆಬೆಲ್ ನಡವಳಿಕೆ, ತಮ್ಮ ಸ್ವ ಪಕ್ಷದ ಕಾರ್ಯಕರ್ತರಿಗೂ ಬೇಸರ ಮೂಡಿಸಿತ್ತು. ಹೀಗಾಗಿ 2013ರಲ್ಲಿ 15,799 ಮತಗಳ ಅಂತರದಿಂದ ಗೆದ್ದಿದ್ದ ವಿಜಯಾನಂದ, 2018ರ ಚುನಾವಣೆಯಲ್ಲಿ 5,227 ಮತಗಳ ಅಂತರದಿಂದ ಸೋತಿ ದ್ದರು. ಇಲ್ಲಿ ಹಳೆಯ ಸ್ನೇಹಿತನ ದೂರ ಮಾಡಿಕೊಂಡಿದ್ದರಿಂದ ಮುಸ್ಲಿಂ ಮತ ಗಳು ಕೈಕೊಟ್ಟಿದ್ದರೆ, ಜೆಡಿಎಸ್‌ನ ನವಲಿಹಿರೇಮಠರು ಪಡೆದ, ಬಹುಭಾಗ ಮತಗಳು ಕಾಂಗ್ರೆಸ್‌ನದ್ದಾಗಿದ್ದವು. ಅದೆಲ್ಲ ಕಾರಣದಿಂದ ಸೋತ ಬಳಿಕ, ಪಕ್ಷದ ನಾಯಕರ ವಿರುದ್ಧವೇ ಬಹಿರಂಗ ಹೇಳಿಕೆ ಕೊಟ್ಟು, ಕಾಂಗ್ರೆಸ್‌ನಲ್ಲಿ ಒಬ್ಬಂಟಿಯಾಗಿದ್ದರು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಅದೆಲ್ಲವನ್ನೂ ಸರಿದೂಗಿಸಿ, ಅವರ ಪತ್ನಿ ವೀಣಾಗೆ ಟಿಕೆಟ್ ಕೊಟ್ಟು, ಲಿಂಗಾಯತ ಅಸ್ತ್ರ ಪ್ರಯೋಗಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯ.
ಲೆಕ್ಕಾಚಾರವೇನು: ಈ ಕ್ಷೇತ್ರದಲ್ಲಿ ಈ ಬಾರಿ ಶೇ.67.81ರಷ್ಟು ಮತದಾನವಾಗಿದ್ದು, ಕಳೆದ ಲೋಕಸಭೆ ಚುನಾವಣೆಗಿಂತ ಶೇ.3.55ರಷ್ಟು ಹೆಚ್ಚಾಗಿದೆ. ಸ್ಥಳೀಯ ಅಭ್ಯರ್ಥಿ ಎಂಬ ಪ್ಲಸ್ ಜತೆಗೆ ಜೆಡಿಎಸ್‌ನ ಮೈತ್ರಿಯಿಂದ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗಲಿದೆ ಎಂಬುದು ಮೈತ್ರಿ ಪಕ್ಷಗಳ ಲೆಕ್ಕಾಚಾರ. ಮುಸ್ಲಿಂರ ಮತದಾನವೂ ಇಲ್ಲಿ ಕಡಿಮೆಯಾಗಿದ್ದು, ಇದು ಮೈತ್ರಿ ಅಭ್ಯರ್ಥಿಯ ಲೆಕ್ಕಾಚಾರ ಉಲಾr ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ತಾಲೂಕಿನ ಮಹಿಳೆಯಾಗಿ, ಜಿಪಂ ಅಧ್ಯಕ್ಷೆಯಾಗಿ ಉತ್ತಮ ಕೆಲಸ ಮಾಡಿದ ಖ್ಯಾತಿ, ಈ ಚುನಾವಣೆಯಲ್ಲಿ ಅವರಿಗೆ ಮತಗಳಾಗಿ ಪರಿವರ್ತನೆಯಾಗಿವೆ ಎಂಬ ಚರ್ಚೆಯೂ ಒಂದೆಡೆ ಇದೆ. ಇನ್ನೊಂದೆಡೆ, ಕಳೆದ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್-ಬಿಜೆಪಿ ನೇರ ಪೈಪೋಟಿ ಇತ್ತು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳು ವಿಭಜನೆಯಾಗಿದ್ದವು. ಈಗ ಪುನಃ ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿದ್ದು, ಬಿಜೆಪಿಗೆ ಈ ಕ್ಷೇತ್ರದಲ್ಲಿ ಲೀಡ್ ಬರಲ್ಲ ಎಂಬ ವಿಶ್ಲೇಷಣೆ ಒಂದೆಡೆ ನಡೆಯುತ್ತಿದೆ.
ಇನ್ನೊಂದೆಡೆ ಮಾಜಿ ಶಾಸಕರ ನಡೆ, ಮನೆತನಕ ಹೋದರೂ ತಕ್ಷಣ ಕೈಗೆ ಸಿಗಲ್ಲ (ಮನೆಯಲ್ಲಿದ್ದರೂ) ಎಂಬ ಬೇಸರ ಕ್ಷೇತ್ರದ ಹಲವು ಪ್ರಮುಖರು, ಕಾರ್ಯಕರ್ತರು ಹಾಗೂ ಜನರಲ್ಲಿದೆ. ಇದರೊಟ್ಟಿಗೆ ಮೋದಿಯ ಅಲೆ, ಇಡೀ ಕ್ಷೇತ್ರದ ಗ್ರಾಮ ಮಟ್ಟದಲ್ಲಿರುವ ಬಿಜೆಪಿ ಯುವ ಕಾರ್ಯಕರ್ತರ ಸಂಘಟನೆಯ ಬಲದಿಂದ ಪ್ರತಿ ಬೂತ್ ಮಟ್ಟದಲ್ಲಿ ಬಿಜೆಪಿ ಹೆಚ್ಚು ಮತ ಪಡೆಯಲಿದೆ ಎಂಬುದು ಅವರ ಲೆಕ್ಕಾಚಾರ.
ಹಿಂದಿನ ಫಲಿತಾಂಶ ಹೇಗಿದ್ದವು: 2013ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 1,91,811 ಮತದಾರರಿದ್ದು, ಅದರಲ್ಲಿ 1,37,024 (ಶೇ.71.45) ಜನರು ಮತ ಹಾಕಿದ್ದರು. ಆಗ ಬಿಜೆಪಿ 56,923 ಮತ ಪಡೆದರೆ, ಕಾಂಗ್ರೆಸ್ 72,720 ಮತ ಪಡೆದಿತ್ತು. ಇದಾದ ಬಳಿಕ ನಡೆದ 2014ರ ಲೋಕಸಭೆ ಚುನಾವಣೆಯಲ್ಲಿ 2,01,960 ಒಟ್ಟು ಮತದಾರರಿದ್ದರು. ಅದರಲ್ಲಿ 1,29,780 (ಶೇ.64.26) ಮತದಾರರು ಹಕ್ಕು ಚಲಾಯಿಸಿದ್ದರು. ಆಗ ಬಿಜೆಪಿಯ ಗದ್ದಿಗೌಡರು 63,931 ಮತ ಪಡೆದರೆ, ಕಾಂಗ್ರೆಸ್‌ನ ಸರನಾಯಕ 58,460 ಮತ ಪಡೆದಿದ್ದರು. ಬಿಜೆಪಿ ಈ ಕ್ಷೇತ್ರದಲ್ಲಿ 5,471 ಮತಗಳ ಅಂತರ ಕಾಯ್ದುಕೊಂಡಿತ್ತು. 2013ರ ವಿಧಾನಸಭೆ ಚುನಾವಣೆಗಿಂತ 2014ರ ಲೋಕಸಭೆ ಚುನಾವಣೆ ವೇಲೆ 10,149 ಮತದಾರರು ಹೆಚ್ಚಳವಾಗಿದ್ದರು. ಇನ್ನು 2018ರ ವಿಧಾನಸಭೆ ಚುನಾವಣೆ ವೇಳೆ 2,14,149 ಮತದಾರರಿದ್ದರು. ಅದರಲ್ಲಿ 1,56,533 (ಶೇ.73.09) ಮತದಾನ ಮಾಡಿದ್ದರು. ಅದರಲ್ಲಿ ಬಿಜೆಪಿ 65,012, ಕಾಂಗ್ರೆಸ್ 59,785 ಹಾಗೂ ಜೆಡಿಎಸ್ 25,850 ಮತ ಪಡೆದಿದ್ದವು.
ಈ ಬಾರಿಯ ಲೋಕಸಭೆ ಚುನಾವಣೆಗೆ ಕ್ಷೇತ್ರದಲ್ಲಿ ಒಟ್ಟು 2,14,542 ಮತದಾರರಿದ್ದು, ಅದರಲ್ಲಿ 1,45,473 (ಶೇ.67.81) ಹಕ್ಕು ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ರತಿ ಬಾರಿ ಲೋಕಸಭೆ ಚುನಾವಣೆಗೆ ಕಡಿಮೆ ಮತದಾನವಾದರೆ, ವಿಧಾನಸಭೆ ಚುನಾವಣೆಗೆ ಸರಾಸರಿ 70ರ ಮೇಲ್ಪಟ್ಟು ಮತದಾನವಾದ ದಾಖಲೆ ಇವೆ.
•ಶ್ರೀಶೈಲ ಕೆ. ಬಿರಾದಾರ