Advertisement

ವ್ಯಕ್ತಿ ಆಧಾರಿತ ಕ್ಷೇತ್ರದಲ್ಲಿ ಈಗ ಮೈತ್ರಿ ರಾಜಕಾರಣ 

06:00 AM Oct 29, 2018 | |

ಶಿವಮೊಗ್ಗ/ಭದ್ರಾವತಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಿಂದ ಭದ್ರಾವತಿ ವಿಧಾನಸಭಾ ಕ್ಷೇತ್ರದ ಹಾಲಿ, ಮಾಜಿ ಶಾಸಕರಿಗೆ ಸತ್ವ ಪರೀಕ್ಷೆ ಎದುರಾಗಿದೆ. ಈ ಕ್ಷೇತ್ರದ ರಾಜಕೀಯ ಬದ್ಧ ವೈರಿಗಳೆನಿಸಿಕೊಂಡ ಕಾಂಗ್ರೆಸ್‌ ಶಾಸಕ ಬಿ.ಕೆ.ಸಂಗಮೇಶ್‌ ಹಾಗೂ ಮಾಜಿ ಶಾಸಕ ಎಂ.ಜೆ. ಅಪ್ಪಾಜಿಗೂ ಈ ಉಪಚುನಾವಣೆಯಲ್ಲಿ ಒಟ್ಟೊಟ್ಟಿಗೇ ಪ್ರಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಭದ್ರಾವತಿ ಕ್ಷೇತ್ರದ ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಥವಾ ಕಾಂಗ್ರೆಸ್‌ ಕೈ ಹಿಡಿದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಡೆ ಒಲವು ತೋರಿಸುತ್ತಿರುವುದು ಕಳೆದ ಎರಡೂರು ಬಾರಿ ಕಂಡು ಬಂದಿದೆ. ಆದರೆ, ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕಣದಲ್ಲಿರೋದು ಹಾಲಿ, ಮಾಜಿ ಶಾಸಕರಿಬ್ಬರಿಗೂ ದೊಡ್ಡ ಸವಾಲು ತಂದೊಡ್ಡಿದೆ. ಜೆಡಿಎಸ್‌ ಅಭ್ಯರ್ಥಿಗೆ ಹೆಚ್ಚು ಮತ ಬಾರದಿದ್ದರೆ ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಬಿ.ಕೆ.ಸಂಗಮೇಶ್‌ ಅವರ ಸಚಿವ ಸ್ಥಾನದ ಆಸೆಗೆ ಕುತ್ತು ಬರುವ ಸಾಧ್ಯತೆಯಿದೆ. ಮಾಜಿ ಶಾಸಕ ಎಂ.ಜೆ. ಅಪ್ಪಾಜಿಗೆ ಕ್ಷೇತ್ರದಲ್ಲಿ ತಮಗಿರುವ ಬಲ ತೋರಿಸಲು ಇದು ವೇದಿಕೆಯಾಗಿದೆ. ಆದರೆ, ರಾಜಕೀಯ ಬದ್ಧ ವೈರಿಗಳು ಒಟ್ಟಿಗೇ ಸಾಗಬೇಕಿರುವುದು ಅನಿವಾರ್ಯವಾಗಿದೆ. 

ಪಕ್ಷಕ್ಕಿಂತ ವ್ಯಕ್ತಿ ಮುಖ್ಯ: ಭದ್ರಾವತಿ ರಾಜಕಾರಣ ಎಂದರೆ ಅಲ್ಲಿ ಪಕ್ಷಕ್ಕಿಂತ ವ್ಯಕ್ತಿಗಳೇ ಮುಖ್ಯ. ಅಭ್ಯರ್ಥಿ ಯಾರು ಅನ್ನೋದರ ಮೇಲೆ ಸೋಲು, ಗೆಲುವು ನಿರ್ಧಾರವಾಗುತ್ತದೆ. ಇಂತಹ ಭದ್ರಾವತಿಯಲ್ಲಿ 25 ವರ್ಷಗಳಿಂದ ರಾಜಕೀಯ ಬದ್ಧ ವೈರಿಗಳೆನಿಸಿಕೊಂಡಿರುವ ಶಾಸಕ ಬಿ.ಕೆ.ಸಂಗಮೇಶ್‌ ಮತ್ತು ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಒಂದೇ ವೇದಿಕೆ ಮೇಲೆ ಬಂದಿದ್ದಾರೆ. ಇವರಿಬ್ಬರು ಎಷ್ಟು ಮತ ಹಾಕಿಸುತ್ತಾರೆ ಎಂಬುದರ ಮೇಲೆ ಇಬ್ಬರ ಭವಿಷ್ಯ ನಿಂತಿದೆ. ಎರಡು ದಶಕದಿಂದ ಎರಡು ಪ್ರತ್ಯೇಕ ಹಳಿ ಮೇಲೆ ಸಾಗುತ್ತಾ ರಾಜಕೀಯ ಮಾಡುತ್ತಿರುವ ಈ ಇಬ್ಬರು ನಾಯಕರು ಬದಲಾದ ಸನ್ನಿವೇಶದಲ್ಲಿ ಹಳಿ ಬದಲಿಸಿದರೂ ಒಂದೇ ಹಳಿಯಲ್ಲಿ ಸಾಗಿದ ಉದಾಹರಣೆ ಇಲ್ಲ. ಆದರೆ, ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಕೂಟದ ಮುಖಂಡರು ಬದ್ಧ ವೈರಿಗಳನ್ನು ಒಂದುಗೂಡಿಸಲಾಗದಿದ್ದರೂ ಒಂದೇ ವೇದಿಕೆಗೆ ಕರೆತಂದಿದ್ದಾರೆ. ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಕಣಕ್ಕಿಳಿದಿರುವುದರಿಂದ ಅವರ ಪರವಾಗಿ ಈ ಇಬ್ಬರು ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಪ್ಪಾಜಿ ಅವರಿಗೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದ ಹೊಣೆಗಾರಿಕೆ ಇದ್ದರೆ, ಸಚಿವ ಸ್ಥಾನದ ಆಕಾಂಕ್ಷಿಯಾದ ಸಂಗಮೇಶ್‌ ಅವರಿಗೆ ವರಿಷ್ಠರ ಸೂಚನೆ ಯನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಶಿವಮೊಗ್ಗ ಜಿಲ್ಲೆಯ ಉಳಿದೆಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ರಾಜಕಾರಣ ನಡೆದರೆ, ಭದ್ರಾವತಿ ಕ್ಷೇತ್ರದಲ್ಲಿ ಮಾತ್ರ ಈ ಇಬ್ಬರದ್ದೇ ರಾಜಕಾರಣ. ಇಲ್ಲಿ ಪಕ್ಷ ಯಾವಾಗಲೂ ಗೌಣ. 1999ರಿಂದ 2018ರವರೆಗೂ ನಡೆದಿರುವ ಚುನಾವಣೆಗಳಲ್ಲಿ ಇವರಿಬ್ಬರೇ ಗೆದ್ದು ಬರುತ್ತಿರುವುದು ಇವರ ನಡುವೆ ಇರುವ ಪೈಪೋಟಿಗೆ ಸಾಕ್ಷಿ. ಅಚ್ಚರಿಯೆಂದರೆ ವಿಧಾನಸಭೆ, ಜಿಪಂ, ತಾಪಂ, ನಗರಸಭೆ ಚುನಾವಣೆಗಳೆಲ್ಲ ಇವರಿಬ್ಬರು ಮತ್ತು ಇವರ ಅನುಯಾಯಿಗಳ ನಡುವೆ ನಡೆದರೆ, ಲೋಕಸಭೆ
ಚುನಾವಣೆ ಒಳ ಹೊಂದಾಣಿಕೆ ಮೇಲೆ ನಡೆದು ಹೋಗುತ್ತಿದೆ. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಇವರಿಬ್ಬರು ಪ್ರತಿನಿಧಿಸುವ ಪಕ್ಷಗಳಿಗಿಂತ ಬಿಜೆಪಿಯೇ ಹೆಚ್ಚು ಮತಗಳನ್ನು ಪಡೆಯುತ್ತಾ ಬಂದಿದೆ. ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರೆ ಲೋಕಸಭೆಯಲ್ಲಿ ಮಾತ್ರ ಅತಿ ಹೆಚ್ಚು ಮತಗಳು ಬರುತ್ತಿವೆ. ಹೀಗಾಗಿಯೇ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಗೆ ಮತ
ಹೋಗದಂತೆ ತಡೆಯುವ ಜವಾಬ್ದಾರಿ ಹಾಗೂ ಅನಿವಾರ್ಯತೆ ಇವರಿಬ್ಬರ ಮೇಲಿದೆ.

ವೇದಿಕೆ ಹಂಚಿಕೊಳ್ಳದ ಮುಖಂಡರು
ಕಾರ್ಯಕರ್ತರಿಗೆ ನಾವು ಒಂದೇ ತಾಯಿ ಮಕ್ಕಳು ಎಂದು ಹೇಳುತ್ತಿರುವ ಶಾಸಕ ಬಿ.ಕೆ.ಸಂಗಮೇಶ್‌ ಹಾಗೂ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಗೌಡ ಈವರೆಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಮಧು ಬಂಗಾರಪ್ಪ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಶಿವಮೊಗ್ಗದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಬಿಟ್ಟರೆ ಭದ್ರಾವತಿಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಇಬ್ಬರು ಪ್ರತ್ಯೇಕವಾಗಿ ಸಭೆ ನಡೆಸುತ್ತಿದ್ದು, ಅವರು ಬರದಿದ್ದರೆ ನಾನೇನು ಮಾಡಲಿ. ಪಕ್ಷ ಹೇಳಿದಂತೆ ನನ್ನ ಕೆಲಸ ಮಾಡುತ್ತಿದ್ದೇನೆ ಎಂದು ಸಬೂಬು ನೀಡುತ್ತಿದ್ದಾರೆ. 

Advertisement

● ಶರತ್‌ ಭದ್ರಾವತಿ/ಕೆ.ಎಸ್‌. ಸುಧೀಂದ್ರ

Advertisement

Udayavani is now on Telegram. Click here to join our channel and stay updated with the latest news.

Next