ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಬಳಿಕ ಎರಡೂ ಪಕ್ಷಗಳು ದಯನೀಯ ಸ್ಥಿತಿ ತಲುಪಿವೆ. ಮೈತ್ರಿ ಹೋಗಿ “ವಿ ತ್ರಿ’ ಎಂಬಂತೆ ಎರಡು ಪಕ್ಷಗಳ ಜತೆಗೆ ಮೂರನೇ ಗುಂಪೊಂದು ಬೆಳೆಯುತ್ತಿದೆ. ಮೈತ್ರಿಯಿಂದಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಬಲಿಯಾಗುತ್ತಿದ್ದು, ಆ ಕಾರ್ಯಕರ್ತರ ಸ್ಥಿತಿಯ ಬಗ್ಗೆ ಬೇಸರವಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಗೋ. ಮಧುಸೂದನ್ ಹೇಳಿದರು.
ಏಳು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪರಮೇಶ್ವರ್ ಅವರನ್ನು ಕಾಂಗ್ರೆಸ್, ಜೆಡಿಎಸ್ ಸ್ಪರ್ಧೆಗೆ ಬಿದ್ದವರಂತೆ ಮೇಲೆ ಅವಮಾನ ಮಾಡುತ್ತಿವೆ ಎಂದವರು ಹೇಳಿದರು.
ಆರ್.ವಿ. ದೇಶಪಾಂಡೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮನೆಗೆ ಹೋಗಿ ಬಂದಿದ್ದಾರೆ. ಅವರೇನು ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಡಿ ಎಂದು ಕೇಳಿದರೋ ಅಥವಾ ಪುತ್ರನನ್ನೇ ಜೆಡಿಎಸ್‌ಗೆ ಸೇರಿಸಿಕೊಳ್ಳಿ ಎಂದು ಕೋರಿದರೋ ಗೊತ್ತಿಲ್ಲ. ಒಟ್ಟಾರೆ ಮೈತ್ರಿಯಿಂದ ಕಾಂಗ್ರೆಸ್ ನಾಯಕರು ದಯನೀಯ ಸ್ಥಿತಿಗೆ ತಲುಪಿದ್ದಾರೆ ಎಂದು ತಿಳಿಸಿದರು.
ಮೈತ್ರಿ ನಾಯಕರಿಗೆ ಹತಾಶೆ
ಮೈತ್ರಿ ಪಕ್ಷಗಳ ನಾಯಕರು ಹತಾಶರಾಗಿದ್ದಾರೆ. ಸಿದ್ದರಾಮಯ್ಯ ಅವರು ಮಂಡ್ಯ, ಹಾಸನದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡುವಾಗ “ಗೆಟ್ ಔಟ್’ ಎಂದು ಕೂಗಾಡಿದ್ದಾರೆ. ಇನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಧ್ಯಮದವರು, ಚಿತ್ರರಂಗ, ನಟರ ಕುರಿತೆಲ್ಲ ಕೂಗಾಡುತ್ತಿರುವುದು ಹತಾಶೆಯ ಪರಮಾವಧಿ. ಸುಮಲತಾ ಅವರು ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುವಾಗ ವ್ಯಕ್ತವಾದ ಜನಬೆಂಬಲ ಕಂಡು ಜೆಡಿಎಸ್‌ನ ಜಂಘಾಬಲವೇ ಕುಸಿದಿದೆ ಎಂದು ಹೇಳಿದರು.