ಶ್ರೀನಗರ: ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ (Jammu Kashmir) ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ (Mehbooba Mufti) ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಸೀಟು ಹಂಚಿಕೆಗಾಗಿ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಶ್ರೀನಗರದಲ್ಲಿ ಶನಿವಾರ (ಆ.24) ಪಿಡಿಪಿ ಪ್ರಣಾಳಿಕೆಯನ್ನು ಅವರು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆಯಲ್ಲಿ ಮೈತ್ರಿ ಆಗಿದೆಯೇ ಹೊರತು ಯಾವುದೇ ಅಜೆಂಡಾದಲ್ಲಿ ಅಲ್ಲ ಎಂದರು. ಆದರೆ ಕೇವಲ ಸೀಟು ಹಂಚಿಕೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾದರೆ ತನ್ನ ಪಕ್ಷವು ಯಾವುದೇ ಮೈತ್ರಿಗೆ ಸಿದ್ದವಿಲ್ಲ ಎಂದು ಮುಫ್ತಿ ಹೇಳಿದರು.
“ಮೈತ್ರಿ ಮತ್ತು ಸೀಟು ಹಂಚಿಕೆ ದೂರದ ವಿಷಯಗಳು. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ನಮ್ಮ ಅಜೆಂಡಾವನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿದ್ದರೆ, ಅವರು ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂದು ನಾವು ಹೇಳುತ್ತೇವೆ. ನಾವು ಅವರನ್ನು ಅನುಸರಿಸುತ್ತೇವೆ. ಏಕೆಂದರೆ ನನಗೆ ಕಾಶ್ಮೀರ ಸಮಸ್ಯೆಯನ್ನು ಪರಿಹರಿಸುವುದು ಮುಖ್ಯವಾಗಿದೆ. ನಾವು ಈ ಹಿಂದೆ ಮೈತ್ರಿ ಮಾಡಿಕೊಂಡಾಗ ನಮಗೆ ಒಂದು ಅಜೆಂಡಾ ಇತ್ತು, ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ, ನಮ್ಮ ಅಜೆಂಡಾವನ್ನು ಅವರು ಒಪ್ಪಿದ್ದರು” ಎಂದು ಮೆಹಬೂಬಾ ಮುಫ್ತಿ ಹೇಳಿದರು.
“ಆದರೆ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಒಂದೇ ಅಜೆಂಡಾದ ಕಾರಣದಿಂದ ಆಗಿಲ್ಲ. ಅದು ಸೀಟು ಹಂಚಿಕೆ ಕಾರಣದಿಂದ ನಡೆಯುತ್ತಿದೆ. ಕೇವಲ ಸೀಟು ಹಂಚಿಕೆ ಬಗ್ಗೆ ಮಾತನಾಡುವುದಾದರೆ ನಮಗೆ ಮೈತ್ರಿ ಬೇಕಿಲ್ಲ. ಜಮ್ಮು ಕಾಶ್ಮೀರದ ಸಮಸ್ಯೆಗಳನ್ನು ಪರಿಹಾರ ಮಾಡುವ ಅಜೆಂಡಾ ಹೊಂದಿರುವವರ ಜತೆ ಮಾತ್ರ ನಾವು ಮೈತ್ರಿ ಮಾಡುತ್ತೇವೆ” ಎಂದು ಅವರು ಹೇಳಿದರು.
90 ಕ್ಷೇತ್ರಗಳಿಗೆ ಜಮ್ಮು ಕಾಶ್ಮೀರ ವಿಧಾನಸಭೆಗೆ ಮೂರು ಹಂತದಲ್ಲಿ ಮತದಾನ ನಡೆಯಲಿದೆ. ಸೆ.18, ಸೆ.25 ಮತ್ತು ಅ.1ರಂದು ಮತದಾನ ನಡೆಯಲಿದೆ. ಮತ ಎಣಿಕೆಯು ಅ.4ರಂದು ನಡೆಯಲಿದೆ.