Advertisement
ಮೈತ್ರಿ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡರು ದಿಲ್ಲಿ ಮಟ್ಟದಲ್ಲಿ ನಡೆಸಿದ ಮಾತುಕತೆ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದ ಬಳಿಕ ಸಿ.ಎಂ ಇಬ್ರಾಹಿಂ ತೆರೆಗೆ ಸರಿದಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿಯವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದ ಸಭೆಗಳಿಗೂ ಹೋಗಿಲ್ಲ.
ಕಾಂಗ್ರೆಸ್‌ನಲ್ಲಿದ್ದಾಗ ಅಧಿಕಾರ-ಸ್ಥಾನಮಾನ ಎಲ್ಲವನ್ನೂ ಅನುಭವಿಸಿದರು. ಸಿದ್ದರಾಮಯ್ಯ ಸಹಿತ ಕಾಂಗ್ರೆಸ್‌ನ ಘಟಾನುಘಟಿಗಳಿಗೆ ಸಡ್ಡು ಹೊಡೆದು ಜೆಡಿಎಸ್ ಸೇರಿದ್ದ ಇಬ್ರಾಹಿಂ ಜೆಡಿಎಸ್-ಬಿಜೆಪಿ ಮೈತ್ರಿ ನಿರೀಕ್ಷೆ ಮಾಡಿರಲಿಲ್ಲ. ಈಗ ಮೈತ್ರಿ ಆಗಿರುವುದರಿಂದ ಅವರು ಆಘಾತಗೊಂಡಿದ್ದಾರೆ. ಮುಂದೇನು ಮಾಡಬೇಕೆಂಬ ಬಗ್ಗೆ ಗೊಂದಲದಲ್ಲಿದ್ದಾರೆ. ದೇವೇಗೌಡರನ್ನು ನಂಬಿ ಜೆಡಿಎಸ್‌ಗೆ ಹೋದರೆ, ಕೊನೆಗೆ ಅವರೇ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಬೇಸರ ಅವರಿಗಿದೆ. ಹಾಗಾಗಿ ಮೈತ್ರಿ ಬಳಿಕ ಜೆಡಿಎಸ್‌ನ ಅಲ್ಪಸಂಖ್ಯಾಕ ನಾಯಕರು ಕರೆದ ಸಭೆಗೂ ಅವರು ಬರಲಿಲ್ಲ, ನಮ್ಮನ್ನು ಭೇಟಿಯೂ ಮಾಡುತ್ತಿಲ್ಲ. ದಿನವಿಡೀ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾಕ ನಾಯಕರೊಬ್ಬರು “ಉದಯವಾಣಿ’ಗೆ ಹೇಳಿದ್ದಾರೆ.
Related Articles
ಇಬ್ರಾಹಿಂ ಅವರನ್ನು “ಘರ್‌ವಾಪಸಿ’ ಮಾಡಿಕೊಳ್ಳಲು ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಮುಂದಡಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸಚಿವ ಜಮೀರ್ ಅಹ್ಮದ್ ಅಲ್ಪಸಂಖ್ಯಾಕರ “ಏಕಮೇವಾದ್ವಿತೀಯ’ ನಾಯಕರಾಗಿದ್ದು, ಅವರು ಸಿಎಂ ಸಿದ್ದರಾಮಯ್ಯ ಕ್ಯಾಂಪ್‌ಗೆ ಸೇರಿದವರಾಗಿದ್ದಾರೆ. ಇಬ್ರಾಹಿಂ ಅವರನ್ನು ಕರೆತಂದರೆ ಕೌಂಟರ್ ಕೊಡಬಹುದು ಎಂಬ ಲೆಕ್ಕಾಚಾರ ಡಿ.ಕೆ. ಶಿವಕುಮಾರ್ ಅವರದ್ದು. ಆದರೆ ಆಪರೇಷನ್ ಇಬ್ರಾಹಿಂಗೆ ಸಿದ್ದರಾಮಯ್ಯ ಸುತಾರಾಂ ಒಪ್ಪುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
Advertisement
ಅಕ್ಟೋಬರ್ 16ಕ್ಕೆ ತೀರ್ಮಾನಈ ನಡುವೆ ಅಕ್ಟೋಬರ್ 16ಕ್ಕೆ ಇಬ್ರಾಹಿಂ ತಮ್ಮ ತೀರ್ಮಾನ ತಿಳಿಸಲಿದ್ದಾರೆ ಎಂದು ಅವರ ಆಪ್ತ ವಲಯ ಹೇಳುತ್ತಿದೆ. ಈ ಬಗ್ಗೆ ಸ್ವತಃ ಇಬ್ರಾಹಿಂ ಖುದ್ದು ಏನೂ ಹೇಳಿಲ್ಲ. ಅ.16ಕ್ಕೆ ಸಭೆ ಕರೆದಿದ್ದಾರೆ, ಅದರಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಕೆಲವು ಆಪ್ತರು ಹೇಳುತ್ತಿದ್ದಾರೆ. ಆದರೆ ಯಾರು ಸಭೆ ಕರೆಯುತ್ತಾರೆ ಮತ್ತು ಅಕ್ಟೋಬರ್ 16ರ ಗುಟ್ಟೇನು ಎಂದು ತಿಳಿದಿಲ್ಲ. ರವಿವಾರ ಸಭೆ
ಮೈತ್ರಿ ಹಾಗೂ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಮಾಜಿ ಸಿಎಂ ಕುಮಾರಸ್ವಾಮಿ ಅ.1ರಂದು ಬಿಡದಿಯ ತಮ್ಮ ತೋಟದ ಮನೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಜಿಲ್ಲಾ ಮಟ್ಟದ ಮುಖಂಡರು, ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳ ಸಭೆ ಕರೆದಿದ್ದಾರೆ. ಈ ಸಭೆಗೆ ಇಬ್ರಾಹಿಂ ಅವರನ್ನೂ ಆಹ್ವಾನಿಸಲಾಗುತ್ತದೆ. ಅವರಿಗೆ ಬೇಸರ ಇರಬಹುದು. ಆದರೆ “ದೊಡ್ಡವರು’ ಸರಿ ಮಾಡುತ್ತಾರೆ. ಕುಮಾರಸ್ವಾಮಿ ಮಾತನಾಡಿಸಿದರೆ ಎಲ್ಲವೂ ಸರಿ ಹೋಗುತ್ತದೆ. ಈ ಹಂತದಲ್ಲಿ ಸಾಹೇಬರು ಪಕ್ಷ ಬಿಡಲಿಕ್ಕಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಹೇಳಿದ್ದಾರೆ.