Advertisement

ಮಹಾಮೈತ್ರಿ ಶರಾಬು ಇದ್ದಂತೆ: ಮೋದಿ ವ್ಯಂಗ್ಯ

06:27 AM Mar 29, 2019 | mahesh |

ಹೊಸದಿಲ್ಲಿ: ಲೋಕಸಮರಕ್ಕೆ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರದಿಂದ ತಮ್ಮ ಪ್ರಚಾರದ ಭರಾಟೆಗೆ ಚಾಲನೆ ನೀಡಿದ್ದಾರೆ. ಗುರುವಾರ ಒಂದೇ ದಿನ ಉತ್ತರಾಖಂಡದ ರುದ್ರಾಪುರ, ಉತ್ತರಪ್ರದೇಶದ ಮೀರತ್‌ ಹಾಗೂ ಜಮ್ಮು-ಕಾಶ್ಮೀರದ ಜಮ್ಮುವಿನಲ್ಲಿ ಚುನಾವಣಾ ರ್ಯಾಲಿ ನಡೆಸಿ, ಕಾಂಗ್ರೆಸ್‌ ಸಹಿತ ವಿಪಕ್ಷಗಳ ವಿರುದ್ಧ ಗುಡುಗಿದ್ದಾರೆ. ಉತ್ತರಪ್ರದೇಶದಲ್ಲಿ ಎಸ್‌ಪಿ, ಆರ್‌ಎಲ್‌ಡಿ ಮತ್ತು ಬಿಎಸ್‌ಪಿ ಮೈತ್ರಿ ಬಗ್ಗೆ ವ್ಯಂಗ್ಯವಾಡಿದ ಅವರು, ಈ ಮೈತ್ರಿಕೂಟವನ್ನು “ಶರಾಬ್‌’ಗೆ ಹೋಲಿಸಿದ್ದಾರೆ.

Advertisement

ಎಸ್‌ಪಿಯಲ್ಲಿರುವ “ಸ’, ಆರ್‌ಎಲ್‌ಡಿಯಲ್ಲಿರುವ “ರಾ’ ಮತ್ತು ಬಿಎಸ್‌ಪಿಯಲ್ಲಿರುವ “ಬ್‌’ ಶಬ್ದವು “ಶರಾಬ್‌’ ಅನ್ನು ಪ್ರತಿನಿಧಿಸುತ್ತದೆ. ಶರಾಬು ಯಾವತ್ತೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೆಯೇ ಈ ಮೂರೂ ಪಕ್ಷಗಳು ರಾಜ್ಯಕ್ಕೆ ಮಾರಕ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

ಕ್ಷಮೆಗೆ ಆಗ್ರಹ: ಪ್ರಧಾನಿ ಮೋದಿ ಅವರ “ಶರಾಬ್‌’ ಹೇಳಿಕೆಗೆ ವಿಪಕ್ಷಗಳು ಕಿಡಿಕಾರಿವೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌, “ಪ್ರಧಾನಿ ಹೇಳಿಕೆ ನಾಚಿಕೆಗೇಡಿನದ್ದು. ನೀವು ವಿಪಕ್ಷಗಳನ್ನು ಶರಾಬಿಗೆ ಹೋಲಿಸುವ ಮೂಲಕ ಬಡವರಿಗೆ ಅವಮಾನ ಮಾಡಿದ್ದೀರಿ. ಇದಕ್ಕಾಗಿ ಕ್ಷಮೆ ಕೇಳಬೇಕು’ ಎಂದೂ ಆಗ್ರಹಿಸಿವೆ. ಇನ್ನೊಂದೆಡೆ, ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌, “ದ್ವೇಷವೆಂಬ ವಿಷವನ್ನು ಹಬ್ಬುತ್ತಿರುವ ಮೋದಿಯವರಿಗೆ “ಶರಾಬ್‌’ ಮತ್ತು “ಸರಾಬ್‌’ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಸರಾಬ್‌ ಎಂದರೆ ಮರೀಚಿಕೆ ಎಂದರ್ಥ. ಕಳೆದ 5 ವರ್ಷಗಳಿಂದ ಬಿಜೆಪಿಯು ದೇಶದ ಜನರಿಗೆ ತೋರಿಸಿಕೊಂಡು ಬಂದಿದ್ದು ಇದನ್ನೇ. ಈ ಬಾರಿ ಮತ್ತೆ ಜನರಿಗೆ ಪ್ರಧಾನಿ ಮೋದಿ ಸರಾಬ್‌ ಅನ್ನು ತೋರಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

ನ್ಯಾಯ್‌ ಯೋಜನೆ ಪ್ರಸ್ತಾವ: ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ಘೋಷಿಸಿದ ಕನಿಷ್ಠ ಆದಾಯ ಖಾತ್ರಿ ಯೋಜನೆ ನ್ಯಾಯ್‌ ಬಗ್ಗೆಯೂ ಮೋದಿ ಪ್ರಸ್ತಾವಿಸಿದ್ದಾರೆ. ದೇಶದ ಜನರಿಗಾಗಿ ಬ್ಯಾಂಕ್‌ ಖಾತೆಯನ್ನೇ ತೆರೆಯದವರು, ಈಗ ಬಡವರಿಗೆ ಹಣವನ್ನು ನೇರ ಖಾತೆಗೆ ವರ್ಗಾಯಿಸುವುದಾಗಿ ಹೇಳುತ್ತಾರೆ. ಅವರಿಂದ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಹಲವು ತಲೆಮಾರುಗಳಿಂದಲೂ ಗರೀಬಿ ಹಠಾವೋ ಎಂದು ಹೇಳುತ್ತಾ ಬಂದಿರುವ ಕಾಂಗ್ರೆಸ್‌ಗೆ, ಈ ಬಾರಿ ಘೋಷಿಸಲು ಯಾವುದೇ ಯೋಜನೆ ಸಿಗಲಿಲ್ಲ. ಅಲ್ಲದೆ, ದೇಶದಲ್ಲಿನ ಬಡತನಕ್ಕೆ ಅದೇ ಪಕ್ಷ ಕಾರಣ ಎಂದೂ ಮೋದಿ ವಾಗ್ಧಾಳಿ ನಡೆಸಿದ್ದಾರೆ.

ಶಾಯಿ ಬಗ್ಗೆ ತಪ್ಪು ಮಾಹಿತಿ ಇದ್ದ ಟ್ವೀಟ್‌ ಡಿಲೀಟ್‌ ಮತದಾನದ ವೇಳೆ ಬೆರಳಿಗೆ ಹಚ್ಚುವ ಶಾಯಿಯಲ್ಲಿ ಬಳಸಲಾಗುವ ಪದಾರ್ಥಗಳನ್ನು ಪ್ರಶ್ನಿಸುವ ಮತ್ತು ಈ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಸುವ ಟ್ವೀಟ್‌ ಒಂದನ್ನು ಚುನಾವಣಾ ಆಯೋಗದ ದೂರಿನ ಮೇರೆಗೆ ಅಳಿಸಲಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಳ್ಳುವಂತೆ ದಿಲ್ಲಿ ಪೊಲೀಸರಿಗೆ ಚುನಾವಣಾ ಆಯೋಗ ಸೂಚಿಸಿದೆ. ನಿರ್ದಿಷ್ಟ ಸಮುದಾಯವನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಮತ್ತು ದುರುದ್ದೇಶಪೂರಿತ ಟ್ವೀಟ್‌ ಇದಾಗಿತ್ತು. ಜನರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದಲೇ ಈ ಟ್ವೀಟ್‌ ಮಾಡಲಾಗಿತ್ತು ಎಂದು ದೂರಿನಲ್ಲಿ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಮಂಗಳವಾರವೇ ಟ್ವಿಟರ್‌ ಸಂಸ್ಥೆಗೆ ಆಯೋಗ ಸೂಚನೆ ನೀಡಿತ್ತು. ಈಗ ಈ ಟ್ವೀಟ್‌ ಅನ್ನು ಟ್ವಿಟರ್‌ ವೆಬ್‌ಸೈಟ್‌ನಿಂದ ಸಂಪೂರ್ಣವಾಗಿ ಅಳಿಸಿಹಾಕಲಾಗಿದೆ.

Advertisement

ತುಲಾಭಾರ ಒಲ್ಲೆ ಎಂದ ಪ್ರಿಯಾಂಕಾ
ತಮ್ಮನ್ನು ಲಡ್ಡುಗಳೊಂದಿಗೆ ತುಲಾಭಾರ ನಡೆಸಲು ಯೋಜಿಸಿದ್ದ ಸ್ಥಳೀಯ ನಾಯಕ ರೊಬ್ಬರ ಮನವಿಯನ್ನು ನಯವಾಗಿ ತಿರಸ್ಕರಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ತಮ್ಮ ಬದಲಿಗೆ ಆ ನಾಯಕರನ್ನೇ ತಕ್ಕಡಿಯಲ್ಲಿ ಕೂರಿಸಿದ ಘಟನೆ ಅಮೇಠಿಯಲ್ಲಿ ಜರು ಗಿದೆ. ಸ್ಥಳೀಯ ಕಾಂಗ್ರೆಸ್‌ ನಾಯಕರ ಜತೆಗೆ ದಿನವಿಡೀ ಸಭೆ ನಡೆಸಿದ ಅವರು, ರಾತ್ರಿ ವೇಳೆಗೆ ನಾಯಕ ಫ‌ತೇ ಬಹಾದ್ದೂರ್‌ ನಿವಾಸಕ್ಕೆ ಆಗಮಿಸಿದ್ದರು. ಅಲ್ಲಿ, ಅವರನ್ನು ಲಡ್ಡುಗಳ ಮೂಲಕ ತುಲಾಭಾರ ನಡೆಸಲು ಸಿದ್ಧತೆ ನಡೆದಿತ್ತು. ಇದನ್ನು ತಿರಸ್ಕರಿಸಿದ ಪ್ರಿಯಾಂಕಾ, ಬಹದ್ದೂರ್‌ರನ್ನೇ ಕೂರಿಸಿ ಲಡ್ಡುಗಳ ತುಲಾಭಾರ ನೆರವೇರಿಸಿದರು.

ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧೆ?
ರಾಯ್‌ಬರೇಲಿಯಲ್ಲಿ ನೀವೇ ಕಣಕ್ಕಿ ಳಿಯಿರಿ ಎಂದು ಪಕ್ಷದ ಕಾರ್ಯಕ ರ್ತರು ಮಾಡಿದ ಒತ್ತಾಯಕ್ಕೆ ಪ್ರಿಯಾಂಕಾ ನೀಡಿರುವ ಉತ್ತರವು ಅಚ್ಚರಿಗೆ ಕಾರಣವಾಗಿದೆ. ರಾಯ್‌ಬರೇಲಿ ಬಗ್ಗೆ ಕಾರ್ಯಕರ್ತರು ಪ್ರಸ್ತಾ ವಿಸಿದರೆ, ಪ್ರಿಯಾಂಕಾ, “ವಾರಾಣಸಿ ಯಿಂದ ಏಕೆ ಕಣಕ್ಕಿಳಿಯಬಾರದು’ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಸ್ಪರ್ಧಿಸುತ್ತಿರುವ ವಾರಾಣಸಿಯಲ್ಲಿ ಪ್ರಿಯಾಂಕಾ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಇನ್ನೂ ಈ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್‌ ಹಾಗೂ ವಿಪಕ್ಷಗಳು ಘೋಷಿಸಿಲ್ಲ.

ಸಿಪಿಎಂ ಪ‹ಣಾಳಿಕೆ: 18 ಸಾವಿರ ಕನಿಷ್ಠ ವೇತನ!
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಪಿಎಂ ತನ್ನ ಪ್ರಣಾಳಿಕೆ ಪ್ರಕಟಿಸಿದ್ದು, ಮಾಸಿಕ 18 ಸಾವಿರ ಕನಿಷ್ಠ ವೇತನ ಜಾರಿಗೊಳಿಸುವುದು, ಜನರ ಮೇಲೆ ಕಣ್ಗಾವಲಿಡಲು ನಿಷೇಧ, ಟೆಲಿಕಾಂ ಕ್ಷೇತ್ರದಲ್ಲಿ ಏಕಸ್ವಾಮ್ಯ ತಡೆಯುವುದು ಸೇರಿ ದಂತೆ ಹಲವು ಘೋಷಣೆಗಳನ್ನು ಮಾಡಿದೆ.
ತಮ್ಮ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡಲು ರೈತರಿಗೆ ವಿಶೇಷ ಹಕ್ಕು ಗಳನ್ನು ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಪ್ರತಿ ಕುಟುಂಬಕ್ಕೆ ಮಾಸಿಕ 35 ಕಿಲೋ ಧಾನ್ಯ, ಶ್ರೀಮಂತರಿಗೆ ತೆರಿಗೆ ಹೆಚ್ಚಳ, ಅನುವಂಶೀಯ ಸ್ವತ್ತಿನ ಮೇಲೆ ತೆರಿಗೆ ಸೇರಿ ಹಲವು ಕೊಡುಗೆಗಳು ಹಾಗೂ ನೀತಿಗಳ ಪ್ರಸ್ತಾವವಿದೆ. ಮೂರನೇ ಹಂತಕ್ಕೆ ಅಧಿಸೂಚನೆ: ಎ.23ರಂದು ನಡೆಯಲಿರುವ ಮೂರನೇ ಹಂತದ ಮತದಾನಕ್ಕಾಗಿ ಚುನಾವಣಾ ಆಯೋಗ ಗುರುವಾರ ಅಧಿಸೂಚನೆ ಹೊರಡಿಸಿದೆ. 14 ರಾಜ್ಯಗಳಲ್ಲಿರುವ 115 ಸ್ಥಾನಗಳಿಗೆ ಆ ದಿನ ಮತದಾನ ನಡೆಯಲಿದೆ.

ಸ್ಟಾರ್ಟ್‌ಅಪ್‌ಗ್ಳಿಗೆ ಅನುಮೋದನೆ ವಿನಾಯ್ತಿ
ಹೊಸದಿಲ್ಲಿ, ಮಾ. 28: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರಕ್ಕೆ ಬಂದರೆ, ಹೊಸ ಸ್ಟಾರ್ಟ್‌ ಅಪ್‌ ಕಂಪೆನಿಗಳಿಗೆ ಮೂರು ವರ್ಷಗಳವರೆಗೆ ಆಡಳಿತಾತ್ಮಕ ಅನುಮೋದನೆಗಳಿಂದ ವಿನಾಯ್ತಿ ನೀಡಲಾಗುತ್ತದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.

ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಆಶ್ವಾಸನೆ ನೀಡಿರುವ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸ್ಟಾರ್ಟ್‌ ಅಪ್‌ಗ್ಳ ಮೇಲೆ ಪ್ರಸ್ತುತ ವಿಧಿಸಲಾಗುತ್ತಿರುವ ಏಂಜೆಲ್‌ ತೆರಿಗೆಯನ್ನು ಮನ್ನಾ ಮಾಡಲಾಗುತ್ತದೆ ಹಾಗೂ ಸುಲಭದಲ್ಲಿ ಬ್ಯಾಂಕ್‌ ಸಾಲ ಸೌಲಭ್ಯ ಸಿಗುವಂಥ ನಿಯಮಗಳನ್ನು ರೂಪಿಸಲಾಗುತ್ತದೆ ಎಂದಿದ್ದಾರೆ. ಸದ್ಯದಲ್ಲೇ ಬಿಡುಗಡೆ ಮಾಡ ಲಾಗುವ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶಗಳನ್ನು ಸೇರ್ಪಡೆಗೊಳಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, “”ಕೇವಲ ನೀರವ್‌ ಮೋದಿಗೆ ಮಾತ್ರ ಏಕೆ ಸಾವಿರಾರು ಕೋಟಿ ರೂ. ಸಾಲ ಕೊಡ ಬೇಕು? ಅಂಥವರ ಬದಲು, ಸರಾಸರಿ 2,000 ಉದ್ಯೋಗಗಳನ್ನು ಸೃಷ್ಟಿಸಬಲ್ಲ ಸ್ಟಾರ್ಟ್‌ ಅಪ್‌ಗ್ಳಿಗೆ ಸಾಲ ನೀಡುವುದೇ ಉತ್ತಮ” ಎಂದು ಅಭಿಪ್ರಾಯಪಟ್ಟಿದ್ದಾರೆ.

170 ರೈತರು ಕಣಕ್ಕೆ; ಮತಪತ್ರ ಬಳಕೆ
ತೆಲಂಗಾಣದಲ್ಲಿ ಸಿಎಂ ಕೆ.ಚಂದ್ರಶೇಖರ ರಾವ್‌ರ ಪುತ್ರಿ ಕೆ.ಕವಿತಾ ಸ್ಪರ್ಧಿಸುತ್ತಿರುವ ನಿಜಾಮಾಬಾದ್‌ನಲ್ಲಿ ಮತದಾನಕ್ಕೆ ಈ ಬಾರಿ ಇವಿಎಂ ಬದಲು ಮತಪತ್ರಗಳನ್ನೇ ಬಳಸಲು ನಿರ್ಧರಿಸಲಾಗಿದೆ. ಏಕೆ ಗೊತ್ತೇ? ಈ ಕ್ಷೇತ್ರದಲ್ಲಿ ಕಣದಲ್ಲಿರುವುದು ಬರೋಬ್ಬರಿ 185 ಅಭ್ಯರ್ಥಿಗಳು! ಹೌದು ಈ ಕ್ಷೇತ್ರದಿಂದ 170 ರೈತರು ಸೇರಿದಂತೆ ಒಟ್ಟು 185 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅರಿಶಿಣ ಹಾಗೂ ಮೆಣಸು ಬೆಳೆಯುವ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕೆಸಿಆರ್‌ ಸರಕಾರ ಘೋಷಿಸಿಲ್ಲ ಎಂದು ಆರೋಪಿಸಿ ಪ್ರತಿಭಟನಾರ್ಥವಾಗಿ ರೈತರು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 443 ಅಭ್ಯರ್ಥಿಗಳು ಲೋಕಸಭೆ ಚುನಾವಣಾ ಕಣಕ್ಕಿಳಿದಿದ್ದಾರೆ. ಎಪ್ರಿಲ್‌ 11ರ ಮೊದಲ ಹಂತಕ್ಕೆ ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಈವರೆಗೆ ಒಟ್ಟು 60 ನಾಮಪತ್ರಗಳನ್ನು ಹಿಂಪಡೆಯಲಾಗಿದೆ. ರಾಜ್ಯದಲ್ಲಿ ಒಟ್ಟು 648 ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ 145 ನಾಮಪತ್ರ ತಿರಸ್ಕರಿಸಲಾಗಿದೆ.

ಪ್ರಿಯಾಂಕಾ ವಿರೋಧಿ ಪೋಸ್ಟರ್‌
ಅಮೇಠಿಯ ಬಳಿಕ ಈಗ ರಾಯ್‌ಬರೇಲಿಯಲ್ಲೂ ಪ್ರಿಯಾಂಕಾ ವಾದ್ರಾ ವಿರುದ್ಧದ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ. ಗುರುವಾರ ರಾಯ್‌ಬರೇಲಿಯ ಕಾಂಗ್ರೆಸ್‌ ಕಚೇರಿಯ ಸಮೀಪದಲ್ಲೇ ಇಂಥ ಪೋಸ್ಟರ್‌ಗಳು ಕಂಡುಬಂದಿವೆ. ಅದರಲ್ಲಿ ಸೋನಿಯಾ ಹಾಗೂ ಪ್ರಿಯಾಂಕಾರ ಚಿತ್ರಗಳಿವೆ. ಜತೆಗೆ, ಜನರು ಕಷ್ಟದಲ್ಲಿದ್ದಾಗ ಇತ್ತ ಕಡೆಗೆ ಸುಳಿಯದ ಅಮ್ಮ-ಮಗಳು, ಚುನಾವಣೆ ಬಂದಾಗ ದೇವಾಲಯಗಳಿಗೆ ಅಲೆದಾಡುತ್ತಾರೆ ಎಂದು ಬರೆಯಲಾಗಿದೆ.

ಮೋದಿ ಹತ್ಯೆ ಟ್ವೀಟ್‌: ವ್ಯಕ್ತಿ ಸೆರೆ
“ಪ್ರಧಾನಿ ಮೋದಿಯನ್ನು ಕೊಲ್ಲಲು ಗುತ್ತಿಗೆ ನೀಡುವವರಿದ್ದೀರಾ? ನನ್ನ ಬಳಿ ಒಳ್ಳೆ ಪ್ಲಾನ್‌ ಇದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಹರ್ಯಾಣದ ನವೀನ್‌ ಕುಮಾರ್‌ ಯಾದವ್‌(31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್‌ ಠಾಣೆಗೆ ದೂರು ಬರುತ್ತಲೇ, ಆ ವ್ಯಕ್ತಿಯನ್ನು ಬಂಧಿಸಿ, ದೇಶದ್ರೋಹದ ಕೇಸು ಜಡಿಯಲಾಗಿದೆ ಎಂದು ಅವರು ಹೇಳಿದ್ದಾರೆ.

ಲಾಲು ಕುಟುಂಬದಲ್ಲಿ ಕಲಹ?
ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಕುಟುಂಬದಲ್ಲಿ ಮತ್ತೆ ಕಲಹ ಎದ್ದಿರುವ ಸುಳಿವು ಸಿಕ್ಕಿದೆ. ಪಕ್ಷದ ವಿದ್ಯಾರ್ಥಿ ಘಟಕದ “ಸಂರಕ್ಷಕ್‌’ ಸ್ಥಾನದಿಂದ ಲಾಲು ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಏಕಾಏಕಿ ಕೆಳಗಿಳಿದಿದ್ದಾರೆ. ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನನ್ನು ಯಾರು ಬೇಜವಾಬ್ದಾರಿಯುತ ವ್ಯಕ್ತಿ ಎಂದು ಭಾವಿಸುತ್ತಾರೋ, ಅವರೇ ಬೇಜವಾ ಬ್ದಾರರು. ಯಾರ ಸಾಮರ್ಥ್ಯ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆ ಈ ಬೆಳವಣಿಗೆಯು ಆರ್‌ಜೆಡಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಎ. 6ರಂದು ಶತ್ರುಘ್ನ ಕಾಂಗ್ರೆಸ್‌ಗೆ: ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಗುರುವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ರನ್ನು ಭೇಟಿಯಾಗಿದ್ದು, ಎ. 6ರಂದು ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರುವುದಾಗಿ ಘೋಷಿಸಿದ್ದಾರೆ. ಬಳಿಕ ಟ್ವೀಟ್‌ ಮಾಡಿರುವ ಅವರು, “ನಾನು ಅತ್ಯಂತ ನೋವಿನಿಂದ ಬಿಜೆಪಿಗೆ ಗುಡ್‌ಬೈ ಹೇಳುತ್ತಿದ್ದೇನೆ’ ಎಂದಿದ್ದಾರೆ. ಸಿನ್ಹಾ ಬಿಹಾರದ ಪಾಟ್ನಾ ಸಾಹಿಬ್‌ನಿಂದ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಮೋದಿ ಪ್ರಚಾರದ ಝಲಕ್‌
ರುದ್ರಾಪುರ, ಉತ್ತರಾಖಂಡ
ಕಮಿಷನ್‌ ಆಸೆಯಿಂದ ಕಾಂಗ್ರೆಸ್‌ ಪಕ್ಷವು ರಕ್ಷಣಾ ಸಾಮಗ್ರಿಗಳ ಖರೀದಿ ವಿಳಂಬ ಮಾಡುತ್ತಾ ಬಂದಿತ್ತು.
ಕಿಕ್‌ಬ್ಯಾಕ್‌ ಮೇಲೆ ಕಣ್ಣಿಟ್ಟು ರಫೇಲ್‌ ಒಪ್ಪಂದವನ್ನು ಕೂಡ 10 ವರ್ಷ ವಿಳಂಬ ಮಾಡಲಾಯಿತು.
ಬಿಜೆಪಿಯು ಸಶಸ್ತ್ರಪಡೆಗಳ ಪರ ನಿಂತು, ಅವರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಒದಗಿಸಿದೆ.
ಕಾಂಗ್ರೆಸ್‌ ಹಲವು ತಲೆಮಾರುಗಳ ಹಿಂದೆಯೇ ಗರೀಬಿ ಹಠಾವೋ ಸ್ಲೋಗನ್‌ ಘೋಷಿಸಿದೆ.
ಈ ಚುನಾವಣೆಯಲ್ಲಿ ಅವರಿಗೆ ಘೋಷಿಸಲು ಹೊಸದೇನೂ ಸಿಕ್ಕಿಲ್ಲ.
ದೇಶದ ಬಡತನಕ್ಕೆ ಕಾಂಗ್ರೆಸ್‌ ಪಕ್ಷವೇ ಕಾರಣ.

ಮೀರತ್‌ – ಉತ್ತರಪ್ರದೇಶ
ಭೂಮಿ, ಆಕಾಶ ಮತ್ತು ಬಾಹ್ಯಾಕಾಶ… ಹೀಗೆ ಎಲ್ಲ ವಲಯಗಳಿಂದಲೂ ಸರ್ಜಿಕಲ್‌ ದಾಳಿ ನಡೆಸುವ ಧೈರ್ಯವನ್ನು ನಮ್ಮ ಸರಕಾರ ತೋರಿದೆ.
ಎನ್‌ಡಿಎಯನ್ನೇ ಮತ್ತೆ ಅಧಿಕಾರಕ್ಕೆ ತರಬೇಕೆಂದು
ದೇಶದ 130 ಕೋಟಿ ಜನರೂ ಬಯಸಿದ್ದಾರೆ.
ಈ ಚೌಕಿದಾರನ ಸರಕಾರವು ಎಲ್ಲರಿಗೂ
ನ್ಯಾಯ ಒದಗಿಸುತ್ತದೆ.
ಸದ್ಯದಲ್ಲೇ ನಾನು ನಮ್ಮ ಸರಕಾರ ಮಾಡಿರುವ
ಸಾಧನೆಗಳ ಪಟ್ಟಿಯನ್ನು ಮತ್ತು ವಿಪಕ್ಷಗಳ
ವೈಫ‌ಲ್ಯವನ್ನು ನಿಮ್ಮ ಮುಂದಿಡುತ್ತೇನೆ.
ಜನರಿಗಾಗಿ ಬ್ಯಾಂಕ್‌ ಖಾತೆಯನ್ನೇ ತೆರೆಯದವರು, ಈಗ ಬಡವರಿಗೆ ಹಣ ನೇರ ಖಾತೆಗೆ ವರ್ಗಾಯಿಸುವುದಾಗಿ ಹೇಳುತ್ತಾರೆ. ಅವರಿಂದ ಏನು ಮಾಡಲು ಸಾಧ್ಯ?

ಅಖೂ°ರ್‌- ಜಮ್ಮು ಮತ್ತು ಕಾಶ್ಮೀರ
ಮೋದಿ ವಿರೋಧಿಸುವ ಭರದಲ್ಲಿ ದೇಶದ ಹಿತಾಸಕ್ತಿಯನ್ನೇ ಕಾಂಗ್ರೆಸ್‌ ಮರೆತಿದೆ.
ಕಾಂಗ್ರೆಸ್‌ ನಾಯಕರ ಭಾಷಣಗಳಿಗೆ
ಪಾಕಿಸ್ಥಾನದಲ್ಲಿ ಕರತಾಡನ ಕೇಳಿಬರುತ್ತದೆ.
ಬಾರಾಮುಲ್ಲಾದ ಎನ್‌ಸಿ ಅಭ್ಯರ್ಥಿ ಅಕºರ್‌
ಲೋನ್‌ ಪಾಕ್‌ ಪರ ಘೋಷಣೆ ಕೂಗಿದರೂ ಕಾಂಗ್ರೆಸ್‌ ಪ್ರತಿಕ್ರಿಯಿಸಿಲ್ಲ.
ಪಿಡಿಪಿ ಮತ್ತು ಎನ್‌ಸಿ ಪಕ್ಷಗಳ ನೀತಿಗಳ ಬಗ್ಗೆ ಮತದಾರರೆಲ್ಲರೂ ನಿಗಾ ಇಡಬೇಕು.
ಭಾರತದಿಂದ ಈ ರಾಜ್ಯವನ್ನು ಬೇರ್ಪಡಿಸಲು ಯತ್ನಿಸುತ್ತಿರುವವರ ವಿರುದ್ಧ ನಾವು ಕ್ರಮ ಕೈಗೊಂಡಾಗ, ಅವರಿಗೆ ಇದೇ ಪಕ್ಷಗಳು
ಬೆಂಬಲ ಸೂಚಿಸಿದವು.

ಉಪಗ್ರಹ ನಿಗ್ರಹ ವ್ಯವಸ್ಥೆಯ ಯಶಸ್ಸನ್ನು ಪ್ರಧಾನಿ ಮೋದಿ ಘೋಷಿಸಿದ್ದರಲ್ಲಿ ಯಾವ ತಪ್ಪೂ ಇಲ್ಲ. ಇಂಥ ಸಿಹಿಸುದ್ದಿಯನ್ನು ಬೇರೆ ಯಾರು ಘೋಷಿಸಲು ಸಾಧ್ಯ? ಚುನಾವಣೆಗೆ ಇದನ್ನು ಲಿಂಕ್‌ ಮಾಡುವುದು ಬೇಡ.
ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

ನಮ್ಮ ಯೋಧರ ರಕ್ತಕ್ಕೆ ಪ್ರತೀಕಾರ ತೀರಿಸುವುದು ಬೇಡವೇ? ದೇಶದ ಗಡಿಯನ್ನು ರಕ್ಷಿಸಲು ಪ್ರಧಾನಿ ಮೋದಿ ಯವರಿಂದ ಮಾತ್ರವೇ ಸಾಧ್ಯ. ಇಂಥ ಕೆಲಸವನ್ನು ಕಾಂಗ್ರೆಸ್‌ ಅಥವಾ ರಾಹುಲ್‌ ಅವರಿಂದಾಗಲೀ ಮಾಡಲು ಸಾಧ್ಯವಿಲ್ಲ.
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next