Advertisement

ಮೈತ್ರಿ ಸರ್ಕಾರದ ಮೊದಲ ಪರೀಕ್ಷೆ

11:30 AM May 21, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಅಬ್ಬರ ಇಳಿಯುತ್ತಿದ್ದಂತೆ ರಾಜಧಾನಿಯ ಎರಡು ಕ್ಷೇತ್ರಗಳಲ್ಲಿ ಎಲೆಕ್ಷನ್‌ ಕಾವು ಈಗಷ್ಟೇ ಏರಲಾರಂಭಿಸಿದೆ. ಇದು ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ಹಾಗೂ ಬಿಜೆಪಿಗೆ ಮೊದಲ ಪರೀಕ್ಷೆ ಎಂದೇ ಬಿಂಬಿತವಾಗುತ್ತಿದೆ.

Advertisement

ಸಮ್ಮಿಶ್ರ ಸರ್ಕಾರ ರಚನೆಯಾದ ಕೂಡಲೇ ಮೊದಲಿಗೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ಹಾಗೂ ನಂತರ ಜಯನಗರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಇದು ಸಮ್ಮಿಶ್ರ ಸರ್ಕಾರಕ್ಕೆ ಮೊದಲ ಪರೀಕ್ಷೆ ಎನಿಸಿದ್ದು, ಇನ್ನೊಂದೆಡೆ ಅತಿ ಹೆಚ್ಚು ಸ್ಥಾನ ಪಡೆದರೂ ಸರ್ಕಾರ ರಚಿಸಲು ಸಾಧ್ಯವಾಗದ ಬಿಜೆಪಿಗೆ ಸಂಖ್ಯಾಬಲ ವೃದ್ಧಿ ದೃಷ್ಟಿಯಿಂದ ಈ ಚುನಾವಣೆ ಮಹತ್ವದ್ದೆನಿಸಿದೆ. ಹಾಗಾಗಿ ರಾಜ್ಯದೆಲ್ಲೆಡೆ ಚುನಾವಣಾ ಗದ್ದಲದ ಸದ್ದು ಅಡಗುತ್ತಿದ್ದರೆ, ಈ ಎರಡು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಅಬ್ಬರಕ್ಕೇರುತ್ತದೆ.

ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ 10,000ಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿ ಪತ್ತೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಸಾಕಷ್ಟು ಆರೋಪ- ಪ್ರತ್ಯಾರೋಪ ಕೇಳಿಬಂದಿತ್ತು. ಅಂತಿಮವಾಗಿ ಚುನಾವಣಾ ಆಯೋಗವು ಮತದಾನ ನಿಗದಿಯಾಗಿದ್ದ ಮೇ 12ರ ಹಿಂದಿನ ದಿನ ರಾಜರಾಜೇಶ್ವರಿನಗರ ಕ್ಷೇತ್ರದ ಮತದಾನವನ್ನು ಮೇ 28ಕ್ಕೆ ಮುಂದೂಡಿ ಅಧಿಸೂಚನೆ ಹೊರಡಿಸಿತ್ತು.

ನಗರದ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವ ಕ್ಷೇತ್ರಗಳಲ್ಲಿ ಒಂದಾದ ರಾಜರಾಜೇಶ್ವರಿನಗರದಲ್ಲಿ ಶಾಸಕರಾಗಿದ್ದ ಕಾಂಗ್ರೆಸ್‌ನ ಮುನಿರತ್ನ, ಜೆಡಿಎಸ್‌ನ ರಾಮಚಂದ್ರ ಹಾಗೂ ಬಿಜೆಪಿಯ ತುಳಸಿ ಮುನಿರಾಜುಗೌಡ ಕಣದಲ್ಲಿದ್ದಾರೆ. ಮೂವರು ಅಭ್ಯರ್ಥಿಗಳು ಗೆಲುವಿಗೆ ತೀವ್ರ ಕಸರತ್ತು ನಡೆಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್‌- ಜೆಡಿಎಸ್‌ ಮತದಾನೋತ್ತರ ಮೈತ್ರಿಯಿಂದಾಗಿ ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಚರ್ಚೆ ಶುರುವಾಗಿದೆ. ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಬಿಜೆಪಿ, ತನ್ನ ಅಭ್ಯರ್ಥಿ ಗೆಲುವಿನ ಹೊಣೆಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಹೆಗಲಿಗಿರಿಸಿದೆ.

ಹೊಂದಾಣಿಕೆ ನಿರ್ಧಾರವಿಲ್ಲ?: ಒಂದೆಡೆ ಮೈತ್ರಿ ಸರ್ಕಾರ ರಚನೆಗೆ ಸಿದ್ಧತೆ ಚುರುಕುಗೊಂಡಿದ್ದರೆ, ಅತ್ತ ರಾಜರಾಜೇಶ್ವರಿನಗರದಲ್ಲಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ಕಾರ್ಯವನ್ನು ಬಿರುಸುಗೊಳಿಸಿದ್ದಾರೆ. ಭರ್ಜರಿ ಪ್ರಚಾರ, ಮನೆ ಮನೆ ಭೇಟಿ ಮೂಲಕ ಮತ ಯಾಚಿಸುತ್ತಿದ್ದಾರೆ. ಸರ್ಕಾರ ರಚನೆಗೆ ಮೈತ್ರಿಯಾಗಿದ್ದರೂ ಈ ಕ್ಷೇತ್ರಗಳಲ್ಲಿ ಹೊಂದಾಣಿಕೆ ರಾಜಕೀಯ ನಡೆಸಬೇಕೆ ಅಥವಾ ಸ್ಪಧಾತ್ಮಕವಾಗಿಯೇ ಚುನಾವಣೆ ಎದುರಿಸಬೇಕೆ ಎಂಬ ಬಗ್ಗೆ ನಾಯಕರ ಮಟ್ಟದಲ್ಲಿ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಂತಿಲ್ಲ.

Advertisement

ಆಯೋಗದಿಂದಲೇ ಎಪಿಕ್‌ ವಿತರಣೆ: ಚುನಾವಣಾ ಆಯೋಗ ವಿತರಿಸಬೇಕಿದ್ದ ಅಧಿಕೃತ ಮತದಾರರ ಗುರುತಿನ ಚೀಟಿಯೇ ಖಾಸಗಿ ಕಟ್ಟಡದಲ್ಲಿ ಪತ್ತೆಯಾಗಿದ್ದು, ಚುನಾವಣೆ ಮುಂದೂಡಿಕೆಗೆ ಪ್ರಮುಖ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ಆಯೋಗವು ಜಪ್ತಿ ಮಾಡಿದ ಗುರುತಿನ ಚೀಟಿಗಳನ್ನು ಮತದಾರರ ಪಟ್ಟಿಯೊಂದಿಗೆ ಪರಿಶೀಲಿಸಿ ಅರ್ಹ ಮತದಾರರಿಗೆ ಆಯೋಗದ ವತಿಯಿಂದಲೇ ವಿತರಿಸಲಾಗುತ್ತಿದೆ. ಇದಕ್ಕೆಂದೇ ಅಧಿಕಾರಿ, ನೌಕರರಿಗೆ ಜವಾಬ್ದಾರಿ ವಹಿಸಿರುವ ಆಯೋಗವು, ಮತದಾರರಿಗೆ ಗುರುತಿನ ಚೀಟಿ ವಿತರಿಸಿದ ಬಳಿಕ ಹಿಂಬರಹ ಪಡೆಯುವಂತೆಯೂ ಸೂಚಿಸಿದೆ. ಮತದಾರರ ಗುರುತಿನ ಚೀಟಿ ವಿತರಣೆಯಲ್ಲಿ ಯಾವುದೇ ಗೊಂದಲವಿಲ್ಲದಂತೆ ಎಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂ.11ರಂದು ಜಯನಗರ ಕ್ಷೇತ್ರದ ಮತದಾನ: ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿ ಬಿ.ಎನ್‌.ವಿಜಯಕುಮಾರ್‌ ನಿಧನದ ಹಿನ್ನೆಲೆಯಲ್ಲಿ ರದ್ದಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಜೂ.11ರಂದು ನಿಗದಿಯಾಗಿದೆ. ಕಮಲದ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಭಾರಿ ತಯಾರಿ ನಡೆಸಿರುವ ಬಿಜೆಪಿ, ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ. ಜತೆಗೆ ಆ ಕ್ಷೇತ್ರದ ಗೆಲುವಿನ ಹೊಣೆಯನ್ನು ಪ್ರಭಾವಿ ಕೇಂದ್ರ ಸಚಿವರಾದ ಅನಂತಕುಮಾರ್‌ ಅವರಿಗೆ ವಹಿಸಿದೆ.

ಇನ್ನೊಂದೆಡೆ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಜಯನಗರ ಕ್ಷೇತ್ರದಿಂದಲೇ ರಾಜಕೀಯ ರಂಗ ಪ್ರವೇಶಕ್ಕೆ ಸಜ್ಜಾಗಿದ್ದು, ನಾಮಪತ್ರ ಕೂಡ ಸಲ್ಲಿಸಿದ್ದರು. ಅವರೇ ಅಭ್ಯರ್ಥಿಯಾಗಿ ಮುಂದುವರಿಯಲಿದ್ದು, ಕಾಂಗ್ರೆಸ್‌ನ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ತೆರೆಮರೆಯಲ್ಲೇ ಕಸರತ್ತು ನಡೆಸುತ್ತಿದೆ. ಜೆಡಿಎಸ್‌ನಿಂದ ಕಾಳೇಗೌಡ ಸ್ಪರ್ಧಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‌ ಯಾವ ನಿಲುವು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ಬಾರಿ ಫ‌ಲಿತಾಂಶ ವಿವರ
ರಾಜರಾಜೇಶ್ವರಿನಗರ

-ಮುನಿರತ್ನ (ಕಾಂಗ್ರೆಸ್‌)- 71,064
-ಕೆ.ಎಲ್‌.ತಿಮ್ಮನಂಜಯ್ಯ (ಜೆಡಿಎಸ್‌)- 52,251
-ಎಂ.ಶ್ರೀನಿವಾಸ್‌ (ಬಿಜೆಪಿ)- 50,726

ಜಯನಗರ
-ಬಿ.ಎನ್‌.ವಿಜಯಕುಮಾರ್‌ (ಬಿಜೆಪಿ)- 43,990
-ಎಂ.ಸಿ.ವೇಣುಗೋಪಾಲ್‌ (ಕಾಂಗ್ರೆಸ್‌)- 31,678
-ಕೆ.ಎಸ್‌.ಸಮೀವುಲ್ಲಾ- 12,097

Advertisement

Udayavani is now on Telegram. Click here to join our channel and stay updated with the latest news.

Next