Advertisement

ಮೈತ್ರಿ ಸರ್ಕಾರ ಪತನ; ಬಿಜೆಪಿ ಭವಿಷ್ಯ

12:58 AM May 26, 2019 | Lakshmi GovindaRaj |

ಬೆಂಗಳೂರು: ಬಿಜೆಪಿ ಸಂಸದರು, ನಾಯಕರು, ಮಾಜಿ ಸಚಿವರು ಶನಿವಾರವೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಡಾಲರ್ ಕಾಲೋನಿ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದರು.

Advertisement

ಸಂಸದರಾದ ಬಿ.ವೈ.ರಾಘವೇಂದ್ರ, ಶೋಭಾ ಕರಂದ್ಲಾಜೆ, ಜಿ.ಎಂ.ಸಿದ್ದೇಶ್ವರ್‌, ಮಾಜಿ ಸಚಿವರಾದ ಮುರುಗೇಶ್‌ ನಿರಾಣಿ, ಗೋವಿಂದ ಕಾರಜೋಳ, ಎಂ.ಪಿ.ರೇಣುಕಾಚಾರ್ಯ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಇತರರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕೆಲ ಸಂಸದರು ಸಚಿವ ಸ್ಥಾನದ ಆಕಾಂಕ್ಷೆಯನ್ನು ಹಂಚಿಕೊಂಡರೆ, ಇನ್ನೂ ಕೆಲವರು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದು ಸದ್ಯದಲ್ಲೇ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಎಂ.ಸಿದ್ದೇಶ್ವರ್‌, “ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾನು ಪಕ್ಷದ ಒಳಿತಿಗೆ ದುಡಿಯುವ ವ್ಯಕ್ತಿ. ಸಚಿವ ಸ್ಥಾನ ಬೇಕು ಎಂದು ಕೇಳುವುದಿಲ್ಲ. ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ. ರಾಜ್ಯಕ್ಕೆ ಎಷ್ಟು ಕೇಂದ್ರ ಸಚಿವ ಸ್ಥಾನ ದಕ್ಕಲಿದೆ ಎಂಬುದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ. 25 ಸಂಸದರಿಗೂ ಸಚಿವ ಸ್ಥಾನ ಸಿಕ್ಕರೆ ಸಂತೋಷ’ ಎಂದರು.

ರೇಣುಕಾಚಾರ್ಯ ಮಾತನಾಡಿ, “ನಾವು “ಆಪರೇಷನ್‌ ಕಮಲ’ ನಡೆಸುವುದಿಲ್ಲ. ಆದರೆ, ನೂರಕ್ಕೆ ನೂರು ಮೈತ್ರಿ ಸರ್ಕಾರ ಪತನವಾಗಲಿದೆ. ಎಚ್‌.ಡಿ.ರೇವಣ್ಣನವರ ನಿಂಬೆಹಣ್ಣು ಕೊಳೆತು ಹೋಗಿದೆ. ರೇವಣ್ಣನವರ ಆ ನಿಂಬೆಹಣ್ಣಿಗೆ ದೇವೇಗೌಡರು ಬಲಿಯಾಗಿ ಸೋತಿದ್ದಾರೆ. ಸಿದ್ದರಾಮಯ್ಯಗೆ ಸ್ವಾಭಿಮಾನವಿದ್ದರೆ ಜೆಡಿಎಸ್‌ಗೆ ನೀಡಿರುವ ಬೆಂಬಲ ಹಿಂಪಡೆಯಲಿ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಲಿ’ ಎಂದು ಆಗ್ರಹಿಸಿದರು.

“ಯಡಿಯೂರಪ್ಪ ಅವರು ದೇವಭಕ್ತರು. ರಾಜ್ಯಕ್ಕೆ ಒಳಿತಾಗಲಿ ಎಂಬ ಉದ್ದೇಶದಿಂದ ಹೋಮ, ಹವನ ಮಾಡಿಸಿದ್ದರು. ಬಿಜೆಪಿಗೆ ರಾಜ್ಯದಲ್ಲಿ 25 ಸ್ಥಾನ ದೊರಕಿದೆ. ಆದರೆ, ಜೆಡಿಎಸ್‌ನವರು, ದೇವೇಗೌಡರ ಕುಟುಂಬದವರು ಜ್ಯೋತಿಷಿಗಳು, ಮಾಟ ಮಂತ್ರದ ಬೆನ್ನು ಹತ್ತಿದ್ದರಿಂದ ಹೀಗಾಯಿತು. ರೇವಣ್ಣ, ಭವಾನಿ ರೇವಣ್ಣ ಅವರು ನಿಂಬೆ ಹಣ್ಣು ಮಂತ್ರ ಮಾಡಿಸಿ ದೇವೇಗೌಡರನ್ನೇ ಬಲಿ ತೆಗೆದುಕೊಂಡರು. ಕುಮಾರಸ್ವಾಮಿಯವರಿಗೆ ನೈತಿಕತೆ ಇದ್ದರೆ ಜನಾದೇಶ ಗೌರವಿಸಿ ರಾಜೀನಾಮೆ ನೀಡಲಿ’ ಎಂದು ಹೇಳಿದರು.

Advertisement

ಮರ್ಯಾದೆ ಇದ್ದರೆ ರಾಜೀನಾಮೆ ನೀಡಲಿ: ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ, ಗೌರವವಿದ್ದರೆ ರಾಜೀನಾಮೆ ನೀಡಲಿ. ಕುಮಾರಸ್ವಾಮಿಯವರಿಗೆ ಕಿಂಚಿತ್ತಾದರೂ ಮರ್ಯಾದೆ ಇದ್ದರೆ ರಾಜೀನಾಮೆ ನೀಡಬೇಕು. ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಹೇಳಿದರು.

ರಾಜ್ಯ ವಿಧಾನಸಭೆಗೆ ಈ ಕ್ಷಣ ಚುನಾವಣೆ ನಡೆದರೆ ಬಿಜೆಪಿ 177 ಸ್ಥಾನ ಗೆಲ್ಲುತ್ತದೆ. ಲೋಕಸಭೆ ಚುನಾವಣೆಯಲ್ಲಿ 177 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್‌ ಬಂದಿದೆ. ಕಾಂಗ್ರೆಸ್‌- ಜೆಡಿಎಸ್‌ ಮುಳುಗಿದ ಹಡಗು. ವರ್ಷದ ಹಿಂದೆ ಮೈತ್ರಿ ಹಡಗಿಗೆ ರಮೇಶ್‌ ಜಾರಕಿಹೊಳಿಯಿಂದ ತೂತು ಬಿತ್ತು. ಇದೀಗ ಮೈತ್ರಿ ಹಡಗು ಪೂರ್ತಿ ಮುಳುಗಿದೆ. ಈಗ ಕಾಂಗ್ರೆಸ್‌ ಒಣಗಿದ ಮರ. ಅಲ್ಲಿ ನೆರಳು ಅರಸಿ ಯಾರೂ ಹೋಗುವುದಿಲ್ಲ. ಕಾಂಗ್ರೆಸ್‌ ಶಾಸಕರು ಒಣಗಿದ ಎಲೆಗಳಂತೆ ಉದುರುತ್ತಿದ್ದಾರೆ ಎಂದರು.

ರಾಹುಲ್‌ ಗಾಂಧಿ ಬಫ‌ೂನ್‌ನಂತೆ ದೇಶವೆಲ್ಲಾ ಸುತ್ತಿದರೂ ಸೋಲಾಯಿತು. ಚುನಾವಣೆ ಸಮಯದಲ್ಲಿ ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿಯವರು ಮೋದಿಯನ್ನು ಟೀಕಿಸಿದರು. ಕಳ್ಳರು, ಸುಳ್ಳರು, ಜೈಲಿಗೆ ಹೋಗಿ ಬಂದವರೆಂದು ತೆಗಳಿದರು. ಇನ್ನಾದರೂ ಯಡಿಯೂರಪ್ಪಗೆ ಗೌರವ ನೀಡಿ ಮಾತನಾಡಲಿ. ಮೈತ್ರಿ ನಾಯಕರ ಪುಟಗೋಸಿಯನ್ನು ರಾಜ್ಯದ ಜನ ಹರಿದು ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು.

ಮೋದಿಯವರು ಮತ್ತೂಮ್ಮೆ ಪ್ರಧಾನಿಯಾದರೆ ರಾಜೀನಾಮೆ ನೀಡುವುದಾಗಿ ಸಚಿವ ರೇವಣ್ಣ ಈ ಹಿಂದೆ ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅಶೋಕ್‌, ನಿಂಬೆಹಣ್ಣು ಇಟ್ಟು ಸಮಯ ನೋಡಿ ರಾಜೀನಾಮೆ ನೀಡಲಿ. ದೇವೇಗೌಡರು ಸೋತರೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಸಚಿವ ಗುಬ್ಬಿ ಶ್ರೀನಿವಾಸ್‌, ತಮ್ಮ ಮಾತಿನಂತೆ ನಡೆದುಕೊಳ್ಳುವರೆ? ಸಿದ್ದರಾಮಯ್ಯ ಅವರು ಯಾರಿಗಾದರೂ, ಏನಾದರೊಂದು ಹೇಳಿದರೆ ಅದರ ವಿರುದ್ಧ ಫ‌ಲಿತಾಂಶ ಬರಲಿದೆ. ಅದರಂತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲ್ಲ ಎಂದು ಜಪ ಮಾಡುತ್ತಿರಲಿ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next