ಹುಬ್ಬಳ್ಳಿ: ರಾಜ್ಯದ ಮೈತ್ರಿ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಪತನಗೊಳ್ಳಬಹುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿನ ಬಿಜೆಪಿಯ ಅಭೂತಪೂರ್ವ ಗೆಲುವು ಮೈತ್ರಿ ಸರ್ಕಾರದ ಮೇಲೆ ಪರಿಣಾಮ ಬೀರಿದೆ.
ಹೀಗಾಗಿ, ಯಾವುದೇ ಕ್ಷಣದಲ್ಲಾದರೂ ಮೈತ್ರಿ ಸರ್ಕಾರ ಬೀಳಬಹುದು. ಈಗಷ್ಟೇ ಆ ಪರಿಣಾಮ ಆರಂಭವಾಗಿದೆ. ಹೀಗಾಗಿ, ನಾವು ಕಾದು ನೋಡುತ್ತಿದ್ದೇವೆ. ಕಾಂಗ್ರೆಸ್‌ನಿಂದ ಬಹಳಷ್ಟು ಶಾಸಕರು ಬಿಜೆಪಿಗೆ ಬರುತ್ತಾರೆ. ಈಗಾಗಲೇ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ತಂಡ ಆ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದೆ.
ದೇವೇಗೌಡರ ಕುಟುಂಬ ರಾಜಕಾರಣದಿಂದ ಜೆಡಿಎಸ್‌ನವರು ಬೇಸತ್ತಿದ್ದಾರೆ. ಹೀಗಾಗಿ, ಆ ಪಕ್ಷದಿಂದಲೂ ಕೆಲ ಶಾಸಕರು ಬರಬಹುದು. ಚಿಂಚೋಳಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಡಾ| ಅವಿನಾಶ ಜಾಧವ ನಡೆ ಹಲವರಿಗೆ ಪ್ರೇರೇಪಣೆ ಆಗಿರುವುದರಲ್ಲಿ ಸಂದೇಹವಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತರು ಬಿಜೆಪಿ ಕಡೆ ವಾಲುವುದರಲ್ಲಿ ಸಂಶಯವಿಲ್ಲ ಎಂದರು.
ಧಾರವಾಡ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಪ್ರಹ್ಲಾದ ಜೋಶಿಗೆ ಮಂತ್ರಿ ಸ್ಥಾನ ಸಿಗಬೇಕು. ಜೊತೆಗೆ ಕರ್ನಾಟಕದ ಕನಿಷ್ಠ 4-5 ಸಂಸದರಿಗೆ ಮಂತ್ರಿ ಸ್ಥಾನ ನೀಡಬೇಕೆಂಬುದು ನಮ್ಮ ಆಶಯ. ಆ ಕುರಿತು ಪಕ್ಷದ ವರಿಷ್ಠರನ್ನು ಒತ್ತಾಯಿಸುತ್ತೇವೆ.
-ಜಗದೀಶ ಶೆಟ್ಟರ್, ಮಾಜಿ ಸಿಎಂ