Advertisement

ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಲ್ಲ: ಜೆಡಿಎಸ್

01:08 PM Mar 31, 2019 | Team Udayavani |

ಕೋಲಾರ: ವರ್ತೂರು ಪರ ನಿಂತು ಜೆಡಿಎಸ್‌ ವಿರುದ್ಧ ಕೆಲಸ ಮಾಡಿ, 10 ವರ್ಷ ತಾಲೂಕಿನಲ್ಲಿ ಕಾರ್ಯಕರ್ತರು ಅನುಭವಿಸಿದ ಹಿಂಸೆಗೆ ಕಾರಣರಾದ ಕೆ.ಎಚ್‌.ಮುನಿಯಪ್ಪರನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ನಡೆಯಿತು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರೆದಿದ್ದ ಸಭೆಯಲ್ಲಿ, ಮಾತನಾಡಿದ ಕೆಲ ಮುಖಂಡರು, ಕಾರ್ಯಕರ್ತರು ಕೆ.ಎಚ್‌.ಮುನಿಯಪ್ಪ ಪರ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಎದುರಾಳಿ ಪರ ಕೆಲಸ ಮಾಡಲ್ಲ: ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮೈತ್ರಿ ಧರ್ಮಪಾಲನೆಯಿದೆ. ಆದರೆ, ಜಿಲ್ಲೆಯ ಎರಡೂ ಪಕ್ಷಗಳ ಹಿರಿಯ ಮುಖಂಡರೇ ಭಿನ್ನಾಭಿಪ್ರಾಯಗಳನ್ನು ಮರೆತು ಹೊಂದಾಣಿಕೆ ಮಾಡಿಕೊಂಡಿದ್ದರೂ, ಮೊದಲಿನಿಂದಲೂ ನಮಗೆ ಎದುರಾಳಿಯಾಗಿರುವ ಕಾಂಗ್ರೆಸ್‌ ಪರ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಮುಖಂಡರು ಆಕ್ರೋಶ ಹೊರಹಾಕಿದರು.

ಈ ಹಿಂದಿನ ಚುನಾವಣೆಗಳಲ್ಲಿ ನೇರ ಹಣಾಹಣಿ ನಮ್ಮಿಬ್ಬರಿಗೆ ಇತ್ತು. ಈಗಲೂ ಹಳ್ಳಿಗಳಲ್ಲಿ ಅದೇ ಪರಿಸ್ಥಿತಿ ಮುಂದುವರಿದಿರುವುದರಿಂದ ಕೆಎಚ್‌ಎಂ ಪರ ಕೆಲಸ ಮಾಡಲು ಆಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕರ್ತರ ಕಡೆಗಣನೆ: ಮೈತ್ರಿ ಧರ್ಮ ಪಾಲನೆಯಲ್ಲಿದ್ದು, ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ವರಿಷ್ಠರು ಒಪ್ಪಿಕೊಂಡಿದ್ದಾರೆ. ಇದು ಮೈತ್ರಿ ಅಭ್ಯರ್ಥಿ ಘೋಷಣೆಗೆ ಮುನ್ನವೇ ಮಾಡಿಕೊಂಡಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್‌ ಕಾರ್ಯಕರ್ತರನ್ನು ಕರೆಯಲಾಗಿತ್ತು. ನಮ್ಮ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಭಾಗವಹಿಸಿದ್ದರೂ ನಮಗೆ ಆಹ್ವಾನವಿರಲಿಲ್ಲವೇಕೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಹಿಂಸೆ ನೀಡಿದವರ ಪರ ಕೆಲಸ ಮಾಡಲ್ಲ: ಮೈತ್ರಿ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಅವರನ್ನು ಈಗಾಗಲೇ ಅವರ ಪಕ್ಷದ ಕೆಲವರೇ ಕೆಟ್ಟು ಹೋಗಿರುವ ಕಳ್ಳೆಕಾಯಿಯನ್ನು ಬಿಸಾಡಿದಂತೆ ಕಡೆಗಣಿಸಿದ್ದಾರೆ. ಇನ್ನು ಶಾಸಕರು ತಮ್ಮನ್ನು ಬಿಟ್ಟು ಅವರದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಇತ್ತ ವರ್ತೂರ್‌ ಪ್ರಕಾಶ್‌ ಕೆಎಚ್‌ಎಂಗೆ ಬೆಂಬಲ ನೀಡಲು ಮುಂದಾಗಿದ್ದು, 10 ವರ್ಷ ನಮಗೆ ಕ್ಷೇತ್ರದಲ್ಲಿ ಹಿಂಸೆ ನೀಡಿರುವುದನ್ನು ಮರೆತು, ಅವರ ಪರ ಕೆಲಸ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಜೊತೆಯಲ್ಲಿ ಕರೆದೊಯ್ಯಲಿ: ಹೀಗಾಗಿ ಸದ್ಯದಲ್ಲೇ ಮುಖಂಡರು ಕಾರ್ಯಕರ್ತರ ಸಭೆಯನ್ನು ನಡೆಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು. ಕೆ.ಎಚ್‌.ಮುನಿಯಪ್ಪ ಅವರೂ ನಮಗೆ ಸ್ಪಷ್ಟ ಭರವಸೆಗಳನ್ನು ನೀಡಿ, ಜತೆಯಲ್ಲಿ ಕರೆದೊಯ್ಯುವುದಾದರೆ ಕೆಲಸ ಮಾಡಲು ಒಂದಿಷ್ಟು ಸಾಧ್ಯವಾಗುತ್ತದೆ. ಇಲ್ಲವೇ ಬೇರೆ ದಾರಿ ನೋಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯ ಸಂದೇಶ ರವಾನಿಸಿದರು.

ಜೆಡಿಎಸ್‌ ಮುಖಂಡ ವಕ್ಕಲೇರಿ ರಾಮು, ಮೊದಲಿನಿಂದಲೂ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಏರುಪೇರುಗಳು ಸಾಮಾನ್ಯವಾಗಿದ್ದರೂ ಇದೀಗ ಮೈತ್ರಿ ಮಾಡಿಕೊಂಡಿರುವುದರಿಂದ ತಾವೂ ಧರ್ಮಪಾಲನೆಯನ್ವಯ ವರಿಷ್ಠರ ಸೂಚನೆ ಮೇರೆಗೆ ಕೆಲಸ ಮಾಡಬೇಕಿದೆ. ಇದನ್ನು ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಅವರೂ ಅರಿತು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳಬೇಕಿದೆ ಎಂದರು.
ಸಭೆಯಲ್ಲಿ ಮುಖಂಡರಾದ ರಾಮರಾಜು, ಬಣಕನಹಳ್ಳಿ ನಟರಾಜ್‌, ರಾಜೇಶ್‌ ಮತ್ತಿತರರು ಹಾಜರಿದ್ದರು.

ಏ.2ರಂದು ತಾಲೂಕು ಮಟ್ಟದ ಸಭೆ: ಸಭೆಯಲ್ಲಿ ಬಂದ ಅಭಿಪ್ರಾಯಗಳ ವರದಿಯನ್ನು ಪಕ್ಷದ ವರಿಷ್ಠರಿಗೆ ತಿಳಿಸಲಾಗುವುದು, ಕಾರ್ಯಕರ್ತರ ನಿರ್ಣಯ ಪಡೆಯುವುದಕ್ಕಾಗಿ ಏ.2ರಂದು ತಾಲೂಕು ಮಟ್ಟದ ಸಭೆಯನ್ನು ನಡೆಸುವುದಾಗಿ ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಬಾಬುಮೌನಿ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿಎಂ ಸೂಚನೆಯ ಮೇರೆಗೆ ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿದ್ದೆ ಅಷ್ಟೆ. ವರಿಷ್ಠರು ಹೇಳಿದಂತೆ ನಾವು ಕೇಳಬೇಕಿದೆ. ಶಾಸಕರ ಮನವೊಲಿಕೆ ನಮ್ಮಿಂದ ಅಸಾಧ್ಯವಾಗಿದ್ದು, ವರಿಷ್ಠರಿಗೆ ಒಪ್ಪಿಸಲಾಗಿದೆ. ಹೀಗಾಗಿ ಎಲ್ಲ ಸಮಸ್ಯೆಗಳೂ ಬಗೆಹರಿಯಲಿವೆ ಎಂದರು.

ಏ.2ರ ಸಭೆಯ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ. ಮೈತ್ರಿ ಸರ್ಕಾರ ಇರುವುದರಿಂದ ಕುಮಾರಣ್ಣ, ಸಿದ್ದರಾಮಣ್ಣ ಇಬ್ಬರೂ ನಮಗೆ ದೊಡ್ಡವರೇ ಎನ್ನುವುದನ್ನು ಮರೆಯುವಂತಿಲ್ಲ ಎಂದು ಎಚ್ಚರಿಸಿದರು.

ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಪಕ್ಷದ ಆದೇಶಗಳನ್ನು ಪಾಲಿಸಬೇಕಾಗಿದೆ. ಮೈತ್ರಿಯನ್ನು ಅನಿವಾರ್ಯ ಕಾರಣಗಳಿಗೆ ಮಾಡಿಕೊಳ್ಳಲಾಗಿದೆ. ಅದರ ಪಾಲನೆ ನಮ್ಮ ಕರ್ತವ್ಯ. ಒಂದು ವೇಳೆ ಉಲ್ಲಂಘಿಸಿದರೆ ಮುಲಾಜಿಲ್ಲದೆ ಉಚ್ಚಾಟನೆ ಮಾಡಿ.
-ಪುಟ್ಟರಾಜು, ಜೆಡಿಎಸ್‌ ಮುಖಂಡ

ನಮ್ಮ ಮತ್ತು ಕೆಎಚ್‌ಎಂ ನಡುವೆ ಭಿನ್ನಾಭಿಪ್ರಾಯಗಳು ಸಾಕಷ್ಟು ಇವೆ. ವರಿಷ್ಠರ ಸೂಚನೆ ಮೇರೆಗೆ ಅವೆಲ್ಲವನ್ನೂ ಬದಿಗಿಟ್ಟು, ಕೆಲಸ ಮಾಡಿದರೆ ಮೈತ್ರಿ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಶಾಸಕರನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ. ಅವರ ಮನವೊಲಿಸಿ ಕೆಲಸ ಮಾಡೋಣ.
-ಡಾ.ರಮೇಶ್‌, ಜೆಡಿಎಸ್‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next