Advertisement

ಪಾಲಿಕೆ ಉಪ ಚುನಾವಣೆಗೂ ಮೈತ್ರಿ ಅಭ್ಯರ್ಥಿಗಳು ಕಣಕ್ಕೆ

12:42 AM May 07, 2019 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎರಡು ವಾರ್ಡ್‌ಗಳಿಗೆ ಮೇ 29ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಮೈತ್ರಿ ಅಭ್ಯರ್ಥಿಗಳು ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

Advertisement

ಇಬ್ಬರು ಪಾಲಿಕೆ ಸದಸ್ಯರ ಅಕಾಲಿಕ ಮರಣದಿಂದಾಗಿ ಕಾವೇರಿಪುರ ಹಾಗೂ ಸಗಾಯಪುರ ವಾರ್ಡ್‌ಗಳ ಪಾಲಿಕೆ ಸದಸ್ಯ ಸ್ಥಾನಗಳು ತೆರವಾಗಿದ್ದು, ಮೇ 29ರಂದು ಎರಡೂ ವಾರ್ಡ್‌ಗಳಿಗೆ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಆ ಹಿನ್ನೆಲೆಯಲ್ಲಿ ಎರಡೂ ವಾರ್ಡ್‌ಗಳನ್ನು ಹಂಚಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ನಿರ್ಧರಿಸಿವೆ. ಅದರಂತೆ ಎರಡೂ ವಾರ್ಡ್‌ಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎರಡೂ ಪಕ್ಷಗಳ ನಾಯಕರು ನಿರ್ಧರಿಸಿದ್ದು, ಅಧಿಕೃತ ಘೋಷಣೆ ಬಾಕಿಯಿದೆ.

ಹೃದಯಾಘಾತದಿಂದ ಮೃತಪಟ್ಟಿದ್ದ ಕಾವೇರಿಪುರ ವಾರ್ಡ್‌ ಸದಸ್ಯೆ ರಮೀಳಾ, ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಸಗಾಯಪುರದ ಪಾಲಿಕೆ ಸದಸ್ಯ ಏಳುಮಲೈ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಸದಸ್ಯರಾಗಿದ್ದರು. ಹೀಗಾಗಿ ಕಾವೇರಿಪುರವನ್ನು ಜೆಡಿಎಸ್‌ ಹಾಗೂ ಸಗಾಯಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಇದರ ನಡುವೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯುವುದರಿಂದ ಮೈತ್ರಿ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆಯಿದೆ.

ಅಭ್ಯರ್ಥಿಗಳ ಆಯ್ಕೆ ಕಸರತ್ತು: ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಟಿಕೆಟ್‌ ಪಡೆಯಲು ಆಕಾಂಕ್ಷಿಗಳು ಪ್ರಮುಖ ನಾಯಕರ ಹಿಂದೆ ಬಿದ್ದಿದ್ದಾರೆ. ಅದರಂತೆ ಕಾವೇರಿಪುರದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಯ್ಕೆಯ ಹೊಣೆಯನ್ನು ವರಿಷ್ಠರು ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಅವರಿಗೆ ವಹಿಸಿದ್ದಾರೆ.

Advertisement

ಕಾವೇರಿಪುರ ವಾರ್ಡ್‌ ಒಬಿಸಿ-ಎ (ಮಹಿಳೆ) ಮೀಸಲಾಗಿದೆ. ಆ ಹಿನ್ನೆಲೆಯಲ್ಲಿ ರಮೀಳಾ ಅವರ ಸಂಬಂಧಿಕರು ಸೇರಿ ಸ್ಥಳೀಯ ಕಾರ್ಯಕರ್ತರಲ್ಲಿ ಕೆಲವರು ಟಿಕೆಟ್‌ ಪಡೆಯಲು ಕಸರತ್ತು ನಡೆಸಿದ್ದು, ಎರಡು ದಿನಗಳಲ್ಲಿ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಲು ಜೆಡಿಎಸ್‌ ಮುಂದಾಗಿದೆ.

ಇನ್ನು ಸಗಾಯಪುರ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಏಳುಮಲೈ ಅವರ ಸಹೋದರರಲ್ಲಿ ಒಬ್ಬರಿಗೆ ಟಿಕೆಟ್‌ ನೀಡುವ ಬಗ್ಗೆ ಕಾಂಗ್ರೆಸ್‌ ಮುಖಂಡರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಮಾಜಿ ಪಾಲಿಕೆ ಸದಸ್ಯೆ ಮಾರಿಮುತ್ತು ಸಹ ಟಿಕೆಟ್‌ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಪಕ್ಷ ನಾಯಕರು ಶೀಘ್ರದಲ್ಲಿಯೇ ಸಭೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.

ಆಡಳಿತ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರ: ಬಿಬಿಎಂಪಿ 198 ಸದಸ್ಯರ ಪೈಕಿ ಬಿಜೆಪಿ 101, ಕಾಂಗ್ರೆಸ್‌ 75, ಜೆಡಿಎಸ್‌ 14 ಹಾಗೂ ಪಕ್ಷೇತರರು 6 ಸದಸ್ಯರಿದ್ದಾರೆ. ಎರಡು ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುಣಾವಣೆಯಲ್ಲಿ ಬಿಜೆಪಿ ಎರಡೂ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದರೆ, ಸಂಖ್ಯಾಬಲ 103ಕ್ಕೆ ಏರಲಿದೆ. ಅದೇ ರೀತಿ ಮೈತ್ರಿ ಪಕ್ಷದ ಬಲವೂ ಕಡಿಮೆಯಾಗಲಿದೆ. ಆಗ ಮೇಯರ್‌ ಸ್ಥಾನಕ್ಕೆ ಸಂಖ್ಯಾಬಲದ ಲೆಕ್ಕಚಾರ ಶುರುವಾಗಲಿದ್ದು, ಕೊನೆಯ ಸಾಲಿನ ಮೇಯರ್‌ ಸ್ಥಾನ ಪಡೆಯಲು ಅನುಕೂಲವಾಲಿದೆ.

ಪಕ್ಷದ ವರಿಷ್ಠರು ಕಾವೇರಿಪುರ ವಾರ್ಡ್‌ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ತಮಗೆ ನೀಡಿದ್ದಾರೆ. ಅದರಂತೆ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಸೂಕ್ತ ಅಭ್ಯರ್ಥಿಯನ್ನು ನೇಮಿಸಲಾಗುವುದು.
-ಆರ್‌.ಪ್ರಕಾಶ್‌, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next