Advertisement

ಅಪೌಷ್ಟಿಕತೆ ನಿವಾರಣೆಗೆ ಆರೈಕೆ ತಂತ್ರ

08:55 PM Jul 14, 2021 | Team Udayavani |

ವೀರೇಂದ್ರ ನಾಗಲದಿನ್ನಿ

Advertisement

 ಗದಗ: ಸಂಭಾವ್ಯ ಕೋವಿಡ್‌-19 ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಲವು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ.

ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆಗೆ ಜಿಲ್ಲಾಡಳಿತ ಕೈಗೊಂಡು ಕ್ರಮ ಫಲಪ್ರಧವಾಗಿದೆ. ಮಕ್ಕಳ ದೈಹಿಕ ತೂಕದಲ್ಲಿ ಅಲ್ಪಸ್ವಲ್ಪ ಸುಧಾರಣೆ ಕಂಡು ಬರುವುದರೊಂದಿಗೆ ಅವರ ಪೋಷಕರಲ್ಲಿ ಜಾಗೃತಿ ಹೆಚ್ಚಿಸಿದೆ. ಜಿಲ್ಲೆಯಲ್ಲಿ 13,909 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ 243 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಂತಹ ಮಕ್ಕಳಿಗೆ ಬಹುಬೇಗ ಕೋವಿಡ್‌ ಸೋಂಕು ತಗುಲುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಪೌಷ್ಟಿಕ ಮಕ್ಕಳ ಬಲವರ್ದನೆಗೆ ಜಿಲ್ಲಾಡಳಿತ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ. ಜಿಲ್ಲೆಯ ಗಜೇಂದ್ರಗದ ಹೊರತಾಗಿ 6 ತಾಲೂಕುಗಳಲ್ಲಿ ತಲಾವೊಂದು “ಪೌಷ್ಟಿಕ ಮಕ್ಕಳ ವಿಶೇಷ ಶಿಬಿರ’ ಆಯೋಜಿಸಿದೆ. ಒಟ್ಟು 243 ಅಪೌಷ್ಟಿಕ ಮಕ್ಕಳಲ್ಲಿ 123 ಮಕ್ಕಳನ್ನು ಅವರ ತಾಯಂದಿರೊಂದಿಗೆ 14 ದಿನಗಳ ಕಾಲ ವಿಶೇಷ ಶಿಬಿರಕ್ಕೆ ಸ್ಥಳಾಂತರಿಸಿ, ಪೌಷ್ಟಿಕ ಆಹಾರ ಹಾಗೂ ಅಗತ್ಯ ಔಷಧಿಗಳೊಂದಿಗೆ ಆರೈಕೆ ಮಾಡುತ್ತಿದೆ.

ಅಪೌಷ್ಟಿಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದು ಶಿಬಿರದ ಉದ್ದೇಶವಾಗಿದೆ. ಮಕ್ಕಳಲ್ಲಿ ಹೆಚ್ಚಿದ ತೂಕ: ಜಿಲ್ಲೆಯ ವಿವಿಧೆಡೆ ಸುಸಜ್ಜಿತ ವಸತಿ ನಿಲಯಗಳಲ್ಲಿ “ಪೌಷ್ಟಿಕ ಮಕ್ಕಳ ವಿಶೇಷ ಶಿಬಿರ’ಗಳನ್ನು ನಿರ್ವಹಿಸಲಾಗುತ್ತಿದೆ. ಅಪೌಷ್ಟಿಕ ಮಕ್ಕಳ ದೈಹಿಕ ತೂಕ ಹೆಚ್ಚಿಸಲು ಸರಕಾರ ನಿರ್ದೇಶಿತ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿ ಮಗು ಮಲಗುವವರೆಗೆ 10 ಬಾರಿ ಪೌಷ್ಟಿಕ ಆಹಾರ ಮತ್ತು ಎರಡು ಬಾರಿ ಹಾಲು ನೀಡಲಾಗುತ್ತಿದೆ. ಜೊತೆಗೆ ಬಾಳೆ ಹಣ್ಣು ಮತ್ತು ಮೊಟ್ಟೆ, ಕ್ಯಾಲ್ಸಿಯಂ, ಮಲ್ಟಿ ವಿಟಾಮಿನ್‌ ಪೌಡರ್‌, ಪ್ರೊಟಿನ್‌ ಪೌಡರ್‌ ಹಾಗೂ ಜಿಂಕೋವಿಟ್‌ ಪೌಡರ್‌ ಒದಗಿಸಲಾಗುತ್ತದೆ. ಶಿಬಿರದಲ್ಲಿ ನಿಯಮಿತವಾಗಿ ಪೌಷ್ಟಿಕ ಆಹಾರದ ಜೊತೆಗೆ ಸರಳ ಚಟುವಟಿಕೆಗಳು ಅವರ ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಿವೆ.

ಬಣ್ಣ ಬಳಸಿ ಮಕ್ಕಳಿಂದ ಚಿತ್ರ ಬಿಡುಸುವುದು, ಆಕೃತಿಗಳನ್ನು ಬರೆಯುವುದು ಹಾಗೂ ಬಣ್ಣದಲ್ಲಿ ಅಂಗೈ, ತರಕಾರಿ ಅದ್ದಿ ಹಚ್ಚೆ ಒತ್ತುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳಲ್ಲಿ ಹೊಸ ಅನುಭೂತಿ ಮೂಡಿಸುತ್ತವೆ. ಜೊತೆಗೆ ನಿರೀಕ್ಷೆಯಂತೆ ಆಹಾರ ಸೇವಿಸುತ್ತವೆ. ಮಕ್ಕಳ ದೈನಂದಿನ ಜೀವನ ಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆಯಿಂದ 14 ದಿನಗಳ ಶಿಬಿರದಲ್ಲಿರುವ ಮಕ್ಕಳಲ್ಲಿ ಸರಾಸರಿ 400 ಗ್ರಾಂ ತೂಕ ಹೆಚ್ಚಿದೆ ಎನ್ನುತ್ತಾರೆ ಗದಗ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಗಿರಿಜಾ ದೊಡ್ಡಮನಿ. ಮಕ್ಕಳ ಪೋಷಕರಿಗೆ ತರಬೇತಿ: ಮಕ್ಕಳೊಂದಿಗೆ ಇರುವ ಪೋಷಕರಿಗೆ ಪೌಷ್ಟಿಕ ಆಹಾರಗಳ ಮಹತ್ವ, ಅವುಗಳ ಬಳಕೆ ಹಾಗೂ ಸಿರಿ ಧಾನ್ಯಗಳನ್ನು ಬಳಸಿ ಮನೆಯಲ್ಲೇ ತಯಾರಿಸಬಹುದಾದ ವಿವಿಧ ಬಗೆಯ ಅಡುಗೆಗಳ ಬಗ್ಗೆ ತರಬೇತಿ ನೀಡಲಾಗಿದೆ. ಮಕ್ಕಳ ಮಾನಸಿಕ ಸ್ಥಿತಿ ಮತ್ತು ಆಹಾರ ಒದಗಿಸುವ ರೀತಿಯನ್ನು ಮನದಟ್ಟು ಮಾಡಲಾಗಿದೆ.

Advertisement

ಶಿಬಿರದಲ್ಲಿ ನೀಡಲಾದ ಸಲಹೆ, ಸೂಚನೆಗಳನ್ನು ನಿರಂತರ ಪಾಲಿಸಿದ್ದಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಶಾಶ್ವತವಾಗಿ ದೂರವಾಗಲಿದೆ ಎನ್ನುತ್ತಾರೆ ತಜ್ಞರು.

Advertisement

Udayavani is now on Telegram. Click here to join our channel and stay updated with the latest news.

Next