ನಮ್ಮ ಫೇಸ್‌ಬುಕ್ ಖಾತೆಗಳಲ್ಲಿ ರಾಜಕೀಯ ಪ್ರೇರಿತ ಪೋಸ್ಟ್‌ಗಳನ್ನು ಪ್ರಕಟಿಸಿದರೆ ಏನಾಗುತ್ತೆ? ಈ ಪ್ರಶ್ನೆಗೆ “ಮತ್ತೇನಾಗುತ್ತೆ? ಪೊಲೀಸರು ಬಂದು ವಿಚಾರಣೆ ನಡೆಸುತ್ತಾರೆ’ ಎಂದು ಯಾರಾದರೂ ಉತ್ತರಿಸಬಹುದು. ಆದರೆ, ಒಂದ್ನಿಮಿಷ ನಿಲ್ಲಿ! ಪೊಲೀಸರು ಬರ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರಿಗೂ ಮುಂಚೆ ಫೇಸ್‌ಬುಕ್ ಸಂಸ್ಥೆಯ ಅಧಿಕಾರಿಗಳೇ ನಿಮ್ಮ ಮನೆಗೆ ಬರಬಹುದು!
ಏಕೆಂದರೆ, ದಿಲ್ಲಿಯ ಯುವಕನೊಬ್ಬನಿಗೆ ಇಂಥದ್ದೊಂದು ಅನುಭವ ಆಗಿದೆ. ಆ ದಿಲ್ಲಿ ಹುಡುಗ ಫೇಸ್‌ಬುಕ್‌ನಲ್ಲಿ ರಾಜಕೀಯ ಪ್ರೇರಿತ ಬರಹವೊಂದನ್ನು ಹಾಕಿದ್ದನೆಂದು ಹೇಳಲಾಗಿದ್ದು, ಅದರ ಜಾಡು ಹಿಡಿದು ಬಂದ ಫೇಸ್‌ಬುಕ್ ಅಧಿಕಾರಿಗಳದ್ದೆನ್ನಲಾದ ತಂಡವೊಂದು ಆತನ ಮನೆಗೆ ಭೇಟಿ ನೀಡಿ, ಆ ಯುವಕನ ಆಧಾರ್ ಕಾರ್ಡ್, ಇನ್ನಿತರ ದಾಖಲೆಗಳನ್ನು ಪರಿಶೀಲಿಸಿ ತೆರಳಿದೆ.
ಇದರ ಸುಳಿವು ಪಡೆದ ಐಎಎನ್‌ಎಸ್ ಸುದ್ದಿಸಂಸ್ಥೆ, ಆ ಯುವಕನನ್ನು ಸಂಪರ್ಕಿಸಿದಾಗ ಈ ಬೆಳವಣಿಗೆ ಬಗ್ಗೆ ಆತ ದಿಗ್ಭ್ರಮೆ ವ್ಯಕ್ತಪಡಿಸಿದ್ದಾನೆ.
ಪಾಸ್‌ಪೋರ್ಟ್ ವಿಳಾಸ ಪರಿಶೀಲನೆಗೆ ಆಗಮಿಸುವ ಪೊಲೀಸರಂತೆ ಫೇಸ್‌ಬುಕ್ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದನ್ನು ವಿವರಿಸಿರುವ ಆತ, ಈ ಅಧಿಕಾರಿಗಳು ಪೊಲೀಸರ ಅಥವಾ ಸರಕಾರ ಪರವಾಗಿ ಬರುತ್ತಾರೆಯೇ, ಸರಕಾರ ಅವರಿಗೆ ಹಾಗೆ ಪರಿಶೀಲನೆ ನಡೆಸಲು ಅನುಮತಿ ಕೊಟ್ಟಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾನೆ.
ಇದನ್ನು ತನ್ನ ವರದಿಯಲ್ಲಿ ಉಲ್ಲೇಖೀಸಿರುವ ಸುದ್ದಿಸಂಸ್ಥೆ, “ಇವೇ ಪ್ರಶ್ನೆಗಳನ್ನು ಇ-ಮೇಲ್ ಮೂಲಕ ಫೇಸ್‌ಬುಕ್‌ಗೆ ಕಳುಹಿಸಲಾಗಿದ್ದು, ಇದಕ್ಕೆ ಫೇಸ್‌ಬುಕ್ ಉತ್ತರಿಸಿಲ್ಲ’ ಎಂದಿರುವುದಾಗಿ “ನ್ಯೂಸ್ 18′ ವರದಿ ಮಾಡಿದೆ.
ಅದೇನೇ ಇರಲಿ. ಸದ್ಯಕ್ಕೆ ರಾಜಕೀಯ ಪ್ರೇರಿತ ವದಂತಿಗಳನ್ನು ಹರಡುವುದನ್ನು ತಡೆಯುವ ಒತ್ತಡದಲ್ಲಿ ಸಿಲುಕಿರುವ ಫೇಸ್‌ಬುಕ್, ಹೀಗೊಂದು ಹೊಸ ಕ್ರಮವನ್ನು ಕೈಗೊಂಡಿರಬಹುದು ಎಂದು ಸುದ್ದಿಸಂಸ್ಥೆ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.