ಹೊಸದಿಲ್ಲಿ: ನೀವು ಹೊಸ ಐಷಾರಾಮಿ ಕಾರು, ಬೈಕ್ ಅಥವಾ ಮನೆ ಖರೀದಿಸಿದ್ದೀರಾ? ಹೀಗೆ ಕೊಂಡ ವಾಹನದ ಪಕ್ಕ ನಿಂತು ಫೋಟೋ ಕ್ಲಿಕ್ಕಿಸಿದ್ದೀರಾ? ಆ ಫೋಟೋವನ್ನು ಫೇಸ್‌ಬುಕ್, ಟ್ವಿಟರ್ ಇಲ್ಲವೇ ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿ ಖುಷಿಪಡುತ್ತಿದ್ದೀರಾ? ಹಾಗಾದರೆ ಆದಾಯ ತೆರಿಗೆ ಅಧಿಕಾರಿಗಳನ್ನು ಎದುರು ಗೊಳ್ಳಲು ತಯಾರಾಗಿ. ಅವರು ನಿಮ್ಮ ಖುಷಿ ಕಿತ್ತುಕೊಳ್ಳಲು ಬರುತ್ತಿದ್ದಾರೆ!
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಬಹುತೇಕರು ತಮ್ಮ ಅಸಲಿ ಆದಾಯವನ್ನು ಮರೆಮಾಚಿ, ಬರೀ ಖರ್ಚುಗಳನ್ನೇ ತೋರಿಸಿ, ಕಡಿಮೆ ಸೇವಿಂಗ್ಸ್ ಮುಂದಿಟ್ಟು ತೆರಿಗೆ ಇಲಾಖೆ ಯನ್ನು ವಂಚಿಸುತ್ತಾರೆ. ಆದರೆ ಹತ್ತಿಪ್ಪತ್ತು ಲಕ್ಷ ರೂ. ಕೊಟ್ಟು ಗಾಡಿ, ಇಲ್ಲವೇ ಕೋಟ್ಯಂತರ ರೂ. ಖರ್ಚು ಮಾಡಿ ಮನೆ ಖರೀದಿಸುತ್ತಾರೆ. ಮತ್ತೆ ತಾವು ಮನೆ, ಗಾಡಿ ಕೊಂಡಿ ರುವ ವಿಷಯ ಸ್ನೇಹಿತರು, ಸಂಬಂಧಿಗಳಿಗೆ ತಿಳಿಯುವುದು ಹೇಗೆ? ತತ್‌ಕ್ಷಣ ಮನೆ, ಗಾಡಿಯೊಂದಿಗೆ ಫೋಟೋ ತೆಗೆದು
ಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡುತ್ತಾರೆ. ಹೀಗೆ ಸರಕಾರಕ್ಕೆ ತೆರಿಗೆ ವಂಚಿಸಿ ತೆರೆಮರೆಯಲ್ಲಿ ಐಷಾರಾಮಿ ಜೀವನ ನಡೆಸುವ “ಕಪ್ಪು ಕುಳ’ಗಳನ್ನು ಪತ್ತೆ ಮಾಡಲೆಂದೇ ಆದಾಯ ತೆರಿಗೆ ಇಲಾಖೆ “ಪ್ರಾಜೆಕ್ಟ್ ಇನ್‌ಸೈಟ್’ ಶುರು ಮಾಡಲಿದೆ.
ಇನ್ನು ಮುಂದೆ ತಪ್ಪು ಲೆಕ್ಕ ತೋರಿಸಿ ಆದಾಯ ತೆರಿಗೆ ಪಾವತಿಸಿದ್ರೂ ನೆಮ್ಮದಿಯಿಂದ ಕೂರು ವಂತಿಲ್ಲ. ಕೆಲವೇ ಲಕ್ಷ ರೂ. ತೆರಿಗೆ ಪಾವತಿಸಿ, ಐಷಾರಾಮಿ ಜೀವನ ನಡೆಸುತ್ತಿರುವ ತೆರಿಗೆ ವಂಚಕರನ್ನು ಹಿಡಿಯಲು ಈಗ ತೆರಿಗೆ ಅಧಿಕಾರಿ ಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಇತ್ಯಾದಿ ಸಾಮಾಜಿಕ ಜಾಲತಾಣಗಳಿಗೂ ನುಗ್ಗಲಿದ್ದಾರೆ. ಮುಂದಿನ ತಿಂಗಳಿಂದಲೇ ಈ ಯೋಜನೆ ಆರಂಭವಾಗಲಿದ್ದು, ವ್ಯಕ್ತಿಯೊಬ್ಬನ ಘೋಷಿತ ಆದಾಯಕ್ಕೂ, ಖರ್ಚಿನ ವಿಚಾರಕ್ಕೂ ತಾಳೆಯಾಗುತ್ತಿದೆಯೇ ಎಂಬುದನ್ನು ತೆರಿಗೆ ಇಲಾಖೆ ಲೆಕ್ಕಹಾಕಲಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಲಾಗುತ್ತದೆ.
ಪ್ರಾಜೆಕ್ಟ್ ಇನ್‌ಸೈಟ್: ಪ್ರಾಜೆಕ್ಟ್ ಇನ್‌ಸೈಟ್ ಹೆಸರಲ್ಲಿ ಈ ಯೋಜನೆ ಜಾರಿಯಾಗಲಿದ್ದು, ವರ್ಚುವಲ್ ಮಾಹಿತಿಗಳನ್ನು ಸಂಗ್ರಹಿಸಲಿದೆ. ಇದಕ್ಕಾಗಿ ಸಾಫ್ಟ್ವೇರ್ ಒಂದನ್ನು ರೂಪಿಸಲು ತೆರಿಗೆ ಇಲಾಖೆ ಕಳೆದ ವರ್ಷವೇ ಎಲ್ ಆ್ಯಂಡ್ ಟಿ
ಇನ್ಫೋಟೆಕ್ ಜತೆಗೆ ಸಹಿ ಹಾಕಿತ್ತು. ಸದ್ಯ ಯೋಜನೆ ಆರಂಭಿಕ ಹಂತದಲ್ಲಿದ್ದು, ಸಾಫ್ಟ್ ವೇರ್‌ನ ಬೆಟಾ ಆವೃತ್ತಿ ಪರೀಕ್ಷೆಯಲ್ಲಿದೆ. ಖರ್ಚು, ವೆಚ್ಚ, ಹಣದ ಹರಿವಿನ ಬಗ್ಗೆ ಈ ಸಾಫ್ಟ್rವೇರ್ ಮಾಹಿತಿ ಕಲೆ ಹಾಕಲಿದ್ದು, ಕಪ್ಪು ಹಣ ವಿರುದ್ಧ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲಿದೆ.
ಆದಾಯ ತೆರಿಗೆ ಸಲ್ಲಿಕೆ, ರಿಟರ್ನ್ಸ್, ಟಿಡಿಎಸ್/ ಟಿಸಿಎಸ್ ಹೇಳಿಕೆಗಳನ್ನು ಪಡೆಯಲು ಸರಕಾರ ಅನುವು ಮಾಡಿಕೊಟ್ಟಿದೆ. ಇದರಿಂದ ಯೋಜನೆಯಡಿ ಸಾಫ್ಟ್ ವೇರ್‌ಗೆ ನೇರವಾಗಿ ಮಾಹಿತಿಗಳು ಲಭ್ಯವಾಗಲಿವೆ. ಜತೆಗೆ ಸ್ವಯಂಚಾಲಿತವಾಗಿ ನೋಟಿಸ್ ನೀಡಿಕೆ, ಅದನ್ನು ಹಿಂಬಾಲಿಸುವುದರ ಕುರಿತಾಗಿ ಸಿಎಂಸಿಪಿಸಿ ಹೆಸರಿನ ನಿರ್ವಹಣ ವ್ಯವಸ್ಥೆ ಯೊಂದನ್ನೂ ಸ್ಥಾಪಿಸಲಾಗುತ್ತದೆ.