ಬೆಂಗಳೂರು: ಕಾಪಿರೈಟ್ಸ್ ವಿಚಾರದಲ್ಲಿ ಸ್ಯಾಂಡಲ್ ವುಡ್ ನಟ,ನಿರ್ಮಾಪಕ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ(Rakshit Shetty) ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಾಣದ ʼಬ್ಯಾಚುಲರ್ ಪಾರ್ಟಿʼ(Bachelor party) ಚಿತ್ರದಲ್ಲಿ ಅನುಮತಿಯಿಲ್ಲದೆ ಎರಡು ಹಾಡುಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಅವರ ವಿರುದ್ಧ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ಎನ್ನುವವರು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಭಿಜಿತ್ ಮಹೇಶ್ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ ‘ಬ್ಯಾಚುಲರ್ ಪಾರ್ಟಿ’ ಇದೇ ವರ್ಷದ ಜ.26 ರಂದು ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ‘ಗಾಳಿಮಾತು’ ಹಾಗೂ ‘ನ್ಯಾಯ ಎಲ್ಲಿದೆ’ ಎಂಬ ಹಾಡುಗಳನ್ನು ಅನುಮತಿ ಇಲ್ಲದೇ ಕದ್ದಿರುವ ಆರೋಪ ರಕ್ಷಿತ್ ಶೆಟ್ಟಿ ಮೇಲೆ ಕೇಳಿ ಬಂದಿದೆ.
ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿತ್ತು. ಈ ಹಿಂದೆ ನವೀನ್ ಕುಮಾರ್ ಅವರ ಜೊತೆ ಹಾಡುಗಳ ಬಗ್ಗೆ ಮಾತುಕತೆ ನಡೆಸಲಾಗಿತ್ತು. ನವೀನ್ ಹಾಡುಗಳ ಕಾಪಿರೈಟ್ಸ್ (Copy Rights) ಪಡೆದು ಮಾರಾಟ ಮಾಡುವ ಬ್ಯುಸಿನೆಸ್ ಮೆನ್ ಆಗಿದ್ದರು. ಈ ವಿಚಾರದಲ್ಲಿ ಮಾತುಕತೆ ನಡೆದ ಹಿನ್ನೆಲೆಯಲ್ಲಿ ಹಾಡುಗಳ ಖರೀದಿ ವಿಚಾರವೂ ಅಲ್ಲಿಗೆ ನಿಂತಿತ್ತು.
ಆದರೆ ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕನ್ನು ರಕ್ಷಿತ್ ಶೆಟ್ಟಿ ಖರೀದಿ ಮಾಡದೆ ಹಾಡುಗಳನ್ನು ಸಿನಿಮಾದಲ್ಲಿ ಬಳಸಲಾಗಿದೆ ಎಂದು ನವೀನ್ ಆರೋಪಿಸಿದ್ದಾರೆ.
ರಕ್ಷಿತ್ ಶೆಟ್ಟಿ ಅವರಿಗೆ ಕಾಪಿರೈಟ್ಸ್ ವಿವಾದ ಎದುರಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ʼಕಿರಿಕ್ ಪಾರ್ಟಿʼ(Kirik Party) ಸಿನಿಮಾದಲ್ಲಿ ರವಿಚಂದ್ರನ್ (V. Ravichandran) ಅವರ ʼಶಾಂತಿ ಕ್ರಾಂತಿʼ ಹಾಡನ್ನು ಅನುಮತಿಯಿಲ್ಲದೆ ಬಳಸಿ ಸಂಕಷ್ಟಕ್ಕೆ ಸಿಲುಕಿದ್ದರು.
ನಟ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ನಿರ್ಮಿಸಿದ್ದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್, ನಟಿ ಸಿರಿ ರವಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.