Advertisement

ಅತಿಥಿ ಶಿಕ್ಷಕರ ವೇತನಕ್ಕೆ ಒಕ್ಕೊರಲ ಆಗ್ರಹ

10:09 AM Jun 19, 2019 | Team Udayavani |

ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 130 ಅತಿಥಿ ಶಿಕ್ಷಕರ ಪೈಕಿ ಕೇವಲ 30 ಶಿಕ್ಷಕರಿಗೆ ಮಾತ್ರ ಕಳೆದ ವರ್ಷ ವೇತನ ಬಿಡುಗಡೆ ಮಾಡಲಾಗಿದೆ. ಉಳಿದ ಶಿಕ್ಷಕರಿಗೆ ಇದುವರೆಗೆ ಹಣ ಬಂದಿಲ್ಲ. ಅಧಿಕಾರಿಗಳನ್ನು ಕೇಳಿದರೆ ಅವರಿಂದ ಬೇಜವಾಬ್ದಾರಿ ಉತ್ತರ ಬರುತ್ತಿದೆ ಎಂದು ಸದಸ್ಯರು ಪಕ್ಷಭೇದ ಮರೆತು ಶಿಕ್ಷಣ ಇಲಾಖೆ ಉಪನಿರ್ದೇಶಕರ ವಿರುದ್ಧ ಹರಿಹಾಯ್ದ ಪ್ರಸಂಗ ಮಂಗಳವಾರ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

ವಿಷಯ ಪ್ರಸ್ತಾಪಿಸಿದ ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯ ರಮೇಶ ಗೋರಲ್ ಮತ್ತು ಸದಸ್ಯ ಜಿತೇಂದ್ರ ಮಾದರ, ಶಿಕ್ಷಣ ಇಲಾಖೆ ಅಧಿಕಾರಿಗಳ ತಪ್ಪಿನಿಂದ ಅತಿಥಿ ಶಿಕ್ಷಕರಿಗೆ ವೇತನ ಸಿಗುತ್ತಿಲ್ಲ. ಇದರಿಂದ ಸರಕಾರದಿಂದ ಬಂದ ಅನುದಾನ ಸಹ ಬಳಕೆಯಾಗದೆ ಮರಳಿ ಹೋಗುತ್ತಿದೆ ಎಂದು ಆರೋಪ ಮಾಡಿದರು. ಇದಕ್ಕೆ ಉಳಿದ ಸದಸ್ಯರು ಸಹ ದನಿಗೂಡಿಸಿದರು.

ಖಾನಾಪುರ ತಾಲೂಕಿನಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಅತಿಥಿ ಶಿಕ್ಷಕರು ಕೆಲಸ ಮಾಡಿದರೂ ಅವರಿಗೆ ವೇತನ ಬರುತ್ತಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರೂ ಪ್ರಯೋಜನ ಇಲ್ಲ. ಯಾವುದೂ ಅವರಿಗೆ ಸಮಸ್ಯೆಯಾಗಿ ಕಾಣುತ್ತಿಲ್ಲ. ಹೀಗಾದರೆ ಅತಿಥಿ ಶಿಕ್ಷಕರು ಹೇಗೆ ಶಾಲೆಗೆ ಬರಬೇಕು. ಮಕ್ಕಳಿಗೆ ಕಲಿಸಬೇಕು ಎಂದು ಪ್ರಶ್ನಿಸಿದರು.

ಸದಸ್ಯರ ಆರೋಪದಿಂದ ಅಸಮಾಧಾನಗೊಂಡ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕೆ.ವಿ. ತಾವೂ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಮೇಲಿಂದ ಮೇಲೆ ದೂರುಗಳನ್ನು ಕೇಳುತ್ತಲೇ ಇದ್ದೇವೆ. ಈ ಹಿನ್ನೆಲೆಯಲ್ಲಿ ಯಾವ-ಯಾವ ತಾಲೂಕಿನಲ್ಲಿ ಅನುದಾನ ಮರಳಿ ಹೋಗಿದೆ ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ಪರಿಶೀಲನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಂಡು ವರದಿ ನೀಡಬೇಕು. ಇಲ್ಲದಿದ್ದರೆ ಸೋಮವಾರದ ನಂತರ ನಿಮ್ಮ ಮೇಲೆ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಡಿಡಿಪಿಐ ಎ.ಬಿ. ಪುಂಡಲೀಕಗೆ ಎಚ್ಚರಿಕೆ ನೀಡಿದರು.

ಸದಸ್ಯರ ಸಲಹೆಯಂತೆ ಇನ್ನು ಮುಂದೆ ಅತಿಥಿ ಶಿಕ್ಷಕರಿಗೆ ಚೆಕ್‌ ಮೂಲಕ ವೇತನ ನೀಡುವುದು ಬೇಡ. ಅದರ ಬದಲಾಗಿ ಆನ್‌ಲೈನ್‌ ಮೂಲಕ ವೇತನ ನೀಡುವಂತೆ ಸಿಇಒ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಖಾನಾಪುರ ತಾಲೂಕಿನಲ್ಲಿ ಶಿಕ್ಷಣದ ವ್ಯವಸ್ಥೆ ಅಧೋಗತಿ ತಲುಪಿದೆ. ಅನೇಕ ಶಾಲೆಗಳಲ್ಲಿ ಕನ್ನಡ ಹಾಗೂ ಮರಾಠಿ ಶಿಕ್ಷಕರೇ ಇಲ್ಲ. ಶಿಕ್ಷಕರು ಶಾಲೆಗೆ ಬರುತ್ತಾರೋ ಇಲ್ಲವೇ ಎಂಬುದರ ಬಗ್ಗೆ ಯಾವ ಅಧಿಕಾರಿಗಳೂ ಪರಿಶೀಲನೆ ಮಾಡುತ್ತಿಲ್ಲ ಎಂದು ಸದಸ್ಯರು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಬಿ. ಪುಂಡಲೀಕ ಕೆಲವು ಕಡೆ ಶಿಕ್ಷಕರ ನಿಯೋಜನೆ ಮಾಡಲಾಗುತ್ತಿದೆ ಎಂದರು.

ಇದರಿಂದ ಕೋಪಗೊಂಡ ಸಿಇಒ ರಾಜೇಂದ್ರ ಅವರು ನಿಮ್ಮಷ್ಟಕ್ಕೇ ನೀವೇ ಶಿಕ್ಷಕರ ನಿಯೋಜನೆ ಮಾಡುವಂತಿಲ್ಲ. ಹಾಗೇನಾದರೂ ನಿಯೋಜನೆ ಮಾಡುವುದಿದ್ದರೆ ಮೊದಲು ಜಿಲ್ಲಾ ಪಂಚಾಯತ್‌ ಅನುಮೋದನೆ ಪಡೆದುಕೊಳ್ಳಬೇಕು ಎಂದು ಖಾರವಾಗಿಯೇ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next