Advertisement

ಎಚ್ಚರಿಕೆ ಅನಿವಾರ್ಯವಾಗಿತ್ತು; ಮತಯಂತ್ರಗಳ ಮೇಲೆ ವೃಥಾರೋಪ

02:36 PM Mar 02, 2018 | Sharanya Alva |

ವಿದ್ಯುನ್ಮಾನ ಮತಯಂತ್ರಗಳ ಸಾಚಾತನದ ಮೇಲೆ ಆಧಾರರಹಿತ ಆರೋಪಗಳನ್ನು ಮಾಡಿದರೆ, ಅನವಶ್ಯಕ ಅನುಮಾನಗಳನ್ನು ವ್ಯಕ್ತಪಡಿಸಿದರೆ ಅಥವಾ ಚರ್ಚೆಯಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿದರೆ ಜೈಲಿಗೆ ಹೋಗಲು ತಯಾರಿರಬೇಕು. ಇದು ಕರ್ನಾಟಕದ ವಿಧಾನಸಭೆ ಚುನಾವಣೆಯ ಪೂರ್ವಭಾವಿಯಾಗಿ ರಾಜ್ಯ ಚುನಾವಣಾ ಆಯೋಗ ನೀಡಿರುವ ಗಂಭೀರ ಎಚ್ಚರಿಕೆ. ಕಳೆದ ಕೆಲ ಸಮಯದಿಂದೀಚೆಗೆ ವಿಪಕ್ಷ ಗಳು ತಾವು ಸೋತ ಕಡೆಯಲ್ಲೆಲ್ಲ ಇದಕ್ಕೆ ಮತಯಂತ್ರಗಳನ್ನು ತಿರುಚಿದ್ದು ಕಾರಣ ಎಂದು ಆರೋಪಿಸುವ ಮೂಲಕ ಬಡಪಾಯಿ ಮತಯಂತ್ರಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಗಂಭೀರ ಎಚ್ಚರಿಕೆ ನೀಡಿದೆ ಹಾಗೂ ಈ ಅಪರಾಧಕ್ಕೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ ಎಂದಿದೆ. 

Advertisement

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆಯೋಗ ಎಚ್ಚರಿಕೆಯ ಜತೆಗೆ ಸವಾಲನ್ನೂ ಒಡ್ಡಿದೆ. ಆರೋಪ ಮಾಡಿ ಆದರೆ ಆರೋಪವನ್ನು ಸಾಬೀತುಮಾಡಿ ಎನ್ನುವುದೇ ಈ ಸವಾಲು. ಮತಯಂತ್ರ ಮತ್ತು ವಿವಿಪ್ಯಾಟ್‌ಗಳನ್ನು ಯಾವ ರೀತಿಯಲ್ಲೂ ತಿರುಚಲು ಸಾಧ್ಯವಿಲ್ಲ ಎನ್ನುವುದನ್ನು ಚುನಾವಣಾ ಆಯೋಗ ಹಲವು ಸಲ ಸಾಬೀತುಪಡಿಸಿ ತೋರಿಸಿದ್ದರೂ ಸೋತ ರಾಜ ಕೀಯ ಪಕ್ಷಗಳು ಮಾತ್ರ ತಮ್ಮ ಸೋಲಿನ ಹೊಣೆಯನ್ನು ಮತಯಂತ್ರಗಳ ಕುತ್ತಿಗೆಗೆ ಆ ಮೂಲಕ ಪರೋಕ್ಷವಾಗಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ತೆಗಳುವ ಚಾಳಿಯನ್ನು
ಮಾತ್ರ ಬಿಟ್ಟಿಲ್ಲ.

ಮತಯಂತ್ರಗಳ ವಿರುದ್ಧ ಜೋರಾಗಿ ಆರೋಪ ಕೇಳಿ ಬಂದದ್ದು ಕಳೆದ ವರ್ಷ ಮೇ ತಿಂಗಳಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದಾಗ. ಬಿಎಸ್‌ಪಿ, ಆಪ್‌, ಕಾಂಗ್ರೆಸ್‌, ಸಿಪಿಎಂ ಸೇರಿ ಸಕಲ ವಿಪಕ್ಷಗಳು ಮತ 
ಯಂತ್ರಗಳನ್ನು ತಿರುಚಿಯೇ ಬಿಜೆಪಿ ಗೆದ್ದಿದೆ ಎಂದು ಸಾರಾಸಗಟಾಗಿ ಆರೋಪ ಮಾಡಿದ್ದವು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದಾಗ ಚುನಾವಣಾ ಆಯೋಗ ವಿಪಕ್ಷಗಳಿಗೆ ಮತಯಂತ್ರಗಳನ್ನು ತಿರುಚಿ ತೋರಿಸಲು ಸವಾಲೊಡ್ಡಿತು.ಆದರೆ ಆಗಸ್ಟ್‌ನಲ್ಲಿ ನಡೆದ ತಿರುಚುವ ಪ್ರಾತ್ಯಕ್ಷಿಕೆ ಯಲ್ಲಿ ಮಾತ್ರ ಮತಯಂತ್ರಗಳ ಸಾಚಾತನದ ಕುರಿತು ಬೊಬ್ಬಿರಿದ ಯಾವ ಪಕ್ಷವೂ ಭಾಗವಹಿಸಲಿಲ್ಲ. ಭಾಗವಹಿಸಿದ ಎರಡು ಪಕ್ಷಗಳು ಬರೀ ಅವುಗಳ ಕಾರ್ಯನಿರ್ವಹಣೆಯನ್ನು ನೋಡಿ ತೃಪ್ತಿ ವ್ಯಕ್ತಪಡಿಸಿದ್ದವು. ಇದರಿಂದ ವಿಪಕ್ಷಗಳು ಆರೋಪಗಳು ಎಷ್ಟು ಟೊಳ್ಳು ಎಂದು ಜಗಜ್ಜಾಹೀರಾಗಿತ್ತು. ಆದರೆ ಇದರ ಹೊರತಾಗಿಯೂ ವಿಪಕ್ಷಗಳು ತಮ್ಮ ಚಾಳಿಯನ್ನು ಬಿಡಲಿಲ್ಲ. ಗುಜರಾತ್‌ ವಿಧಾನಸಭೆ ಸಂದರ್ಭದಲ್ಲೂ ಮತ್ತೆ ಇದೇ ರೀತಿಯ ಆರೋಪ ಕೇಳಿ ಬಂತು. ಇದೀಗ ಕರ್ನಾಟಕ ವಿಧಾನಸಭೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಎಲ್ಲ ಪಕ್ಷಗಳಿಗೆ ಮತಯಂತ್ರಗಳ ಮೇಲೆ ಅನುಮಾನ ಬರಲಾರಂಭಿಸಿದೆ. 

ಆಡಳಿತದಲ್ಲಿರುವ ಕಾಂಗ್ರೆಸ್‌ ಪಕ್ಷವಂತೂ ಕೆಲವು ತಿಂಗಳ ಹಿಂದೆಯೇ ಮತಯಂತ್ರಗಳನ್ನು ತಿರುಚುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ. ಅದರಲ್ಲೂ ಇದೀಗ ಗುಜರಾತ್‌ ಚುನಾವಣೆಯಲ್ಲಿ ಬಳಸಿದ ಮತಯಂತ್ರಗಳನ್ನು ತರಲಾಗಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಅಲ್ಲಿಯೇ ಮತಯಂತ್ರಗಳನ್ನು “ಫಿಕ್ಸ್‌’ ಮಾಡಿ ತರಲಾಗಿದೆ ಎಂಬರ್ಥದಲ್ಲಿ ಮಾತನಾಡುತ್ತಿವೆ. ಕೆಲವು ಮಾಧ್ಯಮಗಳಲ್ಲೂ ಈ ಕುರಿತು ಚರ್ಚೆ ನಡೆದಿರುವ ಹಿನ್ನೆಲೆಯಲ್ಲಿ ಆಯೋಗ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ವಿಶೇಷವೆಂದರೆ ಯಾವ ಪಕ್ಷವೂ ತಾನು ಗೆದ್ದ ಸಂದರ್ಭದಲ್ಲಿ ಮಾತ್ರ ಮತಯಂತ್ರಗಳ ಸಾಚಾತನವನ್ನು ಅನುಮಾನಿಸುವ ಗೋಜಿಗೆ ಹೋಗುವುದಿಲ್ಲ.

ಚುನಾವಣೆ ಪ್ರಜಾಪ್ರಭುತ್ವದ ಜೀವಾಳ. ಇದು ಅತ್ಯಂತ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ  ನಡೆಯಬೇಕೆನ್ನುವುದರಲ್ಲಿ ಎರಡು ಮಾತಿಲ್ಲ.
ಚುನಾವಣೆ ನಡೆಸುವ ಆಯೋಗವೂ ಟೀಕೆ ಮತ್ತು ವಿಮರ್ಶೆಗೆ ಅತೀತವಾಗಿಲ್ಲ. ಇದೊಂದು ಸ್ವಾಯತ್ತವಾದ ಸಾಂವಿಧಾನಿಕ ವ್ಯವಸ್ಥೆ. ಆಯೋಗದ ಯಾವುದೇ ಚಟುವಟಿಕೆಯಲ್ಲಿ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ.

Advertisement

ಚುನಾವಣೆ ಘೋಷಣೆಯಾದ ಬಳಿಕವಂತೂ ಸರಕಾರದಿಂದ ಹೆಚ್ಚಿನ ಅಧಿಕಾರ ಆಯೋಗಕ್ಕಿರುತ್ತದೆ. ಇದು ದೇಶದ ಪ್ರ ಜಾಪ್ರಭುತ್ವದ ಸೊಗಸು. ಆದರೆ ಕೆಲವು ಪಕ್ಷಗಳ ಸಮಯಸಾಧಕತನದ ಕ್ಷುಲ್ಲಕ ಬುದ್ಧಿಯಿಂದಾಗಿ ಆಯೋಗದ ವಿಶ್ವಾಸಾರ್ಹತೆಯೂ ಅನುಮಾನಕ್ಕೀಡಾಗಿರುವುದು ದುರದೃಷ್ಟಕರ. ಮತ ಚಲಾವಣೆ ಕ್ರಮಬದ್ಧವಾಗಿದೆ ಎನ್ನುವುದನ್ನು ಖಾತರಿಪಡಿಸುವ ಸಲುವಾಗಿ ವಿವಿಪ್ಯಾಟ್‌ ಎಂಬ ವ್ಯವಸ್ಥೆಯೂ ಇದೆ. ಈ ಸಲದ ಚುನಾವಣೆಯಲ್ಲಿ ಇದು ವ್ಯಾಪಕವಾಗಿ ಬಳಕೆಯಾಗಲಿದೆ. 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಲ್ಲ ಮತಯಂತ್ರಗಳಿಗೆ ವಿವಿಪ್ಯಾಟ್‌ ಜೋಡಿಸುವ ಗುರಿಯಿರಿಸಿಕೊಳ್ಳಲಾಗಿದೆ. ಇಷ್ಟೆಲ್ಲ ಮಾಡಿಯೂ ಮತಯಂತ್ರಗಳ ಮೇಲೆ ವೃಥಾರೋಪ ಮಾಡುತ್ತಿರುವಾಗ ಕಾನೂನು ಕ್ರಮದ ಎಚ್ಚರಿಕೆ ನೀಡುವುದು ಸರಿ. ಇದು ಪ್ರಶ್ನಿಸುವ ಮೂಲಭೂತ ಹಕ್ಕನ್ನೇ ದಮನಿಸಿದಂತೆ ಎನ್ನುವುದು ನಿಜವಾಗಿದ್ದರೂ ಆಧಾರರಹಿತವಾದ ಆರೋಪಗಳನ್ನು ಮಾಡುವ ಪಕ್ಷಗಳಿಗೆ ಲಗಾಮು ಹಾಕಲು ಈ ಎಚ್ಚರಿಕೆ ಅನಿವಾರ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next